13 ಮಂದಿ ಸಾವಿಗೆ ಕಾರಣವಾದ LPG ಟ್ಯಾಂಕರ್ ಸ್ಫೋಟದಲ್ಲಿ ಬದುಕುಳಿದ ಚಾಲಕ; ತನಿಖೆ ವೇಳೆ ಬಯಲಾಯ್ತು ಸತ್ಯ

Untitled design (2)
Published on

ಜೈಪುರ: ಡಿಸೆಂಬರ್ 20 ರಂದು ಜೈಪುರದಲ್ಲಿ ಸಂಭವಿಸಿದ ಭೀಕರ ಎಲ್​ಪಿಜಿ(LPG) ಟ್ಯಾಂಕರ್ ಸ್ಫೋಟ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಟ್ಯಾಂಕರ್ ಡಿಕ್ಕಿಯಾದ ನಂತರ ಹತ್ತಾರು ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಚೆಂಡಾಗಿವೆ. ಈ ಅಪಘಾತದಲ್ಲಿ 13 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

13 ಮಂದಿಯನ್ನು ಬಲಿತೆಗೆದುಕೊಂಡ ಹಾಗೂ 31 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ಕಾರಣವಾದ ಸ್ಫೋಟದಿಂದ ಟ್ಯಾಂಕರ್​​​ ಚಾಲಕ ಬದುಕುಳಿದಿದ್ದಾನೆ. ಇದನ್ನೂ ಕೇಳಿ ನಿಮಗೂ ಆಶ್ಚರ್ಯವಾಗಬಹುದು. ಹೌದು ಅಪಘಾತದ ವೇಳೆ ಸ್ಫೋಟ ಸಂಭವಿಸಿದ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಚಾಲಕನ ಹೆಸರು ರಾಮ್ ಜೈವೀರ್. ಅವರು ಮಥುರಾ ನಿವಾಸಿಯಾಗಿದ್ದಾರೆ.

ಸ್ಫೋಟದಿಂದ ಚಾಲಕ ಪಾರಾಗಿದ್ದೇಗೆ?

ಎಲ್‌ಪಿಜಿ ಟ್ಯಾಂಕರ್ ಸ್ಫೋಟ ಸಂಭವಿಸಿದ ಟ್ಯಾಂಕರ್ ಚಾಲಕ ಜೈವೀರ್ ಸುರಕ್ಷಿತವಾಗಿದ್ದಾರೆ.ಅಪಘಾತ ಸಂಭವಿಸು ಸೂಚನೆ ಸಿಗುತ್ತಿದ್ದಂತೆ ಅಲ್ಲಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಗ್ಯಾಸ್ ಲೀಕ್ ಆದಾಗಲೆಲ್ಲ ವಿರುದ್ಧ ದಿಕ್ಕಿನಲ್ಲಿ ಓಡಬೇಕು ಎಂಬುದು ಜೈವೀರ್​​ಗೆ ಗೊತ್ತಿತ್ತು. ಈ ಮಾಹಿತಿಯ ಲಾಭ ಪಡೆದು ಅದೇ ರೀತಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಟ್ಯಾಂಕರ್ ಓನರ್​ಗೆ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಾಲಕನ ವಿಚಾರಣೆ ನಡೆಸಲಿರುವ ಪೊಲೀಸರು

ಚಾಲಕ ಜೈವೀರ್ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಪಡೆದ ಜೈಪುರ ಪೊಲೀಸರು ಆತನನ್ನು ಸಂಪರ್ಕಿಸಿ ವಿಚಾರಣೆಗಾಗಿ ಜೈಪುರಕ್ಕೆ ಕರೆಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಚಾಲಕ ಜೈಪುರಕ್ಕೆ ಬಂದ ನಂತರವೇ ಘಟನೆಯ ಬಗ್ಗೆ ಇತರ ಮಾಹಿತಿ ಲಭ್ಯವಾಗುತ್ತದೆ. ಭಾಂಕ್ರೋಟಾ ಪೊಲೀಸ್ ಠಾಣೆಯ ಉಸ್ತುವಾರಿ ಮನೀಶ್ ಕುಮಾರ್ ಶರ್ಮಾ ಅವರು ಚಾಲಕನ ಸುರಕ್ಷತೆಗೆ ಸಂಬಂಧಿಸಿದಂತೆ ಇದನ್ನು ಖಚಿತಪಡಿಸಿದ್ದಾರೆ. ಘಟನೆ ಬಳಿಕ ಟ್ಯಾಂಕರ್ ಚಾಲಕ ಜೈವೀರ್ ತನ್ನ ಗ್ರಾಮಕ್ಕೆ ತೆರಳಿದ್ದ. ಸದ್ಯ ಆತನಿಗಾಗಿ ಪೊಲೀಸರು ಕಾಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದಿದ್ದಾರೆ.

ಘಟನೆಯ ವಿವರ

ರಾಜಸ್ಥಾನದ ರಾಜಧಾನಿ ಜೈಪುರದ ಅಜ್ಮೀರ್ ರಸ್ತೆಯಲ್ಲಿ ಡಿಸೆಂಬರ್ 20 ರಂದು ಬೆಳಗ್ಗೆ 5:45ಕ್ಕೆ ಎಲ್‌ಪಿಜಿ ಟ್ಯಾಂಕರ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ನಂತರ ಸಂಭವಿಸಿದ ದುರಂತವು ಎಲ್ಲರಿಗೂ ಗೊತ್ತೆ ಇದೆ. ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ಇದಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 8 ಮಂದಿ ಸಾವನ್ನಪ್ಪಿದ್ದಾರೆ. ಜೈಪುರ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಈವರೆಗೆ 13 ಮಂದಿ ಸಾವನ್ನಪ್ಪಿದ್ದು, 31 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net