

ಭದ್ರಾವತಿ: ಶ್ರೀಮಂತ ಕುಟುಂಬದಲ್ಲಿ ಜನಿಸಿದ ಜೆ.ಎಚ್.ಪಟೇಲ್ ಅವರು ಗೋಪಾಲ ಗೌಡರ ವಿಚಾರಧಾರೆಗೆ ಮಾರುಹೋಗಿ ಸಮಾಜವಾದವನ್ನು ಮೈಗೂಡಿಕೊಂಡು ಹೋರಾಟಕ್ಕೆ ಧುಮುಕಿದರು ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಜೆ.ಎಚ್.ಪಟೇಲ್ ಅಭಿಮಾನಿ ಬಳಗ ಏರ್ಪಡಿಸಿದ್ದ ಜೆ.ಎಚ್.ಪಟೇಲರ 96ನೇ ಜನ್ಮದಿನಾಚರಣೆ ಹಾಗೂ ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ ಮತ್ತು ಮೈಕ್ರೋಫೈನಾಸ್ಸ್‌ನಿಂದ ನಾಗರಿಕರ ಮೇಲಾಗುತ್ತಿರುವ ತೊಂದರೆ-ನಿಯಂತ್ರಣ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಟೇಲರ ಚಿಂತನೆಗಳಲ್ಲಿ ಸೂಕ್ಷ್ಮತೆ ಹಾಗೂ ಅಧ್ಯಯನಶೀಲತೆ ಅಡಗಿತ್ತು. ಹೆಚ್ಚು ವಿಚಾರಗಳನ್ನು ತಿಳಿದುಕೊಂಡಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಮಂತ್ರಿಗಳಿಗೂ ಪೂರ್ಣ ಪ್ರಮಾಣದ ಜವಾಬ್ದಾರಿ, ಸ್ವಾತಂತ್ರೃ ನೀಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕುವಂತೆ ನೋಡಿಕೊಳ್ಳುತ್ತಿದ್ದರು ಎಂದರು.
ಸಮಾಜದ ಸುಧಾರಣೆಯಲ್ಲಿ ಬದಲಾಗಬೇಕಾದುದು ಜನರೋ, ಜನಪ್ರತಿನಿಧಿಗಳೋ ಎಂಬುದನ್ನು ಹೇಳುವುದು ಕಷ್ಟದ ಕೆಲಸ. ಇಲ್ಲಿ ಇಬ್ಬರೂ ಬದಲಾಗಬೇಕು. ಆಗ ಸಮಾಜ ಸುಧಾರಣೆ ಸಾಧ್ಯ. ಮೈಕ್ರೋ ಫೈನಾನ್ಸ್‌ಗಳ ಹಾವಳಿಯಿಂದ ಸಾಕಷ್ಟು ಕುಟುಂಬಗಳು ಸಂಕಷ್ಟದಲ್ಲಿವೆ. ಅದಕ್ಕೆ ಪರಿಹಾರದ ಮೂಲವನ್ನು ನಾವೇ ಕಂಡುಕೊಂಡು ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಂತ್ರಿಗಳಿಗೆ ಮನವಿ ಸಲ್ಲಿಸಬೇಕು. ಕಾನೂನು ಮಂತ್ರಿ ಎಚ್.ಕೆ.ಪಾಟೀಲ ಅವರನ್ನು ಭೇಟಿ ಮಾಡಿ ಕಾನೂನಿನ ಸಲಹೆ, ಸೂಚನೆ ಪಡೆದು ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಬಹುದು ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಸಮಾಜಸೇವೆ ಮಾಡುವ ರಾಜಕಾರಣಿಗಳು, ಸ್ವಾಮೀಜಿಗಳು ಜನತೆಗೆ ಆದರ್ಶವಾಗಿರಬೇಕು. ಜಾತಿ, ಧರ್ಮ, ಹಣ ಇಂದಿನ ಚುನಾವಣಾ ಸರಕುಗಳಾಗಿವೆ. ಮತದಾರ ಪ್ರಾಮಾಣಿಕನಾಗಿದ್ದರೆ ಸಾಲದು ರಾಜಕಾರಣಿಗಳೂ ಪ್ರಾಮಾಣಿಕರಾಗಿರಬೇಕು. ಜನರು ಸಾಲ ಸಿಗುತ್ತದೆ ಎಂದು ಸಾಲ ಮಾಡುವುದು ಬಿಡಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂದರು.
ರೈತ ಪರ ಹೋರಾಟಗಾರ ತೇಜಸ್ವಿ ಪಟೇಲ್ ಮಾತನಾಡಿ, ದಿನ ನಿತ್ಯ ವ್ಯಾಪಾರ, ವಹಿವಾಟು ಮಾಡುವವರಿಗೆ ಸರ್ಕಾರದಿಂದ ಸುಲಭವಾಗಿ ಸಾಲ ಸೌಲಭ್ಯ ಸಿಗುವುದಾದರೆ ಮಾತ್ರ ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟಲು ಸಾಧ್ಯ. ಸಾಲ ತೆಗೆದುಕೊಂಡವರು ಮರು ಪಾವತಿ ಮಾಡದಿದ್ದರಿಂದ ಸಾಕಷ್ಟು ಸಹಕಾರ ಸಂಘಗಳು ಮುಚ್ಚಿಹೋಗಿವೆ. ಮೈಕ್ರೋ ಫೈನಾನ್ಸ್‌ಗಳು ವಸೂಲಾತಿಗೆ ಕಠಿಣವಾಗಿ ವರ್ತಿಸುವುದರಿಂದ ಅವು ಲಾಭದಲ್ಲಿವೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಾರ್ವತ್ರಿಕವಾಗಿ ವಿರೋಧಿಸಲು ಬರುವುದಿಲ್ಲ. ಅವಶ್ಯಕತೆ ಇದ್ದವರಿಗೆ ಮಾತ್ರ ಸಿಗಬೇಕು. ಅದು ಉಳ್ಳವರಿಗೂ ಸಿಕ್ಕರೆ ಯೋಜನೆ ಫಲಿಸುವುದಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯ ಲಾಭ ಸಿಗಬೇಕು. ಅದಕ್ಕೆ ಮಹಿಳೆಯರೇ ಹೋರಾಟ ಮಾಡಬೇಕು ಎಂದರು.
ಸಾಮಾಜಿಕ ಹೋರಾಟಗಾರರಾದ ಶಶಿಕುಮಾರ್ ಗೌಡ, ಮಣಿಶೇಖರ್, ಬಿ.ಎನ್.ರಾಜು, ರಾಮಯ್ಯ, ಕಲಾವತಿ, ದಿವ್ಯಶ್ರೀ, ಕೆ.ವಿ.ಶಿವರಾಂ, ಡಿ.ಕೆ.ಶ್ರೀನಿವಾಸ್, ನರಸಿಂಹಮೂರ್ತಿ ಇತರರಿದ್ದರು.