

ಬೆಂಗಳೂರು: ಒಂದು ಸಮುದಾಯ ಸೇರಿ ಸಭೆ ಮಾಡುತ್ತೇವೆ ಎಂಬುದನ್ನು ಹೈಕಮಾಂಡ್ ಗಮನಿಸಿದೆ, ಇದನ್ನೆಲ್ಲ (ಪಕ್ಷ ಸಂಘಟನೆ) ಗಮನಿಸಿರಲ್ಲವಾ? ಗಮನಿಸುತ್ತಾರೆ. ಸೂಕ್ತ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಏನು ಮಾಡುತ್ತದೆ ನೋಡಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಪಕ್ಷ ಸಂಘಟನೆ ಸಂಪೂರ್ಣವಾಗಿ ನಿಂತಿದೆ ಮತ್ತು ಸರ್ಕಾರ ಬಂದ ನಂತರ ಪಕ್ಷದ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ನಿಮಗೆ ಅನ್ನಿಸುತ್ತದೆಯೇ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಸಂಘಟನೆ ದೊಡ್ಡ ಜವಾಬ್ದಾರಿ. ಈ ವಿಚಾರದಲ್ಲಿ ಹೈಕಮಾಂಡ್ ಏನು ಮಾಡುತ್ತದೆ ನೋಡಬೇಕು ಎಂದರು.
ಸ್ವಾಭಾವಿಕವಾಗಿ ಅಧ್ಯಕ್ಷ ಸ್ಥಾನ ಹಾಗೂ ಎರಡು ದೊಡ್ಡ ಖಾತೆಗಳಿರುವುದರಿಂದ ಬದಲಾಯಿಸಿ, ಬೇರೆಯವರನ್ನು ಮಾಡಬೇಕು ಅಂತ ಕೇಳುತ್ತಾರೆ. ನಾನು ಕೆಪಿಸಿಸಿ ಅಧ್ಯಕ್ಷನಿದ್ದಾಗ ನನಗೂ ಇದೇ ಪರಿಸ್ಥಿತಿ ಬಂದಿತ್ತು ಎಂದು ಹೇಳಿದರು.
ನಾನು ಕೆಪಿಸಿಸಿ ಅಧ್ಯಕ್ಷ ಮತ್ತು ಸಚಿವನಾಗಿದ್ದಾಗ ಮಂತ್ರಿ ಸ್ಥಾನವನ್ನಾದರು ಆಯ್ಕೆ ಮಾಡಿಕೊಳ್ಳಿ ಅಥವಾ ಅಧ್ಯಕ್ಷರಾಗಿಯಾದರು ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳಿತ್ತು. ಪಕ್ಷ ಸಂಘಟನೆಗೆ ಪ್ರಾಮುಖ್ಯತೆ ಕೊಟ್ಟು, ನಾನು ಅಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಹೇಳಿ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಅಭಿಪ್ರಾಯವೇನು ಎಂದ ಪ್ರಶ್ನಿಸಿದ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಅವರು ಸುರ್ಜೇವಾಲರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಒತ್ತಾಯ ಮಾಡಿದ್ದು ನಿಜ. ಸಿಎಂ ಆಯ್ಕೆ ಸಂದರ್ಭದಲ್ಲಿ ಲೋಕಸಭಾ ಚುನಾವಣೆವರೆಗೆ ಅಧ್ಯಕ್ಷರಾಗಿ ಮುಂದುವರೆಸುವುದಾಗಿ ಎಐಸಿಸಿ ನಾಯಕರು ಹೇಳಿದ್ದರು. ಇದನ್ನು ನೆನಪಿಸಲು ಹೋಗಿರುವುದಾಗಿ ಸತೀಶ್ ಹೇಳಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಸಚಿವರ ಹೆಸರು ಉಲ್ಲೇಖಿಸಿ ಪತ್ರ ಬರೆದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವರದಿ ಕೊಡುವವರನ್ನು ಯಾರು ಬೇಡ ಅನ್ನುತ್ತಾರೆ. ವರದಿ ತೆಗೆದುಕೊಳ್ಳಲು ಅವರಿದ್ದಾರೆ, ಕೊಡಲು ಇವರಿದ್ದಾರೆ ಎಂದು ಹೇಳಿದರು.