

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಆತಂಕವಾದವನ್ನು, ಜಾತೀವಾದವನ್ನು, ಕೋಮುವಾದವನ್ನು ಭಯೋತ್ಪಾದನೆಯನ್ನು, ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತು ನಿಮೂಲ ಮಾಡುತ್ತೇವೆ ಎಂಬ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ, ಹಲವು ವರುಷಗಳಿಂದ ಹೇಳುತ್ತಲೇ ಇರುವ ಒಂದು ಮಹಾಸುಳ್ಳಲ್ಲವೇ?
ಯಾವುದೇ ಮುಲಾಜಿಲ್ಲದೆ ಭ್ರಷ್ಟ ಅಧಿಕಾರಿಗಳ, ರಾಜಕಾರಣಿಗಳ ಹಗರಣಗಳನ್ನು ಅತಿ ಶೀಘ್ರದಲ್ಲಿ ಬಯಲು ಮಾಡಿ, ಅವರಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂಬ ಆಶ್ವಾಸನೆ ಒಂದು ದೊಡ್ಡ ಸುಳ್ಳಲ್ಲವೇ? ಕೈಗೆ ಸಿಗದೆ ಈ ಕಳ್ಳರನ್ನು ಹಿಡಿಯುವುದುಂಟೇ? ಹಿಡಿದರೂ ಅವರಿಗೆ ಜೈಲು ಶಿಕ್ಷೆ ಆಗಿದ್ದುಂಟೇ? ಭ್ರಷ್ಟ ರಾಜಕಾರಣಿಗಳ ನಿಧನದ ಶೋಕ ಸಂತಾಪ ಸೂಚಕ ಸಭೆಯಲ್ಲಿ ಇವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂಬ ನಾಯಕರ ಕಣ್ಣೀರು ಒಂದು ಸುಳ್ಳು, ಆದರೆ ಅವರಿಂದ ರಾಜ್ಯದ ಬೊಕ್ಕಸಕ್ಕೆ ತುಂಬಲಾರದ ನಷ್ಟವಾಗಿದೆ ಅನ್ನೋದು ಬಹುತೇಕ ಒಂದು ಸತ್ಯ.
ಸಚಿವರೊಬ್ಬರು ಮುಖ್ಯ ಅತಿಥಿಯಾಗಿ ಆಗಮಿಸಬೇಕಾದ ಸಮಾರಂಭದಲ್ಲಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಸಚಿವರು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂಬ ಸಂಯೋಜಕರ ಮಾತು ಒಂದು ಸಣ್ಣ ಸುಳ್ಳಲ್ಲವೇ! ವಾಸ್ತವದಲ್ಲಿ ಅದು ಕೆಲವೇ ಕ್ಷಣಗಳಲ್ಲಿ; ಕೆಲವು ಗಂಟೆಗಳೇ ಆಗಿರುತ್ತದೆ. ತಡವಾಗಿ ಬಂದ ಸಚಿವರ ಬಗ್ಗೆ ಈಗ ಸಚಿವರಿಂದ ಎರಡು ಮಾತುಗಳು ಎಂಬುದಾಗಿ ನಿರೂಪಣಾಕಾರರು ಹೇಳಿದರೂ, ಅದು ಒಂದು ದೊಡ್ಡ ಸುಳ್ಳು. ಕಾರಣ ಎರಡೆರಡು ಮಾತುಗಳ 2 ಗಂಟೆಯ ಭಾರೀ ಭಯಂಕರ ಭಾಷಣ ಅದು.
ರಾಜಕಾರಣಿಗಳಿಗೆ ಇಂದು ಹೀಗೆ ಹೇಳಿದರೆ ಸರಿ; ನಾಳೆ ಹಾಗೆ ಹೇಳಿದರೆ ಸರಿ; ನಾಡಿದ್ದು ಹೀಗೇನೂ ಹೇಳಿಲ್ಲವೆಂದರೂ ಸರೀನೇ. ಸಭಾ ಕಾರ್ಯಕ್ರಮದ ಮಧ್ಯೆ ಯಾರಾದರೊಬ್ಬರು ಮೊಬೈಲ್ ಫೋನನ್ನು ತಮ್ಮ ಕಿವಿಗೆ ಒತ್ತಿಕೊಂಡು ತುರ್ತಾಗಿ ಎದ್ದು ಹೊರಗೆ ಹೋದರೆ, ಅವರಿಗೆ ಕರೆ ಬಂದಿದೆ ಎಂಬ ಅರ್ಥವಲ್ಲ. ಸಭೆಯಿಂದ ನಿರ್ಗಮಿಸಲು ನೆಪ ಅಷ್ಟೇ. ಸೀರೆ ಅಂಗಡಿಯಲ್ಲಿ ಚಾಲಾಕೀ ಸೇಲ್ಸ್ ಮನ್, ‘ಮೇಡಂ ಈ ಸೀರೆ ನಿಮಗೆ ಹೇಳಿ ಮಾಡಿಸಿದಂತಿದೆ. ನಿಮಗೆ ತುಂಬಾ ಸೂಟ್ ಆಗುತ್ತೆ’ ಎನ್ನುವ ಮಾತೂ ಒಂದು ಸುಳ್ಳೇ. ಕಾರಣ ಇದೇ ಮಾತನ್ನು ಆತ ಎಲ್ಲಾ ಗಿರಾಕಿಗಳಿಗೂ ಹೇಳುತ್ತಾನೆ.
