

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆ.24 (ನಾಳೆ)ರಂದು ಭಾರತಕ್ಕೆ ಬರಲಿದ್ದಾರೆ. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವುದಲ್ಲದೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಿಕೊಳ್ಳುವುದು ಈ ಭೇಟಿಯಿಂದ ಸಾಧ್ಯವಾಗಲಿದೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ರೊಂದಿಗೆ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇವರೊಂದಿಗೆ ಉನ್ನತಮಟ್ಟದ ನಿಯೋಗವೊಂದು ಇರಲಿದೆ.
ಗುಜರಾತ್ನಲ್ಲಿ ನಡೆಯಲಿರುವ 'ನಮಸ್ತೆ ಟ್ರಂಪ್' ಬಗ್ಗೆ ಅಲ್ಲಿನ ಹಲವು ಜನರನ್ನು ಮಾತನಾಡಿಸಲಾಗಿದೆ. ಅವರೆಲ್ಲರೂ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲವಾಗಲಿ ಎಂದೇ ಆಶಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಇವರಿಬ್ಬರ ಭೇಟಿ ನೋಡಲು ಸಂತೋಷ. ಅದೂ ಟ್ರಂಪ್ ಅವರು ಭಾರತಕ್ಕೆ ಬರುತ್ತಿರುವುದು ತುಂಬ ಖುಷಿಯ ವಿಚಾರ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಜನರ ಮಾತುಗಳು, ಈ ಹಿಂದೆ ಮೋದಿ ಮತ್ತು ಟ್ರಂಪ್ ಭೇಟಿಯ ಕೆಲವು ಕ್ಷಣಗಳನ್ನು ಸೇರಿಸಿ ಎಡಿಟ್ ಮಾಡಲಾದ ವಿಡಿಯೋವೊಂದನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಂಪ್ ಭೇಟಿಯ ಬಗ್ಗೆ ಗುಜರಾತ್ನ ಎಲ್ಲರ ಅಭಿಪ್ರಾಯವೂ, ಮಾತುಗಳೂ ಒಂದೇ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಕಾಯುತ್ತಿದೆ. ನಾಳೆ ಅಹ್ಮದಾಬಾದ್ನಲ್ಲಿ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ನಮ್ಮೊಂದಿಗೆ ಇರುವುದು ನಮಗೆ ಗೌರವ ಎಂದು ಬರೆದಿದ್ದಾರೆ.
ಈ ಹಿಂದೆ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರು ಭಾರತಕ್ಕೆ ಆಗಮಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು. ಫೆ.12ರಂದು ಟ್ವೀಟ್ ಮಾಡಿ, ಗೌರವಾನ್ವಿತ ಅತಿಥಿಗಳಿಗೆ ಭಾರತ ಯಾವತ್ತೂ ಸ್ಮರಣೀಯವಾದ ಸ್ವಾಗತವನ್ನೇ ನೀಡುತ್ತದೆ. ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಆಗಮಿಸುತ್ತಿರುವುದು ವಿಶೇಷ. ಯುಎಸ್ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ ಎಂದಿದ್ದರು. (ಏಜೆನ್ಸೀಸ್)