

ಜಮ್ಮು: ಇಂದು ಬೆಳಗ್ಗೆ ಜಮ್ಮುವಿನ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನ ಉನ್ನತ ಕಮಾಂಡರ್ ಹಿಜ್ಬ್-ಉಲ್-ಮುಜಾಹಿದ್ದೀನ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಕಳೆದ ಕೆಲವು ದಿನಗಳಿಂದ ಭಾರತೀಯ ಸೇನೆ ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಒಂದೊಂದೇ ಉಗ್ರರನ್ನು ಹೊಡೆದುರುಳಿಸುತ್ತಲೇ ಬಂದಿದೆ. ಇದೀಗ ಹಿಜ್ಬುಲ್ ಕಮಾಂಡರ್ ಮಸೂದ್ ಸೇರಿದಂತೆ ಇಬ್ಬರು ಎಲ್ಇಟಿ ಭಯೋತ್ಪಾದಕರು ಹತರಾಗಿದ್ದಾರೆ.
ಇವರೆಲ್ಲಾ ಜಮ್ಮು ವಲಯದ ದೋಡಾ ಜಿಲ್ಲೆಗೆ ಸೇರಿದವರು. ಇವರೆಲ್ಲರೂ ಹತ್ಯೆಗೀಡಾಗಿರುವ ಹಿನ್ನೆಲೆಯಲ್ಲಿ ದೋಡಾ ಜಿಲ್ಲೆ ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತವಾಗಿವೆ. ಮಸೂದ್ ದೋಡಾ ಜಿಲ್ಲೆಯ ಕೊನೆಯ ಭಯೋತ್ಪಾದಕನಾಗಿದ್ದರಿಂದ ಈತನ ಸಾವಿನೊಂದಿಗೆ ಇಡೀ ಜಿಲ್ಲೆ ಉಗ್ರರಿಂದ ಮುಕ್ತಗೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಈ ಭಾಗದಲ್ಲಿ ಕೇಳಿಬಂದ ಭಯೋತ್ಪಾದನಾ ಚಟುವಟಿಕೆ ಮಾತ್ರವಲ್ಲದೇ ಅತ್ಯಾಚಾರ ಪ್ರಕರಣಗಳಲ್ಲಿಯೂ ಬೇಕಾಗಿದ್ದ ಮಸೂದ ಪರಾರಿಯಾಗಿದ್ದ. ನಂತರ ಈತ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದ. ಇದೀಗ ಆತನನ್ನು ಹತ್ಯೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಈತನ ಜತೆ, ಇಂದು ಲಾಲ್ ಚೌಕ್‌ನ ತಾರಿಕ್ ಖಾನ್, ಅನಂತ್‌ನಾಗ್ ಮತ್ತು ಕುಲ್ಗಂನ ನದೀಮ್ ಕೂಡ ಹತ್ಯೆಯಾಗಿದ್ದಾನೆ ಎಂದು ಮೂಲಗಳು ಗುರುತಿಸಿವೆ. ಈ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಹೊರಬೀಳಬೇಕಿದೆ.
ಈ ಮೂವರ ಹತ್ಯೆಯ ಬಳಿಕ ಈ ವರ್ಷದಲ್ಲಿ ಕಣಿವೆಯಲ್ಲಿ ಹತ್ಯೆಗೊಂಡ ಭಯೋತ್ಪಾದಕರ ಸಂಖ್ಯೆ 116ಕ್ಕೆ ತಲುಪಿದೆ.
ಇದು ಜೂನ್ ತಿಂಗಳಲ್ಲಿ ನಡೆದ 13 ನೇ ಮುಖಾಮುಖಿಯಾಗಿದ್ದು, ಈ ತಿಂಗಳಲ್ಲಿ ಈವರೆಗೆ 40 ಕ್ಕೂ ಹೆಚ್ಚು ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಹತರಾಗಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಹಿಜ್ಬುಲ್ ಮುಜಾಹಿದ್ದೀನ್ ಸದ್ಯ ಭಾರತದ ಭದ್ರತಾ ಪಡೆಗಳ ಮುಖ್ಯ ಗುರಿಯಾಗಿದೆ. ಈ ಗುಂಪಿನ ಕಮಾಂಡರ್ ರಿಯಾಜ್ ನಾಯ್ಕು ಇದಾಗಲೇ ಮೃತಪಟ್ಟಿದ್ದಾನೆ.