ನನ್ನ 30 ವರುಷದ ಶಿಕ್ಷಕ ವೃತ್ತಿಯಲ್ಲಿ, ನಿಮ್ಮದು ಅತ್ಯುತ್ತಮ ಬ್ಯಾಚ್ ಎಂಬುದಾಗಿ, ಅವರ ಬೀಳ್ಕೊಡುಗೆ ಸಮಾರಂಭದಲ್ಲಿ, ಕಾಲೇಜು ಪ್ರಾಂಶುಪಾಲರು ಹೇಳಿದರೆ, ಅದು ಒಂದು ಶಿಷ್ಟಾಚಾರ ಅಷ್ಟೆ. ಇದೇ ಮಾತನ್ನು ಅವರು ಪ್ರತೀ ಬ್ಯಾಚ್ಗೂ ಹೇಳುತ್ತಾರೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತದೆ ಎಂಬುದು ಒಂದು ಒಳ್ಳೆಯ ಮಾತಾದರೂ ಅನುಭವಿಸೋದು ಭೂಮಿಯ ಮೇಲೆ ಎಂಬುದು ಸತ್ಯ.
ಇವರಿಬ್ಬರೂ ಆದರ್ಶ ದಂಪತಿಗಳು ಅನ್ನುವ ಮಾತಲ್ಲೂ ಸ್ವಲ್ಪ ಸುಳ್ಳು ಸೇರಿದೆ. ಕಾರಣ, ಆದರ್ಶ ದಂಪತಿಗಳೆನ್ನುವವರು ಬಹಳ ಅಪರೂಪ. ಇವರು ಹೆಂಡತಿಗೆ ಹೆದರುವ ಗಂಡಸರೇ ಅಲ್ಲ ಅನ್ನೋದು ಕೂಡಾ ಒಂದು ಸುಳ್ಳಿನ ಕಂತೆ. ಕಾರಣ, ಜಗತ್ತಿನಲ್ಲಿ ಎರಡೇ ತರಹದ ಗಂಡಂದಿರು-ಹೆಂಡತಿಗೆ ಹೆದರುವವರು ಮತ್ತು ಹೆಂಡತಿಗೆ ಹೆದರುವುದಿಲ್ಲವೆಂದು ಸುಳ್ಳು ಹೇಳುವವರು!
ಗೆಳೆಯರು ತಮ್ಮ ಮಿತ್ರನಿಗೆ ದೂರದಲ್ಲಿರುವ ಒಂದು ಹುಡುಗಿಯನ್ನು ತೋರಿಸಿ ಆಕೆ ನಿನ್ನನ್ನೇ ನೋಡುತ್ತಿದ್ದಾಳೆ ಅನ್ನೋದೂ ಒಂದು ಅಪ್ಪಟ ಸುಳ್ಳು. ವಾಸ್ತವವಾಗಿ ಆಕೆ ಇರುವ ಎಲ್ಲಾ ಹುಡುಗರನ್ನೂ ನೋಡುತ್ತಿರುತ್ತಾಳೆ. ಅವನಿಗೆ ಮೊದಲು ಮದುವೆ ಮಾಡಿ ಬಿಡಿ, ಹುಡುಗ ಎಲ್ಲಾ ಸರಿಹೋಗುತ್ತಾನೆ ಅನ್ನುವ ಮಾತು ಕೂಡಾ ಎಲ್ಲಾ ಕಡೆ ಸರಿಹೋಗದು.
ಕಾರಣ ಕೆಲವೊಮ್ಮೆ ಲಗ್ನದ ವೇಳೆ ಸಪ್ತಪದಿ ತುಳಿದ ಹುಡುಗ, ಮದುವೆಯ ನಂತರ ಗುಪ್ತಪದಿ ಇಡುತ್ತಾನೆ. ಬಸ್ಗಾಗಿ ಬಹಳ ಹೊತ್ತಿನಿಂದ ಕಾಯುತ್ತಿರುವ ಪ್ರಯಾಣಿಕರಿಗೆ ಅಷ್ಟರಲ್ಲೇ ಬಂದ ಬಸ್ನ ಕಂಡಕ್ಟರ್, ಮತ್ತೊಂದು ಬಸ್ ಖಾಲಿ ಬರ್ತಾ ಇದೆ ಅನ್ನೋದೂ ಒಂದು ಸುಳ್ಳೇ. ಇಂತಹ ಸತ್ಯವೆಂದೆನಿಸುವ ಸುಳ್ಳುಗಳಿವೆ. ಆದರೆ ಯಾವುದು ಸುಳ್ಳು ಯಾವುದು ಸತ್ಯವೆಂಬುದನ್ನು ಅರಿತುಕೊಳ್ಳುವ ಜಾಣ್ಮೆ ನಮಗಿರಬೇಕು !
(ಪ್ರತಿಕ್ರಿಯಿಸಿ: drputhuraya@yahoo.co.in)