ವೈಮಾನಿಕ ಸಮೀಕ್ಷೆಯಲ್ಲ; ಅದು ಚಂದ್ರಯಾನ, ಪರಿಹಾರ ಕೇಳಿದರೆ ಆಕಾಶ ತೋರಿಸುತ್ತಿರುವ ಸರ್ಕಾರ, ಸಿಎಂ ವಿರುದ್ಧ ಆರ್. ಅಶೋಕ ವಾಗ್ದಾಳಿ

R ASHOK IN FLOOD AREA
ಇಂಡಿ-ಸಿಂದಗಿ ಭಾಗದ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಪರಿಶೀಲಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ ಸುದ್ದಿಗಾರರೊಂದಿಗೆ ಮಾತನಾಡಿದರು.
Published on

ವಿಜಯಪುರ: ಪವಿತ್ರವಾದ ದಸರಾ ಹಬ್ಬ ಆಚರಿಸಲಾಗದೇ ಕಾಳಜಿ ಕೇಂದ್ರಗಳಲ್ಲಿ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ನಾಡಿನ ಸಿಎಂ ಸಿದ್ದರಾಮಯ್ಯ ಅವರು ಪಂಚೆ ಎತ್ತಿಕೊಂಡು ದಸರಾ ಆಚರಿಸುತ್ತಾರೆ, ಇಲ್ಲಿ ಜನ ಬೆಳೆ ಹಾನಿಯಿಂದ ತಿನ್ನುವ ಅನ್ನಕ್ಕಾಗಿ ಪರಿತಪಿಸಿದರೆ ಅಲ್ಲಿ ಸಿದ್ದರಾಮಯ್ಯ ಅವರು ಮೃಷ್ಟಾನ್ನ ಭೋಜನ ಸವಿಯುತ್ತಿದ್ದಾರೆ, ಜನರಿಗೆ ನರಕ ತೋರಿಸಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಜನ ನರಕ ತೋರಿಸಲು ಸಜ್ಜಾಗಿದ್ದಾರೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಶನಿವಾರ ಇಂಡಿ ಹಾಗೂ ಸಿಂದಗಿ ಭಾಗದಲ್ಲಿ ಪ್ರವಾಹ ಮತ್ತು ಅತಿವೃಷ್ಠಿಯಿಂದಾದ ಹಾನಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಮೂಲಕ ಬಂದರೆ ಜನ ೇರಾವ್ ಹಾಕುತ್ತಾರಲ್ಲ ! ಸಮರ್ಪಕವಾದ ರಸ್ತೆಗಳೇ ಇಲ್ಲ. ಇನ್ನು ಹಳ್ಳಕ್ಕೆ ಇಳಿಯಲು ಸಿದ್ದರಾಮಯ್ಯಗೆ ಆಗಲ್ಲ. ಹೀಗಾಗಿ ಆಕಾಶ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಪರಿಹಾರ ಕೂಡ ಆಕಾಶದಲ್ಲೇ ಕೊಡುತ್ತಾರೆ. ರೈತರು ಆಕಾಶದಲ್ಲೇ ಪರಿಹಾರ ಇಸ್ಕೋಬೇಕಾಗುತ್ತದೆ. ಇದು ಆಕಾಶ ತೋರಿಸೋ ಸರ್ಕಾರ. ಭೂಮಿ, ಭೂಮಿತಾಯಿ ನಂಬಿದ ರೈತರ ಬಾಳಿಗೆ ಕೊಳ್ಳಿ ಹಚ್ಚುವ ಸರ್ಕಾರ ಎಂದು ಕಿಡಿಕಾರಿದರು.

ಮಲೆನಾಡು ಭಾಗದಲ್ಲಿ ಭೂ ಕುಸಿತ ಆಗಿ ಅನಾಹುತವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ, ಮಳೆ ಹಾನಿಯಾಗಿದೆ. 10-12 ಲಕ್ಷ ಹೆಕ್ಟರ್ ಜಮೀನಿಗೆ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ಈವರೆಗೆ ಪರಿಹಾರ ಕೊಟ್ಟಿಲ್ಲ. ಜನ ಗಂಜಿ ಕೇಂದ್ರ ಮುಚ್ಚಿಕೊಂಡು ಹೋಗುತ್ತಿದ್ದಾರೆ. ಸರ್ಕಾರ ಸರಿಯಾಗಿ ಪರಿಹಾರ ಕೊಟ್ಟಿದ್ದರೆ ನಾವು ಬರುವ ಅಗತ್ಯವಿರಲಿಲ್ಲ. ಕೊಟ್ಟಿದ್ದರೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್‌ನವರು ಕೇಳಿದರೆ ಪ್ರವಾಹ ನಿಂತ ಮೇಲೆ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಭಾಗದಲ್ಲೊಮ್ಮೆ ಕಣ್ಣಾಡಿಸಲಿ. ಇನ್ನೂ ತೊಗರಿ, ಹತ್ತಿ, ಕಬ್ಬು ನೀರಲ್ಲೇ ಕೊಳೆಯುತ್ತಿವೆ ಎಂದರು.

