ಜೈಸಲ್ಮೇರ್ ಬಸ್ ದುರಂತ: ಪ್ರಧಾನಿ ಮೋದಿ ಸಂತಾಪ, ₹2 ಲಕ್ಷ ರೂ ಪರಿಹಾರ ಘೋಷಣೆ | PM Modi

PM Modi
Published on

ಜೈಪುರ: ಕನಿಷ್ಠ 21 ಜೀವಗಳನ್ನು ಬಲಿತೆಗೆದುಕೊಂಡ ಜೈಸಲ್ಮೇರ್ ಬಸ್ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಮಂಗಳವಾರ, (ಅಕ್ಟೋಬರ್,14) ರಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತ ಕುಂಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ.

ದುರಂತದ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಂಭವಿಸಿದ ಅಪಘಾತದಿಂದ ಜೀವಹಾನಿಯಾಗಿದೆ. ಅಲ್ಲದೆ, ಈ ಕಷ್ಟದ ಸಮಯದಲ್ಲಿ ಸಂತ್ರಸ್ತರ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೆ, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) 2 ಲಕ್ಷ ರೂ. ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಸ್ಥಳದಲ್ಲಿ ಆಗಿದ್ದೇನು..?

ಮಂಗಳವಾರ ಮಧ್ಯಾಹ್ನ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌ಗೆ ಜೈಸಲ್ಮೇರ್ ಜಿಲ್ಲೆಯ ಥೈಯತ್ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡಾಗ ಈ ಅಪಘಾತ ಸಂಭವಿಸಿದೆ. ಕೆಕೆ ಟ್ರಾವೆಲ್ಸ್ ನಿರ್ವಹಿಸುತ್ತಿದ್ದ ಈ ಬಸ್ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಜೈಸಲ್ಮೇರ್‌ನಿಂದ ಹೊರಟಿದ್ದಾಗ ಪ್ರಯಾಣಿಕರು ಅದರ ಹಿಂಭಾಗದಿಂದ ಹೊಗೆ ಹೊರಬರುವುದನ್ನು ಗಮನಿಸಿದ್ಧಾರೆ.

ಈ ಬಗ್ಗೆ ಮಾಹಿತಿ ನೀಡಿದ ಜೈಸಲ್ಮೇರ್ ಹೆಚ್ಚುವರಿ ಎಸ್ಪಿ ಕೈಲಾಶ್ ಧನ್, ಚಲಿಸುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಯಿತು. ಸಾವುನೋವುಗಳು ವರದಿಯಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅಗ್ನಿಶಾಮಕ ಮತ್ತು ಪೊಲೀಸ್ ತಂಡಗಳು ಬರುವ ಮೊದಲು ಸ್ಥಳೀಯ ಗ್ರಾಮಸ್ಥರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ರಕ್ಷಿಸಲು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ದುರಂತದ ಬಗ್ಗೆ ಜೋಧಪುರ ಪೊಲೀಸ್ ಆಯುಕ್ತ ಓಂ ಪ್ರಕಾಶ್ ಪಾಸ್ವಾನ್ ಮಾತನಾಡಿ, 16 ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಜೋಧಪುರಕ್ಕೆ ಕರೆತರಲಾಗಿದೆ. 15 ಗಾಯಾಳುಗಳು ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಮತ್ತು ಒಬ್ಬರು ಶ್ರೀ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಕ್ಷಣೆ ಮತ್ತು ಗುರುತಿಸುವಿಕೆ ಪ್ರಗತಿಯಲ್ಲಿದೆ

ಜೈಸಲ್ಮೇರ್ ಬಸ್ ಬೆಂಕಿ ಅವಘಡದ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜೈಸಲ್ಮೇರ್​ನಲ್ಲಿ ಸಂಭವಿಸಿದ ಜೀವಹಾನಿ ತೀವ್ರ ದುಃಖಕರವಾಗಿದ್ದು, ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಅಲ್ಲದೆ, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳನ್ನು ಭೇಟಿ ಮಾಡಿದರು. ಜೈಸಲ್ಮೇರ್‌ನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ಹೃದಯ ವಿದ್ರಾವಕವಾಗಿದೆ. ಸಂತ್ರಸ್ತರಿಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಶರ್ಮಾ ಹೇಳಿದರು.

ಜೋಧ್‌ಪುರ ಮತ್ತು ಜೈಸಲ್ಮೇರ್ ಜಿಲ್ಲಾ ಅಧಿಕಾರಿಗಳು ಮಾಹಿತಿ ಪಡೆಯಲು ಕುಟುಂಬಗಳಿಗೆ ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದಾರೆ. ಮೃತರನ್ನು ಗುರುತಿಸಲು ಜೋಧ್‌ಪುರದ ಮಹಾತ್ಮ ಗಾಂಧಿ ಆಸ್ಪತ್ರೆ ಮತ್ತು ಜೈಸಲ್ಮೇರ್‌ನ ಜವಾಹರ್ ಆಸ್ಪತ್ರೆಯ ಆಘಾತ ಕೇಂದ್ರದ ಸಂಬಂಧಿಕರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net