ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ

 ಬೆಟ್ಟದಪುರದ ಡಿ.ಟಿ.ಎಂ.ಎನ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಚಂದ್ರಶೇಖರ್, ರವಿ, ಗುರುದತ್, ವಿಜಯಕುಮಾರ್, ಸುಂದ್ರೇಶ್, ಮುರಳಿಕೃಷ್ಣ, ಜಯಂತಿ ಇದ್ದರು.
ಬೆಟ್ಟದಪುರದ ಡಿ.ಟಿ.ಎಂ.ಎನ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಚಂದ್ರಶೇಖರ್, ರವಿ, ಗುರುದತ್, ವಿಜಯಕುಮಾರ್, ಸುಂದ್ರೇಶ್, ಮುರಳಿಕೃಷ್ಣ, ಜಯಂತಿ ಇದ್ದರು.
Published on

ಬೆಟ್ಟದಪುರ: ಗುರುವಿನ ಮಾರ್ಗ, ಸತತ ಪ್ರಯತ್ನವಿದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿ ಮುಟ್ಟುವುದಕ್ಕೆ ಸಾಧ್ಯ ಎಂದು ಡಿಟಿಎಂಎನ್ ವಿದ್ಯಾಸಂಸ್ಥೆ ನಿರ್ದೇಶಕ ಸಿ.ಟಿ. ಗುರುದತ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ವಿದ್ಯಾಸಂಸ್ಥೆಯು ಸತತವಾಗಿ 19ನೇ ಬಾರಿಗೆ ಶೇ.100ಕ್ಕೆ ನೂರು ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳ, ಪಾಲಕರ ಸಲಹೆಗಳನ್ನು ಪಡೆದುಕೊಂಡು ಇದರೊಂದಿಗೆ ಸಮಾಲೋಚನೆ ಸಭೆ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಿದ್ಧತೆ ನಡೆಯುತ್ತಿದೆ. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಮಕ್ಕಳು ಹಬ್ಬ ಹರಿದಿನಗಳು, ರಜೆ ಎಂಬುದನ್ನು ಮರೆತು ನಿರಂತರವಾಗಿ ಅಭ್ಯಾಸ ಮಾಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಪ್ರಾಂಶುಪಾಲ ಎಸ್.ಸತೀಶ್ ಮಾತನಾಡಿ, ಪೋಷಕರು ಮಕ್ಕಳಿಗೆ ಸಮಸ್ಯೆಗಳನ್ನು, ಕಷ್ಟದ ಸಂಗತಿಗಳನ್ನು ತೋರಿಸಬೇಕು. ಪ್ರಾಥಮಿಕ ಹಂತದಲ್ಲಿ ಅವರಿಗೆ ಜೀವನದ ಪರಿಸ್ಥಿತಿಗಳ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಮಕ್ಕಳಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವಂತಹ ಹಾಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬುವ ಹಂಬಲ ಹೆಚ್ಚಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕ ಹಾಗೂ ಪಾಲಕರ ಪಾತ್ರ ಮಾತ್ರ ಮುಖ್ಯವಾಗಿರುತ್ತದೆ. ಹಾಗಾಗಿ ಪಾಲಕರು ಸಹ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಖಜಾಂಚಿ ಪಿ.ರವಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇರುವಂತಹ ವಿಶೇಷ ಪ್ರತಿಭೆಯನ್ನು ಅನಾವರಣ ಮಾಡುವಲ್ಲಿ ನಮ್ಮ ವಿದ್ಯಾಸಂಸ್ಥೆ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸಂಸ್ಥೆ ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಚಂದ್ರಶೇಖರ್, ಆಡಳಿತಾಧಿಕಾರಿ ನಟರಾಜ್, ನಿರ್ದೇಶಕರಾದ ವಿಜಯಕುಮಾರ್, ಸುಂದ್ರೇಶ್, ಮುಖ್ಯಶಿಕ್ಷಕರಾದ ಮುರಳಿಕೃಷ್ಣ, ಜಯಂತಿ, ಹಿಂದಿ ಶಿಕ್ಷಕ ರಾಮಶೆಟ್ಟಿ, ಪಾಲಕರು, ಶಿಕ್ಷಕರು ಇದ್ದರು.

ವಿದ್ಯಾರ್ಥಿಗಳಿಗೆ ಸನ್ಮಾನ: ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ವೇಳೆ ನಡೆದ ಪೋಷಕರ ಸಭೆಯಲ್ಲಿ ಪೋಷಕರು ಮಕ್ಕಳ ಬಗ್ಗೆ ಹೇಗೆ ನಿಗಾ ವಹಿಸಬೇಕು ಮತ್ತು ಶಾಲೆಗೆ ಯಾವ ರೀತಿ ಕಳುಹಿಸಬೇಕು ಎಂಬುದರ ಬಗ್ಗೆ ವಿಡಿಯೋ ಹಾಗೂ ಉಪನ್ಯಾಸದ ಮೂಲಕ ವಿವರವಾಗಿ ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net