Grandparents Memories: ಮನೆಗೆ ಅಜ್ಜ-ಅಜ್ಜಿ ಬಂದಾಗ ಅಥವಾ ಅವರ ಜತೆ ಮಾತಾಡುವಾಗ, ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಕಣಪ್ಪಾ.. ‘ನಾವಿದ್ದಾಗಿನ ಜೀವನವೇ ಬೇರೆ ಬಿಡು’ ಅನ್ನೋ ಮಾತು ಕೇಳಿರ್ತೀರಾ. ಇಂದಿನ ಕಾಲದ ಬಗ್ಗೆ ಏನಾದರೂ ಹೇಳಿದ್ರೆ ಸಾಕು, ಹಳೆಯ ದಿನಗಳ ಕಥೆ ಶುರುವಾಗಿಬಿಡುತ್ತೆ. ಹಾಗಾದ್ರೆ ಹಿರಿಯರು ಯಾಕೆ ಪದೇ ಪದೇ ತಮ್ಮ ಕಾಲವನ್ನೇ ಹೊಗಳ್ತಾರೆ? ಇದರ ಹಿಂದೆ ಬರೀ ಹಳೆಯ ನೆನಪುಗಳಷ್ಟೇ ಇಲ್ಲ, ಮನೋವಿಜ್ಞಾನ ಮತ್ತು ಮೆದುಳಿನ ಕೆಲಸ ಮಾಡುವ ರೀತಿಯೂ ಇದೆ.
ಮನೋವಿಜ್ಞಾನದಲ್ಲಿ ಇದನ್ನು ‘ರೆಮಿನಿಸೆನ್ಸ್ ಬಂಪ್’ (Reminiscence Bump) ಅಂತಾರೆ. ಸಾಮಾನ್ಯವಾಗಿ ಮನುಷ್ಯರಿಗೆ 10ರಿಂದ 30 ವರ್ಷದ ನಡುವಿನ ಘಟನೆಗಳು ಹೆಚ್ಚು ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುತ್ತವೆ. ಮೊದಲ ಕೆಲಸ, ಮದುವೆ, ಸ್ನೇಹ, ಹೊಸ ಅನುಭವಗಳು ಹೀಗೆ ಆ ವಯಸ್ಸಿನಲ್ಲಿ ನಡೆಯುವ ಪ್ರಮುಖ ಘಟನೆಗಳು ಮನಸ್ಸಿನಲ್ಲಿ ಗಟ್ಟಿಯಾಗಿ ಅಚ್ಚೊತ್ತಿರುತ್ತವೆ. ಹೀಗಾಗಿ ಹಿರಿಯರಿಗೆ ತಮ್ಮ ಯೌವನದ ದಿನಗಳೇ ಜೀವನದ ಅತ್ಯುತ್ತಮ ಸಮಯ ಅನ್ನಿಸಬಹುದು.
ಇದಕ್ಕೆ ಇನ್ನೊಂದು ಕಾರಣ ‘ರೋಸಿ ರೆಟ್ರೋಸ್ಪೆಕ್ಷನ್’ (Rosy Retrospection). ಅಂದ್ರೆ, ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವಾಗ ಕೆಟ್ಟ ಅನುಭವಗಳಿಗಿಂತ ಒಳ್ಳೆಯ ಕ್ಷಣಗಳೇ ಹೆಚ್ಚು ನೆನಪಾಗುವುದು. ಹಿಂದಿನ ಕಾಲದಲ್ಲಿ ಕಷ್ಟ, ನೋವು, ಸಮಸ್ಯೆಗಳೂ ಇದ್ದಿರುತ್ತವೆ. ಆದರೆ ವರ್ಷಗಳು ಕಳೆದಂತೆ ಅವುಗಳ ತೀವ್ರತೆ ಕಡಿಮೆಯಾಗಿ, ಖುಷಿ ಕೊಟ್ಟ ಘಟನೆಗಳೇ ಹೆಚ್ಚು ನೆನಪಿಗೆ ಬರುತ್ತವೆ. ಅದಕ್ಕೇ ‘ನಮ್ಮ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು’ ಅನ್ನೋ ಭಾವನೆ ಮೂಡಬಹುದು.
