ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದರೆ ತಪ್ಪು

srinivasgowda
ಕೋಲಾರದಲ್ಲಿ ಇ್ಕೋ ಟೊಕಿಯೋ ಸಂಸ್ಥೆಯಿಂದ ಲಾನುಭವಿಗಳಿಗೆ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರು ಚೆಕ್​ಅನ್ನು ವಿತರಿಸಿದರು. ಎಸ್​.ಮುನಿಯಪ್ಪ, ರಮೇಶ್​ ಇದ್ದರು.
Published on

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದರೆ ಅದು ತಪ್ಪು ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದ ಗೃಹ ಕಚೇರಿಯಲ್ಲಿ ಇಫ್ಕೋ ಟೋಕಿಯೋ ಸಂಸ್ಥೆಯಿಂದ 8 ಮಂದಿ ಫಲಾನುಭವಿಗಳಿಗೆ 1.70 ಲಕ್ಷ ರೂ. ಚೆಕ್​ ವಿತರಿಸಿ ಮಾತನಾಡಿ, ಮುಡಾ ಆರೋಪದ ತನಿಖೆ ನಡೆಯುತ್ತಿದೆ, ಸತ್ಯಾಸತ್ಯತೆ ಹೊರ ಬಂದ ಮೇಲೆ ತಪ್ಪಿತಸ್ಥರಿಗೆ ಶಿೆಯಾಗುತ್ತದೆ. ಅಲ್ಲಿಯ ತನಕ ಈ ವಿಚಾರದ ಬಗ್ಗೆ ಮಾತನಾಡುವುದು ತಪ್ಪು ಎಂದರು.
ಆಡಳಿತ ಪಕ್ಷದ ಮೇಲೆ ಪ್ರತಿ ಪಕ್ಷಗಳು ಆರೋಪ, ಪ್ರತಿಭಟನೆ, ಪಾದಯಾತ್ರೆ ಮಾಡುವುದು ಸಹಜ. ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ಜೆಡಿಎಸ್​ ಪಾದಯಾತ್ರೆ ನಡೆಸುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.
ಕೋಲಾರ ಕ್ಷೇತ್ರದ ಶಾಸಕರು, ಎಂಎಲ್ಸಿ ಇತ್ತೀಚೆಗೆ ನನ್ನನ್ನು ಭೇಟಿ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದವರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇರಬೇಕು. ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಆದರೆ ಈ ರೀತಿ ಜಿಲ್ಲೆಯನ್ನು ಮರೆತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ವಿವಿಧ ಕಡೆಗಳಲ್ಲಿ ಮಳೆಯಿಂದಾಗಿ ನೀರು ನಿಂತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈಗ ನಾನು ಜವಾಬ್ದಾರನಲ್ಲ. ನಾನು ಅಧಿಕಾರದಲ್ಲಿದ್ದಾಗ ಯುಜಿಡಿ, ರಸ್ತೆ, ಚರಂಡಿಗಳನ್ನು ಮಾಡಿಸಿದ್ದೆ. ಈಗ ಏನಾಗಿದೆ ಎಂಬುದನ್ನು ಸಂಬಂಧಪಟ್ಟವರನ್ನು ಕೇಳಬೇಕು ಎಂದರು.
ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಉಪಾಧ್ಯಕ್ಷ ಎಸ್​.ಮುನಿಯಪ್ಪ, ಮುಖಂಡ ಹಾರೋಹಳ್ಳಿ ರಮೇಶ್​ ಇತರರಿದ್ದರು.

ರಮೇಶ್​ಕುಮಾರ್​ರಿಂದಲೇ ಈ ಗತಿ
ಕಾಂಗ್ರೆಸ್​ ಪಕ್ಷದಲ್ಲಿ ಶಾಸಕ, ಸಚಿವನಾಗಿದ್ದೆ. ಈಗಲೂ ಪಕ್ಷದಲ್ಲಿದ್ದೇನೆ ಹೊರತು ಯಾವುದೇ ಅಧಿಕಾರವಿಲ್ಲ. ಆ ಮಹಾನುಭಾವ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಮಾತುಗಳನ್ನು ಕೇಳಿ ನಾನು ಕೋಲಾರ ಕ್ಷೇತ್ರವನ್ನು ಬಿಟ್ಟುಕೊಟ್ಟು ಈಗ ಸುಮ್ಮನೆ ಕೂರುವಂತಾಗಿದೆ. ಆತನಿಗೆ ತೋಟವೇ ಮುಖ್ಯವಾಗಿದ್ದು, ಯಾವುದಕ್ಕೂ ತಲೆ ಹಾಕುತ್ತಿಲ್ಲ ಎಂದು ಶ್ರೀನಿವಾಸಗೌಡ ಏಕವಚನದಲ್ಲಿ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net