

Weather Update 17-08-2023: ಮುಂದಿನ ನಾಲ್ಕು ದಿನಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
IMD ಪ್ರಕಾರ, ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 15 ರಿಂದ 19 ರವರೆಗೆ ಉತ್ತರಾಖಂಡದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹೇಳಿದೆ.ಈಗಾಗಲೇ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ತಸ್ತಗೊಂಡಿದ್ದು, 71 ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದೆಡೆ ಮುಂದಿನ ಎರಡು ದಿನಗಳಲ್ಲಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಸ್ಕೈಮೆಟ್ ಉಪಾಧ್ಯಕ್ಷ ಮಹೇಶ್ ಪಲಾವತ್ ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಆಗಸ್ಟ್ 20ರವರೆಗೆ ರಾಜ್ಯದಲ್ಲಿ ಮಳೆ ಕೊರತೆ ಕಾಣಿಸಲಿದೆ. ಆದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಅತಿ ಹೆಚ್ಚು ಮಳೆ ಆಗಲಿದೆ ಎಂದು ಇಲಾಖೆ ತಿಳಿಸಿದೆ. ಇನ್ನೊಂದೆಡೆ ಮಲೆನಾಡಿನಲ್ಲಿಯೂ ಅಲ್ಲಲ್ಲಿ ಚದುರಿದ ಮಳೆ ಆಗಲಿದೆ.
ಹವಾಮಾನ ಇಲಾಖೆ ಡೆಹ್ರಾಡೂನ್ ಪ್ರಕಾರ, ನೈನಿತಾಲ್, ಚಂಪಾವತ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ, ಡೆಹ್ರಾಡೂನ್, ತೆಹ್ರಿ, ಪೌರಿ ಮತ್ತು ಅಲ್ಮೋರಾ ಜಿಲ್ಲೆಗಳಲ್ಲಿ ಮತ್ತು ಉತ್ತರಾಖಂಡದ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಿದೆ. ಇದಲ್ಲದೆ, ಉತ್ತರಾಖಂಡದ ಪೌರಿ, ನೈನಿತಾಲ್, ಚಂಪಾವತ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.