ಮೋದಿ ಜನಪ್ರಿಯತೆ ಕುಗ್ಗಿರುವುದು ಸಾಬೀತು, ಕಾಂಗ್ರೆಸ್‌ ವೋಟ್‌ ಶೇರ್ ಹೆಚ್ಚಾಗಿದೆ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್

dk
Published on

ಬೆಂಗಳೂರು: “ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಮೋದಿ ಹಾಗೂ ರಾಮಮಂದಿರದ ಅಲೆ ಇಲ್ಲವಾಗಿದೆ ಎಂಬುದನ್ನು ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಲೋಕಸಭೆ ಚುನಾವಣೆ ಫಲಿತಾಂಶ ಕುರಿತಂತೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ರಾಜ್ಯ ಹಾಗೂ ದೇಶದಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಂತಾಗಿದೆ. ದೇಶದಲ್ಲಿ ಭಾವನೆ ಸೋತಿದ್ದು, ಬದುಕು ಗೆದ್ದಿದೆ. ಬಿಜೆಪಿಯವರು 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಅದು ಸಾಧ್ಯವಾಗಿಲ್ಲ. ಅಯೋಧ್ಯೆಯಲ್ಲೇ ಬಿಜೆಪಿ ಸೋತಿದೆ ಎಂದು ಹೇಳಿದರು.

ಡಾ.ಮಂಜುನಾಥ್ ಅವರಿಗೆ ಅಭಿನಂದನೆಗಳು; ಡಿಕೆಶಿ

ರಾಜ್ಯದಲ್ಲಿ ನಾವು 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆ ಕಂಡಿದ್ದೇವೆ. ನಾವು 14 ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ನನ್ನ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರ ಗೆಲುವಿಗೆ ವೈಯಕ್ತಿಕವಾಗಿ ಅವರಿಗೆ ಅಭಿನಂದಿಸುತ್ತೇನೆ. ಅವರ ಪಕ್ಷ ಗೆಲ್ಲುವುದಕ್ಕಿಂತ ಇಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಇಷ್ಟು ದೊಡ್ಡ ಅಂತರದ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಮ್ಮ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಜನ ಅವರನ್ನು ಗೆಲ್ಲಿಸಿದ್ದಾರೆ.

ನನ್ನ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆ ಇತ್ತು. ಆದರೆ ಇಷ್ಟೊಂದು ಅಂತರದ ಸೋಲುವ ನಿರೀಕ್ಷೆ ಮಾಡಿರಲಿಲ್ಲ. ಈ ಫಲಿತಾಂಶದ ಮೂಲಕ ಜನ ಕೊಟ್ಟಿರುವ ಸಂದೇಶ ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪು ಪ್ರಶ್ನಿಸುವುದಿಲ್ಲ. ನಮಗೆ ಇನ್ನೂ ಹೆಚ್ಚಿನ ಸ್ಥಾನ ಬರಬೇಕಾಗಿತ್ತು. ಯಾಕೆ ಕಡಿಮೆ ಬಂದಿದೆ ಎಂದು ಚಿಂತನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಸೀಟು ನಿರೀಕ್ಷೆ ಮಾಡಿದ್ದೆವು. ಜನ ಯಾವ ವಿಚಾರದಲ್ಲಿ ನಮ್ಮನ್ನು ಒಪ್ಪಿಲ್ಲ ಎಂಬುದನ್ನು ಪರಿಶೀಲಿಸಿ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಮೋದಿ ಜನಪ್ರಿಯತೆ ಕುಗ್ಗಿರುವುದು ಸಾಬೀತು: ಮೋದಿ ಅವರ ಜನಪ್ರಿಯತೆ ಕುಗ್ಗಿರುವುದು ಸಾಬೀತಾಗಿದೆ. ಹಿಂದಿ ಭಾಷಿಗರ ಭಾಗದಲ್ಲೂ ಕುಗ್ಗಿರುವುದು ಸ್ಪಷ್ಟವಾಗಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಬೇಕು. ನನ್ನ ಕ್ಷೇತ್ರದಲ್ಲಿ ನನಗೆ ಹಿನ್ನಡೆಯಾಗಿದ್ದಂತೆ ಅಯೋಧ್ಯೆಯಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಳೆದ ಬಾರಿ 303 ಕ್ಷೇತ್ರ ಗೆದ್ದಿದ್ದ ಬಿಜೆಪಿ 243 ಸ್ಥಾನಕ್ಕೆ ಕುಸಿದಿದೆ. ಬಿಜೆಪಿ ನಿಚ್ಚಳ ಬಹುಮತ ಪಡೆದಿಲ್ಲ. ಎನ್ ಡಿ ಎ ಕೂಡ ಹೇಳಿಕೊಂಡಿದ್ದ ಸಾಧನೆ ಮಾಡಿಲ್ಲ. ಬೇರೆ ಪಕ್ಷಗಳ ಮೇಲೆ ಅವಲಂಬಿತವಾಗಿವೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ: 10 ವರ್ಷಗಳ ನಂತರ ಕಾಂಗ್ರೆಸ್ ಪಕ್ಷ 100ರ ಗಡಿ ದಾಟಿದ್ದು, ಜನರು ಮತ್ತೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣೆ ಮನದಟ್ಟು ಮಾಡಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಿರಂತರ ಪರಿಶ್ರಮ ಹೋರಾಟದಿಂದ ಪಕ್ಷ ಚೇತರಿಕೆ ಕಂಡಿದೆ. ಪ್ರಿಯಾಂಕಾ ಗಾಂಧಿ ಅವರ ಕೊಡುಗೆ ಸಾಕಷ್ಟು ಇದೆ. ಕಾಂಗ್ರೆಸ್ ಪಕ್ಷದ ಮತ ಪ್ರಮಾಣ ಕೂಡ ಹೆಚ್ಚಾಗಿದೆ. ಹಳೇ ಮೈಸೂರು ಭಾಗದಲ್ಲಿ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಲೋಕಸಭೆ ಚುನಾವಣೆ ಮತ ಪ್ರಮಾಣ ಕುಸಿದಿದ್ದು, ಮೊದಲಿನಿಂದಲೂ ಈ ರೀತಿ ವ್ಯತ್ಯಾಸ ಕಂಡು ಬಂದಿದೆ. ಎಸ್ ಎಂ ಕೃಷ್ಣ ಅವರ ಸರ್ಕಾರ ಇದ್ದಾಗಲೂ ಹೀಗೆ ಆಗಿತ್ತು. ಅದು ಈ ರಾಜ್ಯದ ರಾಜಕೀಯ ಗುಣ. ಈ ಬಾರಿ ಬದಲಾಗಬಹುದು ಅಂದುಕೊಂಡಿದ್ದೆವು. ಆದರೆ ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನಕಪುರದಲ್ಲಿ 60 ಸಾವಿರ ಮುನ್ನಡೆ ನಿರೀಕ್ಷೆ ಇತ್ತು

