

ಕಾನ್ಪುರ: ಆದಾಯ ತೆರಿಗೆ ಇಲಾಖೆ ಕಾನ್ಪುರ ಮೂಲದ ತಂಬಾಕು ಕಂಪನಿಯೊಂದರ ಮೇಲೆ ದಾಳಿ ನಡೆಸಿ 4.5 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಶುಕ್ರವಾರ (ಮಾ.01) ಮಾಹಿತಿ ನೀಡಿವೆ. ರೋಲ್ಸ್ ರಾಯ್ಸ್ ಫ್ಯಾಂಟಮ್, ಮೆಕ್ಲಾರೆನ್, ಲಂಬೋರ್ಗಿನಿ ಮತ್ತು ಫೆರಾರಿ ಸೇರಿದಂತೆ 60 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಐಷಾರಾಮಿ ಕಾರುಗಳು ದೆಹಲಿಯಲ್ಲಿರುವ ಕಂಪನಿ ಮಾಲೀಕರ ನಿವಾಸದಲ್ಲಿ ಪತ್ತೆಯಾಗಿವೆ.
ಕಾನ್ಪುರ ಮೂಲದ ಬನ್ಸಿಧರ್ ಟೊಬ್ಯಾಕೋ ಪ್ರೈವೇಟ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ತಂಡ ಗುರುವಾರ ಸಂಜೆ ದಾಳಿ ನಡೆಸಿದೆ. ಗುಜರಾತ್, ಆಂಧ್ರಪ್ರದೇಶ ಮತ್ತು ದೆಹಲಿ ಸೇರಿದಂತೆ ಐದು ರಾಜ್ಯಗಳಲ್ಲಿ ಕಂಪನಿಗೆ ಸಂಪರ್ಕ ಹೊಂದಿರುವ ಇತರರ ಗುಂಪುಗಳ ಮೇಲೆ 15ರಿಂದ 20 ತಂಡಗಳು ಏಕಕಾಲದಲ್ಲಿ ಇದೇ ರೀತಿಯ ಹುಡುಕಾಟ ನಡೆಸಿವೆ. ಬೇರೆ ಸಂಸ್ಥೆಗಳಿಗೆ ಕಚ್ಚಾ ಸಾಮಗ್ರಿಗಳನ್ನು ಪೂರೈಸುವ ತಂಬಾಕು ಕಂಪನಿಯು ತೆರಿಗೆ ಮತ್ತು ಜಿಎಸ್‌ಟಿಯನ್ನು ದೊಡ್ಡ ಪ್ರಮಾಣದಲ್ಲಿ ಸಲ್ಲಿಸದೆ ವಂಚಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ.
ಕಂಪನಿಯು 20ರಿಂದ 25 ಕೋಟಿ ವಹಿವಾಟು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ವಾಸ್ತವದಲ್ಲಿ ಈ ವಹಿವಾಟು ಸುಮಾರು 100-150 ಕೋಟಿ ರೂ. ಆಗಿದೆ. ಆದಾಯ ತೆರಿಗೆ ತಂಡವು ಹಲವು ಪ್ರಮುಖ ದಾಖಲೆಗಳು ಮತ್ತು ಲ್ಯಾಪ್‌ಟಾಪ್‌ಗಳ ಜತೆಗೆ ಕಂಪನಿ ಹಾಗೂ ಅದರ ಮಾಲೀಕರ ಆಸ್ತಿ, ಆದಾಯವನ್ನು ಸಮನ್ವಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಕೂಡ ಹಲವೆಡೆ ದಾಳಿ ಮುಂದುವರಿದಿದೆ,(ಏಜೆನ್ಸೀಸ್).