

ಬೆಂಗಳೂರು: ( Rishab Shetty ) 'ಜೈ ಹನುಮಾನ್' ಚಿತ್ರದ ಮೊದಲ ಪೋಸ್ಟರ್ ಅನ್ನು ಮೈತ್ರಿ ಮೂವೀಸ್ ಮೇಕರ್ಸ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಚಿತ್ರದಲ್ಲಿ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿಯೂ ನಟಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಈ ವರ್ಷದ ಆರಂಭದಲ್ಲಿ ಪ್ರಶಾಂತ್ ವರ್ಮಾ ‘ಹನುಮಾನ್’ ಸಿನಿಮಾವನ್ನು ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಿದ್ದರು. ತೇಜ ಸಜ್ಜ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಬಿಡುಗಡೆಯ ವೇಳೆಯೇ ಮುಂದಿನ ಭಾಗವನ್ನು ಘೋಷಿಸಿದರು. ಈ ಚಿತ್ರದ ಸೀಕ್ವೆಲ್ 'ಜೈ ಹನುಮಾನ್' ಹೆಸರಿನಲ್ಲಿ ಬರುತ್ತಿದೆ.
ಕನ್ನಡದ ನಾಯಕ ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ಆಂಜನೇಯ ಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಾವಳಿ ಉಡುಗೊರೆಯಾಗಿ ಬಿಡುಗಡೆಯಾಗಿರುವ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ನಿರ್ದೇಶಕ ಪ್ರಶಾಂತ್ ವರ್ಮಾ ಇತ್ತೀಚೆಗೆ ತಮ್ಮ ಯೋಜನೆಯ ಭಾಗವಾಗಿದ್ದ ರಿಷಬ್ ಶೆಟ್ಟಿಗೆ ಧನ್ಯವಾದ ಹೇಳಿದರು. ಇಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, “ಈ ಯೋಜನೆಯ ಭಾಗವಾಗಿದ್ದಕ್ಕಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದಗಳು. ಅವರ ಭಕ್ತಿ ಮತ್ತು ಹನುಮಂತನ ಮೇಲಿನ ಅಪ್ರತಿಮ ಭಕ್ತಿ ನಿಜವಾಗಿಯೂ ಪಾತ್ರಕ್ಕೆ ಜೀವ ತುಂಬಿತು. ಅವರ ಅದ್ಭುತ ರೂಪಾಂತರ, ಪರಿಪೂರ್ಣತೆ ಮತ್ತು ಅಚಲವಾದ ಬದ್ಧತೆಯು ಜೈ ಹನುಮಾನ್ ಚಿತ್ರವನ್ನು ಅಸಾಧಾರಣವಾಗಿಸುತ್ತದೆ. ಪ್ರಪಂಚದಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಅನುಭವ ನೀಡಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ನಿಮ್ಮೊಂದಿಗೆ ಈ ಪ್ರಯಾಣವನ್ನು ಪ್ರಾರಂಭಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ” ಎಂದು ಬರೆದುಕೊಂಡು ಚಿತ್ರದ ಫಸ್ಟ್ ಲುಕ್ ಫೋಟೋಶೂಟ್ ಗೆ ಸಂಬಂಧಿಸಿದ ಫೋಟೋವನ್ನೂ ಶೇರ್ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅದರಲ್ಲಿ ರಿಷಬ್ ಶೆಟ್ಟಿಗೆ ದೃಶ್ಯವನ್ನು ವಿವರಿಸುತ್ತಿರುವ ಫೋಟೋವನ್ನು ನೋಡ ಬಹುದಾಗಿದೆ.
ಸದ್ಯದಲ್ಲೇ ಜೈ ಹನುಮಾನ್ ಚಿತ್ರದ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆಯಂತೆ. ಕೆಲವು ತಾರೆಯರು ಕೂಡ ಜೈ ಹನುಮಾನ್ ಸಿನಿಮಾದ ಭಾಗವಾಗಲಿದ್ದಾರಂತೆ.