ಕ್ರೀಡೆಗಳಲ್ಲಿ ರಾಜಕಾರಣ ಬೆರೆಸುವುದು ಸಲ್ಲ' ಸಂಸದ ಎಸ್​.ಮುನಿಸ್ವಾಮಿ ಅಭಿಮತ

ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ 10ನೇ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಸದ ಎಸ್​.ಮುನಿಸ್ವಾಮಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ, ಡಿಡಿಪಿಐ ಕೃಷ್ಣಮೂರ್ತಿ, ಬೆಂಗಳೂರು ವಿವಿ ಸಿಂಡಿಕೇಟ್​ ಸದಸ್ಯ ಉದಯಕುಮಾರ್​, ಬಂಗಾರಪೇಟೆ ಕನ್ನಡ ಸಂಘ ಅಧ್ಯಕ್ಷ ಪಲ್ಲವಿಮಣಿ ಇತರರು ಇದ್ದರು.
ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ 10ನೇ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಸದ ಎಸ್​.ಮುನಿಸ್ವಾಮಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ, ಡಿಡಿಪಿಐ ಕೃಷ್ಣಮೂರ್ತಿ, ಬೆಂಗಳೂರು ವಿವಿ ಸಿಂಡಿಕೇಟ್​ ಸದಸ್ಯ ಉದಯಕುಮಾರ್​, ಬಂಗಾರಪೇಟೆ ಕನ್ನಡ ಸಂಘ ಅಧ್ಯಕ್ಷ ಪಲ್ಲವಿಮಣಿ ಇತರರು ಇದ್ದರು.
Published on

ಕೋಲಾರ: ಕ್ರೀಡೆಗಳಲ್ಲಿ ರಾಜಕಾರಣ ಬೆರೆಸಬಾರದು. ಜನಪ್ರತಿನಿಧಿಗಳ ಪ್ರಭಾವ, ಶಿಫಾರಸ್ಸು ಇದ್ದರೆ ಕ್ರೀಡೆ ಅವನತಿಯತ್ತ ಸಾಗುತ್ತದೆ ಎಂದು ಸಂಸದ ಎಸ್​.ಮುನಿಸ್ವಾಮಿ ತಿಳಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಶಾಖೆ ಆಶ್ರಯದಲ್ಲಿ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ 10ನೇ ಶೈಕ್ಷಣಿಕ ಕಾರ್ಯಾಗಾರ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡೆಗಳನ್ನು ರಾಜಕಾರಣದಿಂದ ದೂರವಿಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಿದ್ದರಿಂದ ರಾಷ್ಟ್ರದ ಹೆಮ್ಮೆಯ ಓಟಗಾರ್ತಿ ಪಿ.ಟಿ.ಉಷಾ ಅವರಂತಹವರು ಕ್ರೀಡಾಡಳಿತಕ್ಕೆ ಬರುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಾಗಿದೆ. ಒಲಂಪಿಕ್ಸ್​ನಲ್ಲಿ ರಾಷ್ಟ್ರದ ಕ್ರೀಡಾಪಟುಗಳು ಇತ್ತೀಚೆಗೆ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಳ್ಳುತ್ತಿರುವುದು ಇದಕ್ಕೆ ಉತ್ತಮ ನಿದರ್ಶನ ಎಂದರು.

ಉತ್ತಮ ಕ್ರೀಡಾಪಟುಗಳನ್ನು ಬೆಳಕಿಗೆ ತನ್ನಿ: ರಣಜಿ ಕ್ರಿಕೆಟ್​ನಲ್ಲಿ ಜಿಲ್ಲೆಯ ಸಾಧನೆ ಇಲ್ಲ. ಆದರೆ ಕಬಡ್ಡಿ, ುಟ್​ಬಾಲ್​ ಮತ್ತಿತರ ಕ್ರೀಡೆಗಳಲ್ಲಿ ಕೆಲವರು ಪ್ರದರ್ಶನ ತೋರಿದ್ದಾರೆ. ಐಎಎಸ್​, ಐಪಿಎಸ್​ನಲ್ಲಿ ಜಿಲ್ಲೆಯ ಸಾಧನೆ ಇರುವಂತೆಯೇ ಕ್ರೀಡೆಗಳಲ್ಲೂ ಛಾಪು ಮೂಡಿಸಬೇಕಿದೆ. ಇದಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರ ಜತೆಗೆ ದೈಹಿಕ ಶಿಕ್ಷಣ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಆಸಕ್ತಿ ಅರಿತು ಉತ್ತಮ ಕ್ರೀಡಾಪಟುಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ದೈಹಿಕ, ಮಾನಸಿಕವಾಗಿ ಸದೃಢರಾಗಿ: ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸದಿದ್ದರೆ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಇದರ ಜತೆಗೆ ಮಾದಕವಸ್ತು ಸೇವನೆ ಚಟಕ್ಕೆ ಬಿದ್ದು, ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇದನ್ನು ಮನಗಂಡು ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳನ್ನು ದೈಹಿಕ, ಮಾನಸಿಕವಾಗಿ ಸದೃಢಗೊಳಿಸಲು ಯತ್ನಿಸಬೇಕು ಎಂದು ಸಂಸದರು ಹೇಳಿದರು.

