ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟಿ ಜಾಕ್‌ಲೀನ್ ಫರ್ನಾಂಡಿಸ್ ಸಿನಿಮಾಗಳಿಗಿಂತ ಇಡಿ, ಐಟಿ ನೋಟಿಸ್ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಈ ಕಾರಣಕ್ಕಾಗಿಯೇ ನಟಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಆದರೆ, ಇತ್ತೀಚೆಗಷ್ಟೇ ‘ವೆಲ್ಕಂ ಟು ದ ಜಂಗಲ್’ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಂಡು, ತಾರಾ ಮೆರಗು ಹೆಚ್ಚಿಸಿದ್ದರು. ಇನ್ನೇನು ಇದೇ 26ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಇದೇ ಖುಷಿಯಲ್ಲಿ ಜಾಕ್‌ಲೀನ್ ಇದೀಗ ಮತ್ತೊಂದು ಸಿನಿಮಾದ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು, ಜಾಕ್‌ಲೀನ್ ಫರ್ನಾಂಡಿಸ್ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಈ ಹಿಂದೆ ‘ಭೂತ್ ಪೊಲೀಸ್’ನಲ್ಲಿ (2021) ನಟಿಸಿದ್ದರು. ಆದರೆ, ಅದು ಸಂಪೂರ್ಣ ಹಾರರ್ ಆಗಿರಲಿಲ್ಲ. ಇದೀಗ ಪೂರ್ಣ ಪ್ರಮಾಣದ ಹಾರರ್ ಚಿತ್ರದ ಮೂಲಕ ಜಾಕ್‌ಲೀನ್ ಹೆದರಿಸಲು ಸಿದ್ಧರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾರರ್ ಚಿತ್ರಗಳು ಹೆಚ್ಚು ಯಶಸ್ವಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಈ ಚಿತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಜಾಕ್‌ಲೀನ್ ಜತೆಗೆ ಇಬ್ಬರು ಖ್ಯಾತ ನಟರು ಅಭಿನಯಿಸಲಿದ್ದು, ಅವರ ಹೆಸರು ಇನ್ನು ರಿವೀಲ್ ಮಾಡಬೇಕಷ್ಟೇ. ಈ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ಮೂಡಿಬರಲಿದ್ದು, ಈಗಾಗಲೇ ಟೀಸರ್ ಹಾಗೂ ಒಂದು ಹಾಡಿನ ಚಿತ್ರೀಕರಣ ಮಾಡಲಾಗಿದೆ. ಸದ್ಯ ಪಾತ್ರಗಳಿಗೆ ವರ್ಕ್‌ಶಾಪ್ ನಡೆಸಲಾಗುತ್ತಿದೆ. ಶೀಘ್ರವೇ ಈ ಚಿತ್ರದ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ. ಗ್ಲಾಮರಸ್ ಪಾತ್ರಗಳಲ್ಲಿಯೇ ಹೆಚ್ಚು ಮಿಂಚಿದ್ದ ಜಾಕ್‌ಲೀನ್ ಈ ಚಿತ್ರದ ಮೂಲಕ ಹೆದರಿಸುವ ಹೊಸ ಸವಾಲು ಸ್ವೀಕರಿಸಿದ್ದಾರೆ. -ಏಜೆನ್ಸೀಸ್