

ಹಾವೇರಿ: ರಾಜಕೀಯ ಕಾರಣಗಳಿಗೆ ಜನರ ಮನಸ್ಸು ಒಡೆಯುತ್ತಿರುವ ಸಮಕಾಲೀನ ಸಂದರ್ಭದಲ್ಲಿ ತ್ರಿಪದಿ ಕವಿ ಸರ್ವಜ್ಞ, ದಾಸಶ್ರೇಷ್ಠ ಕನಕದಾಸರು ಹಾಗೂ ಸಂತ ಶಿಶುನಾಳ ಶರೀಫರಂಥ ದಾರ್ಶನಿಕರ ಮೂಲಕ ಇಡೀ ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದ ಶ್ರೇಯಸ್ಸು ಹಾವೇರಿ ಜಿಲ್ಲೆಗೆ ಸಲ್ಲುತ್ತದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಏರ್ಪಡಿಸಿದ್ದ ಜೈ ಮಾನವ ಸಮಾವೇಶ ಹಾಗೂ ಜೈ ಮಾನವ ಕಲ್ಯಾಣ ಸಂಘ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾವೈಕ್ಯ ಬದುಕಿಗೆ ಹಾವೇರಿ ನೆಲ ಹೇಳಿ ಮಾಡಿಸಿದೆ. ಗುರು ಗೋವಿಂದ ಭಟ್ಟರು ಮುಸ್ಲಿಮರೊಂದಿಗೆ ಹಾಗೂ ಖಾದರಲಿಂಗರು ಹಿಂದೂಗಳೊಂದಿಗಿದ್ದು ಸೌಹಾರ್ದ ಭಾವ ಮೂಡಿಸಿದರು. ರಾಜಕಾರಣಕ್ಕೆ ಜಾತಿ, ಧರ್ಮಗಳ ಮಧ್ಯೆ ಕಂದಕ ಉಂಟಾಗುತ್ತಿದೆ. ಸರ್ವಧಮೀರ್ಯರೂ ಸಹಬಾಳ್ವೆಯಿಂದ ಬದುಕಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ನಮ್ಮ ನೆಲದ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಭಾವೈಕ್ಯ ಕದಡುವ ಸಂದಿಗ್ಧ ಪರಿಸ್ಥಿತಿಯಲ್ಲಿ ಜೈ ಮಾನವ ಕಲ್ಯಾಣ ಸಂಘ ಸ್ಥಾಪಿಸಿರುವುದು ಸಮಯೋಚಿತ ಎಂದರು.
ಸಮಾವೇಶ ಉದ್ಘಾಟಿಸಿದ ಹಿರಿಯ ಸಾಹಿತಿ ಸತೀಶ ಕುಲಕಣಿರ್ ಮಾತನಾಡಿ, ಮಾನವೀಯತೆ ಮರೆತು ವಾದ-ಪ್ರತಿವಾದ ಸೃಷ್ಟಿಯಾಗುತ್ತಿದೆ. ಸಾಮರಸ್ಯ ಕದಡುತ್ತಿರುವ ಈ ದಿನಗಳಲ್ಲಿ ಮಾನವೀಯತೆ ಪರವಾಗಿ ನಿಲ್ಲಬೇಕಿದೆ. ಜೈ ಮಾನವ ಸಮಾವೇಶ ಆಯೋಜನೆ ಅಭಿನಂದನೀಯ ಎಂದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಸವಣೂರಿನ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮೇಕ್ ಫೌಂಡೇಶನ್ನ ವ್ಯವಸ್ಥಾಪಕ ನಿರ್ದೇಶಕ ಮೌಲಾನ್ ಮುಸ್ತಫಾ ರಝಾ ನಈಮಿ, ಮಾಜಿ ಶಾಸಕ ನೆಹರು ಓಲೇಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಸಾಹಿತಿ ಸಿ.ಎಸ್. ಮರಳಿಹಳ್ಳಿ, ಅಬ್ದುಲ್ ಕರೀಂ ಮೊಹಸಿನ್ ಮತ್ತಿತರರು ಉಪಸ್ಥಿತರಿದ್ದರು.