

ಶಿವಮೊಗ್ಗ: ಮನುಜರೆಲ್ಲರೂ ಸಮಾನರೆಂದು ಜಗತ್ತಿಗೆ ಸಾರಿದವರು ದಾಸಶ್ರೇಷ್ಠ ಕನಕದಾಸರು. ಅವರ ಜಯಂತಿ ಕೇವಲ ಸರ್ಕಾರದ ಆಚರಣೆಗೆ ಸೀಮಿತವಾಗಬಾರದು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘದ ಆಶ್ರಯದಲ್ಲಿ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ತತ್ವಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಧರ್ಮ ಎಂದರೆ ಆತ್ಮದ ಶುದ್ದೀಕರಣ. ಹೃದಯ ಶುದ್ದವಾಗಿದ್ದರೆ ಮಾತ್ರ ಧನಾತ್ಮಕ ಚಿಂತನೆ ಸಾಧ್ಯ ಎಂಬುದನ್ನು ಕನಕದಾಸರು ನಂಬಿದ್ದರು. ವಿಜಯನಗರ ಸಾಮ್ರಾಜ್ಯದಲ್ಲಿ ಯೋಧನಾಗಿ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದ ಅವರು ಜನರ ಸಂಕಷ್ಟಗಳನ್ನು ನೋಡಿ, ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿದು ತಮ್ಮ ಗೀತೆಗಳು, ಕೀರ್ತನೆಗಳ ಮೂಲಕ ಪರಿಹಾರ ತೋರಿದವರು. ಬಸವ ತತ್ವಗಳನ್ನು ಅಳವಡಿಕೊಂಡ ಅವರು ನುಡಿದಂತೆ ನಡೆದು ಶೋಷಿತರ ಧ್ವನಿಯಾಗಿದ್ದರು. ನಾವೆಲ್ಲ ಸಮಾನರು ಎಂಬ ತತ್ವದೊಂದಿಗೆ ಬಡವರ ಸಂಕಷ್ಟಕ್ಕೆ ಮಿಡಿದವರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಸಾಗಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ (ಪ್ರಭಾರ) ಡಾ. ಎನ್.ಕೆ.ಚಿದಾನಂದ, ಮಹಾನ್ ಮಾನವತಾವಾದಿ, ದಾರ್ಶನಿಕರಾದ ಕನಕದಾಸರು ಪಂಚಮವೇದದಲ್ಲಿ ಪ್ರಮಯಖ ನಾಯಕರಾಗಿ ನೆಲೆಗೊಂಡಿದ್ದಾರೆ. ರಾಜಕಾರಣ, ದಾರ್ಶನಿಕತೆ ಮತ್ತು ಅಕ್ಷರಗಳನ್ನು ಶ್ರೇಷ್ಠ ವಾಗಿ ಅಪ್ಪಿಕೊಂಡು ಸಾಗಿದವರು ಕನಕದಾಸರು. ಬಾಡಾ ನಗರ ವ್ಯಾಪಾರಿ ತಾಣವಾಗಿದ್ದು, ತಂದೆ ಬೀರಪ್ಪ ನಾಯಕರು ಅಲ್ಲಿನ ಮುಖ್ಯಸ್ಥರಾಗಿದ್ದರು. ತಂದೆಯಿಂದ ಸಕಲ ವಿದ್ಯೆಗಳನ್ನು ಕನಕರು ಪಡೆದಿದ್ದರು ಎಂದರು.
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನ ಕುಮಾರ್ ಮಾತನಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಎಸ್.ಪಿ.ಶೇಷಾದ್ರಿ, ರೇಖಾ ರಂಗನಾಥ ಮತ್ತಿತರರು ಉಪಸ್ಥಿತರಿದ್ದರು.