ನನ್ನ ಕ್ಷೇತ್ರದಲ್ಲಿ 60 ಸಾವಿರ ಮುನ್ನಡೆ ನಿರೀಕ್ಷೆ ಇತ್ತು. ಆದರೆ 26 ಸಾವಿರ ಮಾತ್ರ ಬಂದಿದೆ. ಚನ್ನಪಟ್ಟಣದಲ್ಲಿ ಅವರಿಗೆ ಉಲ್ಟಾ ಬಂದಿದೆ. ಇದರಿಂದ ನಾವು ಪಾಠ ಕಲಿಯುತ್ತೇವೆ. ವೈಯಕ್ತಿಕವಾಗಿ ಕೆಲವು ಅನುಮಾನಗಳಿವೆ. ಆದರೂ ಜನರ ತೀರ್ಪನ್ನು ಗೌರವಿಸುತ್ತೇನೆ. ಕಲ್ಯಾಣ ಕರ್ನಾಟಕದಲ್ಲಿ ಜನ ನಮಗೆ ಆಶೀರ್ವಾದ ನೀಡಿದ್ದಾರೆ. ಮನ್ಸೂರ್ ಅಲಿ ಖಾನ್ ಅವರು ಕೊನೆ ಹಂತದಲ್ಲಿ ಸೋಲನುಭವಿಸಿದ್ದಾರೆ. ರಾಜಕೀಯದಲ್ಲಿ ಇದು ಸರ್ವೇ ಸಾಮಾನ್ಯ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನಿಷ್ಠ 14 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ ಎಂದು ಭಾವಿಸಿದ್ದೆವು. ಬೆಂಗಳೂರು, ಮುಂಬೈ ಕರ್ನಾಟಕ ಸೇರಿದಂತೆ ಇನ್ನು ಕೆಲವು ಕಡೆ ನಮಗೆ ನಿರೀಕ್ಷಿತ ಮಟ್ಟದ ಫಲಿತಾಂಶ ಬಂದಿಲ್ಲ. ಯಾವ ವರ್ಗ ಯಾಕೆ ನಮ್ಮಿಂದ ದೂರವಾಗಿದೆ ಎಂದು ಪರಿಶೀಲನೆ ಮಾಡುತ್ತೇವೆ. ಹೀಗಾಗಿ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ಕೈ ಹಿಡಿದಿಲ್ಲ ಎಂದು ಹೇಳಲು ಸಾಧ್ಯವಿಲ್ಲ” ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net