ಕೆಜಿಎಫ್​ನಲ್ಲಿ ಕ್ರೀಡಾ ಹಬ್​ ಸ್ಥಾಪನೆ: ಹೊಳಲಿ ಬಳಿ 20ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣ ನಿಮಾರ್ಣಕ್ಕೆ ಸರ್ಕಾರ ಮುಂದಾಗಿದೆ. ಕೆಜಿಎಫ್​ನಲ್ಲಿ ಕ್ರೀಡಾ ಹಬ್​ ಸ್ಥಾಪನೆಗೆ ಕೇಂದ್ರ ಕ್ರೀಡಾ ಸಚಿವರ ಜತೆ ಚರ್ಚಿಸಲಾಗಿದೆ. ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧ. ಗ್ರಾಮಪಂಚಾಯಿತಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಬೇಕಿದೆ. ಕೇಂದ್ರದಿಂದ ಕ್ರೀಡಾ ಪರಿಣತರ ತಂಡ ಕರೆಸಿ ಸೌಲಭ್ಯಗಳನ್ನು ಕಲ್ಪಿಸಲು ಪರಿಶೀಲನೆ ನಡೆಸಲಾಗುವುದು ಎಂದು ಮುನಿಸ್ವಾಮಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟ ಆಯೋಜನೆ: ಸದ್ಯದಲ್ಲೇ ಸಂಸದರ ಕಪ್​ ಕ್ರೀಡಾಕೂಟ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಗಡಿ ಗ್ರಾಮ ರಾಮಸಂದ್ರದಿಂದ ನಂಗಲಿವರೆಗೆ ಸೈಕಲ್​ ರೇಸ್​ ನಡೆಸಲಾಗುವುದು. ಎತ್ತಿನ ಗಾಡಿ ರಾಸುಗಳ ಓಟದ ಸ್ಪರ್ಧೆ ಸಹ ಆಯೋಜಿಸಲಾಗುವುದು. ನರಸಾಪುರ ಕೆರೆಯಲ್ಲಿ ಜಲಸಾಹಸ ಕ್ರೀಡೆ ನಡೆಸಲು ಸಹ ಚಿಂತಿಸಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರಿಗೆ ಬಡ್ತಿ, ಸಿಅಂಡ್​ಆರ್​ ನಿಯಮ ಬದಲಾವಣೆ ಸೇರಿ ವಿವಿಧ ಸೌಲಭ್ಯ ಕಲ್ಪಿಸುವ ಸಂಬಂಧ ಜಿಲ್ಲೆಯಿಂದ ನಿಯೋಗ ತೆರಳಿ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರನ್ನು ಭೇಟಿ ಮಾಡೋಣ ಎಂದು ಸಂಸದರು ಹೇಳಿದರು.

ಆಸಕ್ತಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ: ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ಮಾತನಾಡಿ, ಶಿಸ್ತು ಇಲ್ಲದೆ ಶೇ.100 ಅಂಕ ಪಡೆದರೂ ಪ್ರಯೋಜನವಿಲ್ಲ. ಮಕ್ಕಳಲ್ಲಿ ಶಿಸ್ತು ಬೆಳೆಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಶಿಸ್ತು ಮೂಡಿದರೆ ಮುಂದಿನ ದಿನಗಳಲ್ಲಿ ಪೊಲೀಸರ ಕೆಲಸವೂ ಕಡಿಮೆಯಾಗುತ್ತದೆ. ಮಕ್ಕಳು ಸಹ ಕ್ರೀಡೆ, ಎನ್​ಸಿಸಿ, ಎನ್ನೆಸ್ಸೆಸ್​ ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮೊದಲು ದೈಹಿಕ ಶಿಕ್ಷಣ ಶಿಕ್ಷಕರು ಶಿಸ್ತಿನಿಂದ ಇರಬೇಕು. ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಶೈಕ್ಷಣಿಕವಾಗಿ ಮುಂದುವರಿಯಲು ದೈಹಿಕವಾಗಿ ಬಲಿಷ್ಠವಾಗಿರಬೇಕು. ಮಗುವಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸಿ ತರಬೇತಿ ಕೊಡಿ ಎಂದು ಸಲಹೆ ನೀಡಿದರು.

