

ಒಂದು ಕಣ್ಣಳುವಂದು ಮತ್ತೊಂದ ತಳ್ಕೈಸಿ|
ಅಂದ ಚೆಂದಗಳ ಜನವರಸುವುದು ಬಾಳೊಳ್||
ಬಂಧುಮೋಹವೊ ಯಶವೊ ವೈರವೋ ವೈಭವವೊ||
ಬಂಧಿಪುದು ಜಗಕವರ-ಮಂಕುತಿಮ್ಮ||262||
ಒಂದು ಕಣ್ಣು ಅಳುವಾಗ ಇನ್ನೊಂದು ಕಣ್ಣನ್ನು ಕೈಯಲ್ಲಿ ಎಚ್ಚರಿಕೆಯಿಂದ ತಬ್ಬಿಕೊಂಡು ಜಗತ್ತನ್ನು ಜನರು ನೋಡುತ್ತಾರೆ ಮತ್ತು ಅಂದ-ಚೆಂದಗಳನ್ನು ಅರಸುತ್ತಾರೆ. ಬಂಧುಗಳ ಮೇಲಿನ ಮೋಹವೋ, ಪಡೆದ ಯಶಸ್ಸೋ, ಹಗೆಯೋ ಅಥವಾ ವೈಭವದ ಜೀವಿತವೋ ಯಾವುದೋ ಒಂದು ವ್ಯಕ್ತಿ ಯನ್ನು ಜಗತ್ತಿಗೆ ಬಂಧಿಸುತ್ತದೆ ಎನ್ನುತ್ತದೆ ಈ ಕಗ್ಗ.
ಗುರುಕುಲವೊಂದಕ್ಕೆ ವೃದ್ಧೆಯೊಬ್ಬರು ಪಾಠ ಮಾಡಲು ಬರುತ್ತಿದ್ದರು. ತಮ್ಮ ಕೆಲಸಕ್ಕೆ ಪ್ರತಿಯಾಗಿ ಗೌರವ ಧನವನ್ನೇನೂ ಅವರು ಪಡೆಯುತ್ತಿರಲಿಲ್ಲ. ಗುರುಕುಲದ ವಿದ್ಯಾರ್ಥಿಗಳನ್ನು ತಾಯಿಯಂತೆ ಮಮತೆಯಿಂದ ನೋಡಿ ಕೊಳ್ಳುತ್ತಿದ್ದರು. ತನ್ಮೂಲಕ ತಾವು ಕಳೆದುಕೊಂಡ ಮಗಳನ್ನು ಆ ಮಕ್ಕಳಲ್ಲಿ ಕಾಣುತ್ತಿದ್ದರು. ಮಡಿಲ ಮಗುವನ್ನು ಕಳೆದುಕೊಂಡ ಹೆತ್ತವರ ನೋವು ಶಮನವಾಗುವಂತಹುದಲ್ಲ. ಹಾಗೆಂದು ಅವರು ಸದಾ ಶೋಕತಪ್ತರಾಗಿಯೋ, ಬದುಕನ್ನು ತಿರಸ್ಕರಿಸಿಯೋ ಬಾಳುವುದಿಲ್ಲ.
ನೋವನ್ನು ಮರೆಯಾಗಿಸಲು ಯಾವುದೋ ಒಂದು ಕರ್ತವ್ಯಕ್ಕೆ ಜೋತು ಬೀಳುತ್ತಾರೆ, ಮೋಹದಾಕರ್ಷಣೆಯನ್ನು ಹುಡುಕಿಕೊಳ್ಳುತ್ತಾರೆ. ನೋವು, ನಿರಾಸೆಯಿಂದ ಕಂಗೆಟ್ಟ ಮನಸ್ಸಿಗೆ ಉದ್ದೇಶವೊಂದನ್ನು ಕಂಡುಕೊಂಡು, ಅದಕ್ಕಾಗಿ ಬಾಳಲು ನಿರ್ಧರಿಸುತ್ತಾರೆ. ಆಂತರಿಕ ಶೂನ್ಯತೆಯನ್ನು ತುಂಬಲು ಸದಾ ಪ್ರಯತ್ನಿಸುತ್ತಾರೆ.
ಕೆಲವರು ಯಾವಾಗಲೂ ಋಣಾತ್ಮಕವಾಗಿಯೇ ಪ್ರತಿಕ್ರಿಯಿಸುವುದುಂಟು. ಬದುಕಿನ ಬಗೆಗೆ ಅಸಹನೆ ತೋರುವುದು, ನಿರುತ್ಸಾಹಿ ಗಳಾಗಿರುವುದು ಅವರ ಸ್ವಭಾವವೇ ಆಗಿರುತ್ತದೆ. ಹೀಗಿದ್ದರೂ ಸೊಗಸನ್ನು, ಸೊಬಗನ್ನು ಅರಸಿ ನಡೆಯುವುದನ್ನು ಬಿಡುವುದಿಲ್ಲ. ಸೌಂದರ್ಯದಲ್ಲಿ ನ್ಯೂನತೆ ಯನ್ನೇ ಕಾಣುತ್ತಾರಾದುದರಿಂದ ನಿತ್ಯದುಃಖಿಗಳಾಗಿರುತ್ತಾರೆ.
ಬಂಧು-ಬಾಂಧವರು, ನಿಯೋಜಿತ ಹೊಣೆಗಳು, ಪೂರೈಸಬೇಕಾದ ಕರ್ತವ್ಯ ಗಳು, ಜೀವನಾದರ್ಶ, ಸಿದ್ಧಾಂತಗಳು ವ್ಯಕ್ತಿ ಯನ್ನು ಬದುಕಿಗೆ ಬಂಧಿಸುತ್ತವೆ. ಜೊತೆಗೆ ಇವೆಲ್ಲವೂ ಜೀವನೋತ್ಸಾಹವನ್ನು ತುಂಬುತ್ತವೆ.
