ಪಾಪ ಕಂದ ಅದು , ಅವರ ಬಗ್ಗೆ ನಾನು ಮಾತಾಡಲ್ಲ: DK Shivakumar

DK Shivakumar (1)
Published on

ರಾಮನಗರ: ನಾನು ಕುಮಾರಸ್ವಾಮಿ ಅವರ ಮಗನ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಪಾಪ ಕಂದ. ಅವರು ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಎಂದರೂ ಹಾಕುತ್ತಾನೆ, ನಗು ಎಂದರೂ ನಗುತ್ತಾನೆ. ಆತನನ್ನು ನಾನು ಪ್ರಶ್ನೆ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಚನ್ನಪಟ್ಟಣ ಎನ್​ಡಿಎ ಅಭ್ಯರ್ಥಿ​ ನಿಖಿಲ್​ ಕುರಿತು ವ್ಯಂಗ್ಯವಾಡಿದ ಪರಿ ಇದು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಸೋಮವಾರ ಪ್ರಚಾರಸಭೆ ಉದ್ದೇಶಿಸಿ ಮಾತನಾಡಿದರು. ಆತ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದಾರೆ. ಅವರು ಒತ್ತಕ್ಕೆ ಸ್ಪರ್ಧಿಸಿದ್ದಾರೆಯೇ ಹೊರತು, ಜನರ ಸೇವೆಗಾಗಿ ಅಲ್ಲ. ನಿಮ್ಮ ಕಷ್ಟ ಸುಖಕ್ಕೆ ಭಾಗಿಯಾಗಲು ನಾವು ಸಂಕಲ್ಪ ಮಾಡಿದ್ದೇವೆ” ಎಂದು ಹೇಳಿದ್ದಾರೆ.

“ನನ್ನ ಪ್ರಶ್ನೆ ಇರುವುದು ಕುಮಾರಣ್ಣನಿಗೆ. ಇಲ್ಲಿ ಮತ ಕೇಳಬೇಕು ಎಂದರೆ ಧೈರ್ಯಬೇಕು. ನಾವು ನಿಮ್ಮ ಕ್ಷೇತ್ರದ ಜನರ ಋಣ ತೀರಿಸುತ್ತೇವೆ ಎಂದು ನಾನು ಎದೆ ತಟ್ಟಿಕೊಂಡು ಹೇಳಬಲ್ಲೆ. ಈಗಾಗಲೇ ಸಾವಿರಾರು ಜನರಿಗೆ ನಿವೇಶನ ಹಂಚಲು ಕಾರ್ಯಕ್ರಮ ರೂಪಿಸಲಾಗಿದೆ” ಎಂದ ಅವರು, ಯೋಗೇಶ್ವರ್ ರೆಡಿಮೇಡ್ ಗಂಡು. ಅವರಿಗೆ ನಿಮ್ಮ ಕಷ್ಟ, ಸುಖ, ನೋವು ಗೊತ್ತಿದೆ. ನಿಮ್ಮ ಹಳ್ಳಿಗಳು ಗೊತ್ತಿದೆ. ಅವರಿಗೆ ಬೆಂಬಲವಾಗಿ ಸರ್ಕಾರವಿದೆ. ಅವರ ಬೆನ್ನಿಗೆ ಈ ಡಿ.ಕೆ. ಶಿವಕುಮಾರ್ ಇದ್ದಾನೆ. ನಾನು ಎಂದಾದರೂ ಕೊಟ್ಟ ಮಾತು ತಪ್ಪಿದ್ದೀನಾ? ಎಂದು ಜನರನ್ನ ಪ್ರಶ್ನಿಸಿದರು.