ಡಿಡಿಪಿಐ ಕೃಷ್ಣಮೂರ್ತಿ, ಬೆಂಗಳೂರು ವಿವಿ ಸಿಂಡಿಕೇಟ್​ ಸದಸ್ಯ ಉದಯಕುಮಾರ್​, ಬಂಗಾರಪೇಟೆ ಕನ್ನಡ ಸಂಘ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿದರು. ಸಂಸದರು ಕ್ರೀಡಾ ಬ್ಲೇಜರ್​ ಬಿಡುಗಡೆ ಮಾಡಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿತರಿಸಿದರು. ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ, ಜಿಲ್ಲಾಧ್ಯಕ್ಷ ವಿ. ಮುರಳಿ ಮೋಹನ್​, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್​.ವೆಂಕಟೇಶ್​, ಸದಸ್ಯ ಎಸ್​.ಮುನಿಯಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್​.ನಾಗರಾಜ್​, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮಂಜುನಾಥ್​, ಡಯಟ್​ ಉಪನಿರ್ದೇಶಕಿ ಡಿ.ನಾಗವೇಣಿ ಇದ್ದರು.

ತಾಕತ್​ ಇದ್ದರೆ ಅಂಕಿ ಅಂಶಗಳ ಸಮೇತ ಬರಲಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಷೇತ್ರ ಹುಡುಕಾಟದಿಂದ ಮೈಂಡ್​ ಡಿಸ್ಟರ್ಬ್​ ಆಗಿದೆ ಎಂದು ಸಂಸದ ಎಸ್​.ಮುನಿಸ್ವಾಮಿ ತಿಳಿಸಿದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಕೆ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರಕ್ಕೆ ಅಭ್ಯರ್ಥಿಯಾಗಿ ಬಂದರೆ ಶಾಶ್ವತವಾಗಿ ವಿಚಲಿತರಾಗುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ಈ ರೀತಿ ಮುಖ್ಯಮಂತ್ರಿ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಮೇಲಾಗಿ ಇದು ಅವರ ವಯಸ್ಸು, ವರ್ಚಸ್ಸಿಗೆ ಶೋಭೆ ತರುವಂತಹದ್ದಲ್ಲ ಎಂದು ಹೇಳಿದರು. ಇನ್ನು ಪ್ರಧಾನಿ ಮೋದಿ, ಮುಖ್ಯಮಂತ್ರಿಗಳಾಗಿ ಯುಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯಕ್ಕೆ, ಇಲಾಖೆಗಳಿಗೆ ಎಷ್ಟೆಷ್ಟು ಎಷ್ಟು ಹಣ ಬಂದಿದೆ ಎಂದು ಅಂಕಿ ಅಂಶಗಳಿವೆ. ಇವುಗಳೊಂದಿಗೆ ಚರ್ಚೆಗೆ ಕೂತುಕೊಳ್ಳುತ್ತೇವೆ, ಅವರಿಗೂ ತಾಕತ್​ ಇದ್ದರೆ ಅಂಕಿ ಅಂಶಗಳ ಸಮೇತ ಬಂದು ಮಾತನಾಡಲಿ ಎಂದು ಸವಾಲು ಹಾಕಿದರು.

ಕಾನೂನು ಬಾಹಿರವಾಗಿ ಮಂಜೂರು

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೋಚಿಮುಲ್​ ಅಧ್ಯಕ್ಷರಾದ ಬಳಿಕ ಹಾಲು, ತುಪ್ಪ, ಬೆಣ್ಣೆ ಮತ್ತು ಕ್ರಷರ್​ ಮಾಲೀಕರಾಗಿ ಕಲ್ಲು, ಮಣ್ಣು, ಬೆಟ್ಟ, ಗುಡ್ಡ ಸೇರಿ ಸಿಕ್ಕಿದ್ದನ್ನೆಲ್ಲ ಕಬಳಿಸಿದ್ದಾರೆ, ಅವರ ಮೇಲೆ ವಿವಿಧ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಸಂಸದ ಎಸ್​.ಮುನಿಸ್ವಾಮಿ ಆರೋಪ ಮಾಡಿದರು.

ಸ್ವಗ್ರಾಮ ಕೋರಗಂಡಹಳ್ಳಿಯಲ್ಲಿ 6 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿಮಾರ್ಣಕ್ಕೆ ಮುಂದಾಗಿದ್ದು, ಜಾವಗಲ್​ ಶ್ರೀನಾಥ್​, ಸುದೀಪ್​ ಸಹಕಾರ ಪಡೆದುಕೊಳ್ಳಲಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ತರಬೇತಿಗೆ ಇದು ಅನುಕೂಲವಾಗಬಹುದು.

| ಡಿ.ದೇವರಾಜ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net