ಕಾಂಗ್ರೆಸ್‌ಗೆ ಸವಾಲು

ತ್ವರಿತವಾಗಿ ಪರಿಹಾರ ನೀಡದ ಕಾರಣ ಬಿಜೆಪಿ ನಾಯಕರು ಜನರ ಸಂಕಷ್ಟ ಆಲಿಸಲು ಬಂದಿದ್ದೇವೆ. ನಿಮಗೆ ತಾಕತ್ ಇದ್ದರೆ ಬಿಜೆಪಿ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಕೊಡಿ. ಬಿಜೆಪಿ ಐದು ಲಕ್ಷ ಕೊಟ್ಟರೆ ನೀವು ಆರು ಲಕ್ಷ ಕೊಡಬೇಕು. ಅಂದಾಗ ಜನ ಕರೆಕ್ಟ್ ಸಿಎಂ ಎನ್ನುತ್ತಾರೆ. ಅದನ್ನು ಬಿಟ್ಟು ಕಡಿಮೆ ಪರಿಹಾರ ಕೊಟ್ಟರೆ ಹೇಗೆ? ಎಂದರಲ್ಲೇ, ಮೊದಲು ಮರ್ಯಾದೆ ಇದ್ದರೆ ರೈತರ ಮನೆ ಬಾಗಿಲಿಗೆ ಬಂದು ಪರಿಹಾರ ಕೊಡಿ. ಇಲ್ಲವೇ ಕುರ್ಚಿ ಖಾಲಿ ಮಾಡಿ ಮನೆ ಕಡೆಗೆ ಹೋಗಿ ಎಂದರು.

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ತ್ವರಿತವಾಗಿ ಪರಿಹಾರ ಕಲ್ಪಿಸಿತು. ಪೂರ್ತಿ ಮನೆ ಬಿದ್ದಾಗ 5 ಲಕ್ಷ ರೂಪಾಯಿ ಕೊಟ್ಟಿದ್ದರೆ ಕಾಂಗ್ರೆಸ್ ಸರ್ಕಾರ 1.20 ಲಕ್ಷ ಕೊಡುತ್ತಿದೆ. ಆಗ ಅರ್ಧ ಮನೆ ಬಿದ್ದರೆ 3 ಲಕ್ಷ ಕೊಟ್ಟರೆ ಈ ಸರ್ಕಾರ 50 ಸಾವಿರ ರೂಪಾಯಿ ಕೊಡುತ್ತಿದೆ, ಮನೆಗೆ ನೀರು ಹೊಕ್ಕರೆ 10 ಸಾವಿರ ರೂಪಾಯಿ ಪರಿಹಾರ ಕೊಟ್ಟಿದ್ದರೆ ಇಂದಿನ ಸರ್ಕಾರ ಕೇವಲ 5 ಸಾವಿರ ರೂಪಾಯಿ ಕೊಡುತ್ತಿದೆ. ತಾಕತ್ತು-ಧಮ್ ಇದ್ದರೆ ಪರಿಹಾರ ಮೊತ್ತ ಹೆಚ್ಚಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲೆಸೆದರು.

ಪ್ರವಾಹ ಹಾನಿ ಪರಿಶೀಲನೆಗೆ ಯಾರ ಅಪ್ಪಣೆಯೂ ಕೇಳಿ ಬರಬೇಕಿಲ್ಲ. ಇದೇನು ಇಂದಿರಾಗಾಂಧಿ ಕಾಲದ ತುರ್ತು ಪರಿಸ್ಥಿತಿಯಲ್ಲ. ಆಗಲೇ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಬಂದವರು ನಾವು. ಇದೀಗ ನೀವು ಯಾವ ದೊಣ್ಣೆ ನಾಯಕ ಎಂದು ನಿಮಗೆ ಕೇಳಿ ಬರಬೇಕು? ನಮಗೆ ಜನರ ಸಂಕಷ್ಟ ಆಲಿಸುವ ಹಕ್ಕಿದೆ. ಈ ಭಾಗದಲ್ಲಿ ನಮ್ಮ ಸಂಸದರಿದ್ದಾರೆ ಎಂದು ಅಶೋಕ ಸರ್ಕಾರದ ವಿರುದ್ಧ ಹರಿಹಾಯ್ದರು.

ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ, ಸಿ.ಟಿ. ರವಿ, ಎನ್.ರವಿಕುಮಾರ, ಮಾಜಿ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ವಿವೇಕಾನಂದ ಡಬ್ಬಿ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ಉಮೇಶ ಕೋಳಕೂರ, ಸುರೇಶ ಬಿರಾದಾರ, ಅನೀಲ ಜಮಾದಾರ, ಸಂಜೀವ ಐಹೊಳಿ, ಕೃಷ್ಣಾ ಗುನ್ನಾಳಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net