ವಯಸ್ಸಾದಂತೆ ತಮ್ಮ ಅನುಭವ ಮತ್ತು ಜೀವನದ ಪಾಠಗಳನ್ನು ಮುಂದಿನ ಪೀಳಿಗೆಯ ಜತೆ ಹಂಚಿಕೊಳ್ಳಬೇಕು ಅನ್ನೋ ಆಸೆ ಹಿರಿಯರಲ್ಲಿ ಹೆಚ್ಚಿರಬಹುದು. ತಾವು ಜೀವನದಲ್ಲಿ ಕಂಡ ಏಳುಬೀಳು, ಮಾಡಿದ ಸಾಧನೆಗಳನ್ನು ಹೇಳಿಕೊಳ್ಳುವ ಮೂಲಕ ತಮ್ಮ ಅನುಭವಕ್ಕೂ ಬೆಲೆ ಇದೆ ಅನ್ನೋದನ್ನು ತೋರಿಸಲು ಬಯಸುತ್ತಾರೆ. ಮೊಮ್ಮಕ್ಕಳಿಗೆ ಒಳ್ಳೆಯ ದಾರಿ ತೋರಿಸಬೇಕು ಅನ್ನೋ ಉದ್ದೇಶವೂ ಇದರ ಹಿಂದಿರಬಹುದು.
ತಂತ್ರಜ್ಞಾನ, ಜೀವನಶೈಲಿ, ಜನರ ಆಲೋಚನೆ ಎಲ್ಲವೂ ವೇಗವಾಗಿ ಬದಲಾಗುತ್ತಿವೆ. ಇಂತಹ ಬದಲಾವಣೆಗಳಿಗೆ ಹೊಂದಿಕೊಳ್ಳಲು ಕೆಲ ಹಿರಿಯರಿಗೆ ಕಷ್ಟವಾಗಬಹುದು. ವಯಸ್ಸಿನ ಜತೆಗೆ ಹೊಸ ವಿಷಯಗಳನ್ನು ಕಲಿಯುವ ವೇಗದಲ್ಲೂ ಬದಲಾವಣೆ ಆಗಬಹುದು. ತಮಗೆ ಪರಿಚಯವಿರುವ ಹಳೆಯ ಪದ್ಧತಿಗಳೇ ಹೆಚ್ಚು ಸರಿಯೆನಿಸುವುದು ಸಹಜ. ಆದರೆ ಎಲ್ಲ ಹಿರಿಯರೂ ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದರ್ಥವಲ್ಲ.
ಅಜ್ಜ-ಅಜ್ಜಿಯರು ಹಳೆಯ ದಿನಗಳ ಕಥೆ ಹೇಳೋದು ಬರೀ ತಮ್ಮ ಕಾಲವನ್ನು ಹೊಗಳಿಕೊಳ್ಳಲು ಮಾತ್ರ ಅಲ್ಲ. ಮೊಮ್ಮಕ್ಕಳ ಜತೆ ಸಮಯ ಕಳೆಯಲು, ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳಲು ಇದು ಒಂದು ಒಳ್ಳೆಯ ಅವಕಾಶ. ಇಂತಹ ಮಾತುಕತೆಗಳು ಕುಟುಂಬದ ಸದಸ್ಯರ ನಡುವಿನ ಆತ್ಮೀಯತೆಯನ್ನೂ ಹೆಚ್ಚಿಸುತ್ತವೆ.
ಅಜ್ಜ-ಅಜ್ಜಿಯರು ತಮ್ಮ ಕಾಲವನ್ನು ನೆನಪಿಸಿಕೊಳ್ಳುವುದರ ಹಿಂದೆ ಯೌವನದ ನೆನಪುಗಳು, ಸಿಹಿ ಅನುಭವಗಳು ಮತ್ತು ಜೀವನದ ಬಗ್ಗೆ ಇರುವ ಹೆಮ್ಮೆ ಪ್ರಮುಖ ಕಾರಣಗಳಾಗಿವೆ. ಹಾಗಂತ ಹಿಂದಿನ ಕಾಲವೇ ಚೆನ್ನಾಗಿತ್ತು, ಈಗಿನ ಕಾಲ ಕೆಟ್ಟದ್ದು ಅಂತಲ್ಲ. ಪ್ರತಿ ಕಾಲಕ್ಕೂ ಅದರದ್ದೇ ಆದ ಒಳ್ಳೆಯ ಮತ್ತು ಕೆಟ್ಟ ಅಂಶಗಳಿರುತ್ತವೆ. ಹೀಗಾಗಿ ಹಿರಿಯರು ಹಳೆಯ ದಿನಗಳ ಕಥೆ ಹೇಳುವಾಗ ಸ್ವಲ್ಪ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವರ ಅನುಭವಗಳಲ್ಲಿ ನಮ್ಮ ಬದುಕಿಗೂ ಬೇಕಾದ ಹಲವು ಪಾಠಗಳು ಅಡಗಿರಬಹುದು.