ಅಪಾರ ಭಕ್ತಿಯಿಂದ ಶ್ರೀ ಕೃಷ್ಣನನ್ನ ಒಲಿಸಿಕೊಂಡ ಕನಕದಾಸರ ತತ್ವ, ಕೀರ್ತನೆ ಪಾಲಿಸುವುದು ನಮ್ಮ ಕರ್ತವ್ಯ: ಕಪ್ರಕುಸ ಮಾಜಿ ಉಪಾಧ್ಯಕ್ಷ ರಾಮಕೃಷ್ಣಪ್ಪ.

kanaka
Published on

ಮಹದೇವಪುರ: ಕನಕದಾಸರು ತನ್ನ ಅಪಾರವಾದ ಭಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮನನ್ನೆ ತನ್ನತ್ತ ತಿರುಗಿಸಿಕೊಂಡು ದೈವಮಾನವ ಎನಿಸಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಆರ್ ರಾಮಕೃಷ್ಣಪ್ಪ ಹೇಳಿದರು.

ಕ್ಷೇತ್ರದ ಗುಂಜೂರು ಪಾಳ್ಯ ಗ್ರಾಮದಲ್ಲಿ ಸಂತ ಕನಕದಾಸರ 538 ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜಾತಿ ಸಂಕೋಲೆಯನ್ನು ಕಳಚಿದ ಕನಕದಾಸರ ತತ್ವ ಅವರ ಕೀರ್ತನೆಯ ಸಂದೇಶಗಳನ್ನು ಪಾಲಿಸುವುದು ನಾವು ಅವರಿಗೆ ಕೊಡುವ ಅತಿ ದೊಡ್ಡ ಗೌರವವಾಗಿದ್ದು ಮಾನವ ಕುಲ ಇದನ್ನು ಅರಿಯಬೇಕು ಎಂದು ತಿಳಿಸಿದರು.

ನ.12 ರಂದು ಬೆಂಗಳೂರು ನಗರ ಹೃದಯ ಭಾಗವಾದ ಗಾಂಧಿನಗರದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ 6 ಅಂತಸ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. 100 ವರ್ಷಗಳ ಹಳೆಯ ಕಟ್ಟಡವನ್ನು ಕೆಡವಿ ಈಗ ಹೊಸ ಕಟ್ಟಡಕ್ಕೆ ಯೋಜನೆ ರೂಪಿಸಲಾಗಿದೆ. 6 ಅಂತಸ್ತಿನ ಕಟ್ಟಡದಲ್ಲಿ 2 ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ, 2 ಅಂತಸ್ತಿನಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಸಂತ ಕನಕದಾಸರ 538 ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಟಗರು ನಗದು ಹಾಗೂ ಟ್ರೋಫಿ ನೀಡಿ ಸನ್ಮಾನಿಸಿದರು.

ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ಬಾಲಾಜಿ,ಬಸವರಾಜ, ರಮೇಶ್, ಮುನಿಕೃಷ್ಣಪ್ಪ,

ಗೋಪಾಲ, ಮುರಳಿ , ಶ್ರೀಧರ ಮಂಜು, ನಾಗರಾಜ್ ರಘುರಾಮ ರೆಡ್ಡಿ ಸರ್ವೆಶ್,ಅಜಯ್ ಹಾಗೂ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net