ಶ್ವೇತಭವನದಲ್ಲಿ ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ...ಇವಾಂಕಾ ಟ್ರಂಪ್​ ಅಪಾಯದಲ್ಲಿ?

Ivanka Trump 9 May 20
Published on

ವಾಷಿಂಗ್ಟನ್​: ಅಮೆರಿಕದಲ್ಲಿ ಕರೊನಾ ವೈರಸ್​ ತಾಂಡವವಾಡುತ್ತಿದೆ. ಶುಕ್ರವಾರ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿ ಕೇಟೀ ಮಿಲ್ಲರ್​ಗೆ ಸೋಂಕು ದೃಢಪಟ್ಟಿತ್ತು.

ಇಂದು ಡೊನಾಲ್ಡ್​ ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್​ ಅವರ ಪರ್ಸನಲ್​ ಅಸಿಸ್ಟಂಟ್​​ ಕರೊನಾಕ್ಕೆ ತುತ್ತಾಗಿದ್ದಾರೆ. ಈ ಮೂಲಕ ವೈಟ್​ ಹೌಸ್​ಗೆ ಸಂಬಂಧಪಟ್ಟ ಮೂವರು ಸಿಬ್ಬಂದಿಗೆ ಕರೊನಾ ತಗುಲಿದಂತಾಗಿದೆ.

ಇವಾಂಕಾ ಅವರ ಪರ್ಸನಲ್​ ಅಸಿಸ್ಟಂಟ್​ ಕೆಲವು ವಾರಗಳಿಂದ ಕರ್ತವ್ಯಕ್ಕೆ ಬರುತ್ತಿರಲಿಲ್ಲ. ವರ್ಕ್​ ಫ್ರಾಂ ಹೋಂನಲ್ಲಿದ್ದರು. ತಮ್ಮ ಮೊಬೈಲ್ ಮೂಲಕವೇ ಕೆಲಸ ಮಾಡುತ್ತಿದ್ದರು.

ಅವರಲ್ಲಿ ಕರನಾ ಲಕ್ಷಣಗಳೂ ಕಂಡುಬಂದಿರಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆಗೆ ಒಳಗಾಗಿದ್ದರು. ಇಂದು ಕರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇವಾಂಕಾ ಮತ್ತು ಅವರ ಪತಿ ಜೇರ್ಡ್ ಕುಶ್ನರ್​ ಅವರೂ ಕೂಡ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದರು. ಶುಕ್ರವಾರ ಇಬ್ಬರ ವೈದ್ಯಕೀಯ ವರದಿಯೂ ನೆಗೆಟಿವ್​ ಎಂದು ಬಂದಿದೆ. ಈಗ ಇವಾಂಕಾ ಟ್ರಂಪ್​ ಅವರ ಆಪ್ತ ಸಹಾಯಕರಲ್ಲಿಯೇ ಕರೊನಾ ಕಂಡುಬಂದರೂ, ಅವರು ಹಲವು ದಿನಗಳಿಂದ ಶ್ವೇತ ಭವನಕ್ಕೆ ಬಾರದ ಕಾರಣ ಅಷ್ಟೇನೂ ಅಪಾಯ ಇಲ್ಲ.

ಮೈಕ್​ ಪೆನ್ಸ್​ ಅವರ ಮಾಧ್ಯಮ ಕಾರ್ಯದರ್ಶಿ ಕೈಟೀ ಮಿಲ್ಲರ್​ಗೆ ಕರೊನಾ ಇರುವುದಾಗಿ ಟ್ರಂಪ್ ಅವರೇ ತಿಳಿಸಿದ್ದರು. ಹಾಗೇ ಮಿಲ್ಲರ್​ ಅವರ ಪ್ರಾಥಮಿಕ ಸಂಪರ್ಕದಲ್ಲಿ ಮೈಕ್​​ ಪೆನ್ಸ್​ ಕೂಡ ಇದ್ದರು ಎಂದು ಹೇಳಿದ್ದರು.

ಇದಕ್ಕೂ ಮೊದಲು ಗುರುವಾರ ಟ್ರಂಪ್​ ಅವರ ಖಾಸಗಿ ಕೆಲಸಗಾರನೋರ್ವನಲ್ಲಿ ಕರೊನಾ ದೃಢಪಟ್ಟಿತ್ತು.

ಇಷ್ಟಾದರೂ ತಮಗೆ ಕರೊನಾ ಭಯ ಇಲ್ಲ ಎಂದು ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಟ್ರಂಪ್ ಕೂಡ ಕರೊನಾ ಟೆಸ್ಟ್​ಗೆ ಒಳಗಾಗಿ ವರದಿ ನೆಗೆಟಿವ್​ ಬಂದಿತ್ತು. ಇತ್ತೀಚೆಗೆ ಪ್ರತಿದಿನ ಕರೊನಾ ಟೆಸ್ಟ್ ಮಾಡಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net