

ರಾಣೆಬೆನ್ನೂರ: ಕಾರ ಹುಣ್ಣಿಮೆ ನಿಮಿತ್ತ ತಾಲೂಕಿನ ಇಟಗಿ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು. ಹೋರಿಗಳ ಓಟ ನೆರೆದಿದ್ದ ಪ್ರೇಕ್ಷಕರ ಮೈನವಿರೇಳಿಸುವಂತೆ ಮಾಡಿತು.
ಮೆಚ್ಚಿನ ಹೋರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಶಿಳ್ಳೆ, ಕೇಕೆ ಹಾಕುತ್ತಾ, ಹೋರ್ಷದ್ಗಾರ ಮಾಡುತ್ತಾ ಹೋರಿಯನ್ನು ಹುರಿದುಂಬಿಸುತ್ತಿದ್ದರು. ಹೋರಿಯ ಕೊರಳಿನಲ್ಲಿದ್ದ ಕೊಬ್ಬರಿಯನ್ನು ಹರಿಯಲು ಯುವಕರ ಗುಂಪು ಮುಗಿಬೀಳುತ್ತಿತ್ತು. ಕೆಲವು ಹೋರಿಗಳು ಜನರ ಗುಂಪನ್ನು ಭೇದಿಸುತ್ತಾ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದವು.
ಬೆಳಗ್ಗೆ ಗ್ರಾಮದ ರೈತರು ತಮ್ಮ ತಮ್ಮ ಎತ್ತುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ರಿಬ್ಬನ್ ಕಟ್ಟಿ, ಕೊರಳಿಗೆ ಗೆಜ್ಜೆ ಹಾಗೂ ಅಲಂಕೃತ ವಸ್ತುಗಳಿಂದ ಸಿಂಗರಿಸಿ, ಪೂಜೆ ಸಲ್ಲಿಸಿದರು. ನಂತರ ಕಣಿ, ತಮಟೆ ವಾದ್ಯಗಳೊಂದಿಗೆ ಗ್ರಾಮದಲ್ಲೆಲ್ಲ ಮೆರವಣಿಗೆ ನಡೆಸಿ ಕುಣಿದು ಕುಪ್ಪಳಿಸಿದರು. ಗ್ರಾಮದ ಬಸವೇಶ್ವರ ದೇಗುಲದವರೆಗೆ ಮೆರವಣಿಗೆ ಮೂಲಕ ಕರೆದೊಯ್ದರು. ನಂತರ ಹೋರಿಗಳನ್ನು ಸ್ಪರ್ಧೆಗೆ ಬಿಡಲಾಯಿತು.