ನನಗೆ ಮಹಿಳೆಯರ ಮೇಲೆ ವಿಶೇಷ ನಂಬಿಕೆ ಇದೆ. ನಮ್ಮ ಎಲ್ಲ ಕಾರ್ಯಕ್ರಮಗಳು ಮಹಿಳೆಯರ ಮೇಲೆ ಕೇಂದ್ರೀಕೃತವಾಗಿದೆ. ಇಲ್ಲಿರುವ ಪ್ರತಿ ಮಹಿಳೆಯರು ತಮ್ಮ ಕುಟುಂಬದ ನಾಲ್ಕು ಮತಗಳನ್ನು ಕಾಂಗ್ರೆಸ್ ಹಾಕಿಸಬೇಕು. ಎದುರಾಳಿ ಪಕ್ಷದವರು ಏನನ್ನೇ ಸುರಿಸಲಿ, ಯಾವುದೇ ಬಣ್ಣ ಹಾಕಿಕೊಳ್ಳಲಿ, ಯಾವುದೇ ನಾಟಕವಾಡಲಿ. ನಮಗೆ ನಿಮ್ಮ ಮೇಲೆ ನಂಬಿಕೆ ಇದೆ. ಚನ್ನಪಟ್ಟಣದಲ್ಲಿ ಅಭಿವೃದ್ಧಿ ಪರ್ವ ಮಾಡಿಯೇ ಮಾಡುತ್ತೇವೆ. ಯೋಗೇಶ್ವರ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಿ ನಿಮ್ಮ ಸೇವೆಗೆ ನಮ್ಮನ್ನು ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದ ಅವರು, ಬೇರೆ ಪಕ್ಷದ ಕಾರ್ಯಕರ್ತರು ದಳದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಕುಮಾರಣ್ಣ ದಳವನ್ನು ಕೈಬಿಟ್ಟಾಯ್ತು. ಹೀಗಾಗಿ ಆ ಪಕ್ಷದ ಕಾರ್ಯಕರ್ತರು ನಮ್ಮ ಜತೆ ಕೈಜೋಡಿಸಿ” ಎಂದರು.

ಜನರಿಗೆ ಸಹಾಯ ಮಾಡಲು ಕುಮಾರಸ್ವಾಮಿಗೆ ಸಾಧ್ಯವಿರಲಿಲ್ಲವೇ?

“ಕುಮಾರಸ್ವಾಮಿ ಅವರು ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಒಂದೇ ಒಂದು ದಿನ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಲು ಬರಲಿಲ್ಲ. ಹಾಗಾದ್ರೆ ನಿನಗೆ ಶಾಸಕ ಸ್ಥಾನ ಯಾಕೆ ಬೇಕು? ಕನ್ನಡ ರಾಜ್ಯೋತ್ಸವದಂದು ನೀನು ಇಲ್ಲಿ ಕನ್ನಡ ಧ್ವಜ ಹಾರಿಸಲಿಲ್ಲ. ಅಲ್ಲಿಗೆ ನಿನ್ನ ಹಾಗೂ ಈ ಚನ್ನಪಟ್ಟಣ ಕ್ಷೇತ್ರದ ಜನರ ನಡುವೆ ಭಾವನಾತ್ಮಕ ಸಂಬಂಧ ಎಲ್ಲಿದೆ? ಹೀಗಾಗಿ ಕುಮಾರಣ್ಣ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ” ಎಂದು ಹರಿಹಾಯ್ದರು.

“ಈ ಕ್ಷೇತ್ರದಲ್ಲಿ ಅನೇಕ ಜನರು ಬಗರ್ ಹುಕ್ಕುಂ ಸಾಗುವಳಿಗೆ ಅರ್ಜಿ ಹಾಕಿದ್ದೀರಿ. ಅನೇಕರು ನಿವೇಶನ, ಮನೆಯಿಲ್ಲ ಎಂದು ಅರ್ಜಿ ಹಾಕಿದ್ದೀರಿ. ನಾನು ಇಲ್ಲಿ ಭೇಟಿ ಮಾಡಿ ನಿಮ್ಮ ಅರ್ಜಿ ನೋಡಿದ ಬಳಿಕ ಈ ಭಾಗದಲ್ಲಿ ನೂರಾರು ಎಕರೆ ಜಮೀನು ಖರೀದಿ ಮಾಡಿ ನಿವೇಶನ ಹಂಚಲಾಗುತ್ತಿದೆ. 5 ಸಾವಿರ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿಸಿದ್ದೇನೆ. ಈ ಕೆಲಸ ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿರಲಿಲ್ಲವೇ?” ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net