

ನವದೆಹಲಿ: ಜಾಗತಿಕ ಉಗ್ರನೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನಾಪತ್ತೆಯಾಗಿದ್ದಾನೆ ಎಂದು ಪಾಕಿಸ್ತಾನ ಹೇಳಿತ್ತು.
ಉಗ್ರರಿಗೆ ಆರ್ಥಿಕ ನೆರವು ತಡೆಯಲು ರಚನೆಯಾದ ಜಾಗತಿಕ ವೇದಿಕೆ ಹಣಕಾಸು ಕ್ರಿಯಾ ಪಡೆ (ಎಫ್ಎಟಿಎಫ್)ಯ ಸಭೆಯಲ್ಲಿ ಈ ಮಾಹಿತಿ ನೀಡಿದ್ದ ಪಾಕಿಸ್ತಾನ, ಆತ ನಾಪತ್ತೆಯಾಗಿದ್ದರಿಂದ ಎಫ್ಐಆರ್ ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿತ್ತು.
ಆದರೆ ಇದೊಂದು ಪಕ್ಕಾ ಸುಳ್ಳು ಮಾಹಿತಿ ಎಂದು ಭಾರತೀಯ ಗುಪ್ತಚರ ಇಲಾಖೆಗಳು ಹೇಳಿವೆ. ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂದು ಖಚಿತ ಮಾಹಿತಿ ನೀಡಿವೆ.
ಪಾಕಿಸ್ತಾನದ ರೈಲ್ವೆ ಲಿಂಕ್ ರಸ್ತೆಯಲ್ಲಿನ ಮಾರ್ಕಾಜ್-ಎ-ಉಸ್ಮಾನ್-ಒ-ಅಲಿ ಬಳಿ ಬಹವಾಲ್ಪುರ್ ನಲ್ಲಿರುವ ಜೈಷ್ ಸಂಘಟನೆಯ ಪ್ರಧಾನ ಕಚೇರಿಯ ಹಿಂಭಾಗದಲ್ಲಿ ಇರುವ ಬಾಂಬ್ ಪ್ರೂಫ್ (ಬಾಂಬ್ ನಿರೋಧಕ) ಮನೆಯೊಂದರಲ್ಲಿ ಅಜರ್ ಸುರಕ್ಷಿತವಾಗಿದ್ದಾನೆ. ಅವನಿಗೆ ಬಿಗಿ ಭದ್ರತೆಯನ್ನೂ ನೀಡಲಾಗಿದೆ ಎಂದು ಗುಪ್ತಚರ ದಳಗಳ ಅಧಿಕಾರಿಗಳು ನಿಖರ ಮಾಹಿತಿ ನೀಡಿವೆ.
2019ರ ಫೆ.14ರಂದು ನಡೆದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾನೆ.
ಗುಪ್ತಚರ ಇಲಾಖೆಗಳ ಪ್ರಕಾರ ಈ ಮಸೂದ್ ಅಜರ್ಗೆ ಮೂರು ವಿಳಾಸಗಳಿವೆ. ಒಂದು ಬಹವಾಲ್ಪುರದಲ್ಲಿರುವ ಕೌಸರ್ ಕಾಲನಿ, ಇನ್ನೊಂದು ಖೈಬರ್ ಪಕ್ತುಂಖ್ವಾದ ಬನ್ನುವಿನಲ್ಲಿರುವ ಬಿಲಾಲ್ ಹಬ್ಶಿ ಮದರಸಾ ಹಾಗೂ ಮತ್ತೊಂದು ಬಹಾವಾಲ್ಪುರದ ಲಕ್ಕಿ ಮಾರ್ವಾತ್ನ ಮಸೀದಿ-ಎ-ಲುಕ್ಮಾನ್.
ಆದರೆ ಸದ್ಯ ಆತ ಜೈಷ್ ಸಂಘಟನೆಯ ಪ್ರಧಾನ ಕಚೇರಿಯ ಹಿಂಭಾಗದಲ್ಲಿ ಇರುವ ಬಾಂಬ್ ಪ್ರೂಫ್ ಮನೆಯಲ್ಲಿಯೇ ಇದ್ದಾನೆ ಎಂದು ಹೇಳಿವೆ.
ಉಗ್ರರಿಗೆ ಆರ್ಥಿಕ ಸಹಾಯ ನೀಡುವುದನ್ನು ನಿಯಂತ್ರಿಸಲು ವಿಫಲವಾದ ಪಾಕಿಸ್ತಾನವನ್ನು ಈಗಾಗಲೇ ಎಫ್ಎಟಿಎಫ್ ಬೂದು ಪಟ್ಟಿಗೆ ಸೇರಿಸಿದೆ. ಈಗ ಮಸೂದ್ ಅಜರ್ ನಾಪತ್ತೆಯಾಗಿದ್ದಾನೆಂದು ಪಾಕಿಸ್ತಾನ ಸುಳ್ಳು ಹೇಳಿತಾ ಎಂಬ ಅನುಮಾನವೂ ಕಾಡುತ್ತಿದೆ.(ಏಜೆನ್ಸೀಸ್)