ಕೆಲವೊಮ್ಮೆ ಒಂದು ಕಣ್ಣಿಗೆ ನೋವಾಗುವುದು, ಆ ಕಣ್ಣನ್ನು ಬಿಡಿಸಲಾಗದೆ ಒದ್ದಾಡುವಂತಾಗುವುದುಂಟು. ಆಗ ಜನರು ನೋವಾದ ಕಣ್ಣನ್ನು ಅಂಗೈಯಲ್ಲಿ ಮುಚ್ಚಿ ಹಿಡಿದುಕೊಂಡು ಇನ್ನೊಂದು ಕಣ್ಣಿನಿಂದ ಜಗತ್ತನ್ನು ನೋಡಲು ಪ್ರಯತ್ನಿಸುತ್ತಾರೆ. ಅಲ್ಲಿರುವ ನೋಟ, ಮಾಟ, ಆಟಗಳಲ್ಲಿ ತಮ್ಮ ನೋವನ್ನು ಮರೆಯುತ್ತಾರೆ. ಹೀಗೆಯೇ ಬಾಳಿನಲ್ಲಿ ಊಹಿಸದ ಸೋಲು, ನಷ್ಟಗಳು ಸಂಭವಿಸಿದಾಗ ದುಃಖವಾಗುವುದು ಸಹಜ. ಹಾಗೆಂದು ಅದೇ ನೆನಪಿನಲ್ಲಿ ಉಳಿದುಬಿಡುವುದಲ್ಲ.
ಕಹಿನೆನಪುಗಳನ್ನು ನೆನೆನೆನೆದು ವಾಸ್ತವವನ್ನು ಕಡೆಗಣಿಸುವುದು ಸರಿಯಲ್ಲ. ನೋವು, ಸಂಕಟ, ಅಪಮಾನಗಳು ಮನಸ್ಸನ್ನು ಘಾಸಿಗೊಳಿಸುವುದು ನಿಜ. ಹಾಗೆಂದು ಅವುಗಳನ್ನು ಮೆಲುಕು ಹಾಕುತ್ತಾ ನೋವನ್ನು ಇನ್ನಷ್ಟು ಕೆದಕುವುದರಲ್ಲಿ ಅರ್ಥವಿಲ್ಲ.
ಹೀಗೆ ನೋವುಂಡ ಜೀವಗಳು ಜೀವನ್ಮುಖಿಯಾಗುವುದಕ್ಕಾಗಿ ಯಾವುದೋ ಒಂದು ದಾರಿಯನ್ನು ಕಂಡುಕೊಳ್ಳುತ್ತವೆ. ಅದು ನವಿರಾದ, ಮೋಹೋನ್ಮಾದಕ್ಕೆಡೆ ಮಾಡುವ ಬಂಧುತ್ವ, ಉದ್ದೇಶಿತ ಕಾರ್ಯದ ಯಶಸ್ಸು, ಅವಮಾನಕ್ಕೆ ಒಳಗಾದಾಗ ಮೂಡುವ ಹಗೆತನ, ವೈಭವ, ಸುಖದಿಂದ ಕೂಡಿದ ಬಾಳುವೆ ಹೀಗೆ ಯಾವುದೂ ಇರಬಹುದು. ಜೀವನಪ್ರೀತಿಯನ್ನು, ಅದಮ್ಯ ಮೋಹವನ್ನು ವ್ಯಕ್ತಿಯಲ್ಲಿ ಬೆಳೆಯಿಸಿ ಸೋಲಿನಲ್ಲೂ ಗೆಲುವಿನತ್ತ ಮುಖ ಮಾಡಲು ಪ್ರೇರೇಪಿಸುತ್ತದೆ. ಲೋಕ ವ್ಯವಹಾರದಿಂದ ವಿಮುಖನಾಗದಂತೆ ಕಾಯುತ್ತದೆ.
ಪರಸ್ಪರ ಅವಲಂಬಿತವಾಗಿರುವ ಜೀವಿತದಲ್ಲಿ ಲೋಕಸಂಸಾರ ದಿಂದ ದೂರವಾಗಿ ಒಂಟಿಯಾಗಿರಲು ಸಾಧ್ಯವಿಲ್ಲ. ಲೋಕದೊಳಗೆ ಬೆರೆತು ಬಾಳುತ್ತಾ, ಏಳು-ಬೀಳುಗಳನ್ನು ಎದುರಿಸುತ್ತಾ, ಪ್ರತಿಗಳಿಗೆಯಲ್ಲೂ ಅವಿತಿರುವ ಜೀವನನೀತಿಯನ್ನು, ಪಾಠವನ್ನು ಮನನ ಮಾಡಿಕೊಂಡರಷ್ಟೇ ಅರಿವು ವಿಸ್ತರಿಸುತ್ತದೆ. ಈ ಅರಿವಿನ ಹಾದಿಯು ವ್ಯಕ್ತಿಯನ್ನು ಪರಿಪಕ್ವಗೊಳಿಸುತ್ತದೆ. ಮಾಗಿದ ಜೀವವು ಸಂಸಾರ ಬಂಧನಗಳಿಂದ ಮುಕ್ತವಾಗುತ್ತದೆ.
(ಲೇಖಕರು ಉಪನ್ಯಾಸಕರು, ಕವಯಿತ್ರಿ) (ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)