

ಸಾಗರ: ಹಣದಿಂದಲೇ ಎಲ್ಲವನ್ನೂ ಪಡೆಯಬಹುದು ಎನ್ನುವ ಧೋರಣೆ ಸರಿಯಲ್ಲ. ಹಣ ಹೊರತಾಗಿಯೂ ಶ್ರಮ ಸಂಸ್ಕೃತಿಯಿಂದ ದೊರೆಯುವ ಸಂಪತ್ತಿನಿಂದ ಆತ್ಮಗೌರವ ಪಡೆಯಲು ಸಾಧ್ಯ ಎಂದು ಸಹಾಯಕ ಪ್ರಾಧ್ಯಾಪಕಿ ಹಾಗೂ ಲೇಖಕಿ ಡಾ. ಶುಭಾ ಮರವಂತೆ ಹೇಳಿದರು.
ಬ್ರಾಸಂ ಸಭಾಭವನದಲ್ಲಿ ಜೀವನ್ಮುಖಿ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಅವರು ಜೀವನಪ್ರೀತಿ-ಹೊಸದಾರಿ ಕುರಿತು ಉಪನ್ಯಾಸ ನೀಡಿ, ಆತ್ಮಗೌರವದ ಬದುಕು ಕಟ್ಟಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಕಷ್ಟವಾದರೂ ಪ್ರಯತ್ನಿಸಿದರೆ ಸುಲಭ ಎಂದರು.
ಬದಲಾದ ದಿನಗಳಲ್ಲಿ ಬದುಕು ಯಾಂತ್ರಿಕವಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಮಹಿಳೆಯರು ಜೀವನಪ್ರೀತಿ ನೀಡುವ ಸಂಗತಿಗಳತ್ತ ಮುಖ ಮಾಡಬೇಕಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಚೈತನ್ಯದಾಯಕ. ದೈನಂದಿನ ಬದುಕಿನಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ವಿವಿಧ ಸಾಧ್ಯತೆಗಳಿಗೆ ಮುಖಾಮುಖಿಯಾಗುವ ಮನೋಭಾವ ನಮ್ಮಲ್ಲಿದ್ದರೆ ಸಕಾರಾತ್ಮಕ ಧೋರಣೆ ಬೆಳೆಯುತ್ತದೆ.
ಹೆಣ್ತನವೇ ಜಗತ್ತನ್ನು ಕಾಯುತ್ತಿರುವ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದ್ದರೂ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಸುಳ್ಳು ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ಮಹಿಳೆಯರು ಮಾನಸಿಕ ಹಾಗೂ ಬೌದ್ಧಿಕವಾಗಿ ಬೆಳವಣಿಗೆ ಹೊಂದಿದಾಗ ಇಂತಹ ಭ್ರಮೆಯ ಪೊರೆ ಕಳಚುತ್ತದೆ. ಮಹಿಳೆಯರು ಸಂಘಟಿತವಾಗಿ ತೊಡಗಿಕೊಳ್ಳುವ ಪರಸ್ಪರ ಚರ್ಚಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಚರಕ ಸಂಸ್ಥೆಯ ಗೌರಮ್ಮ, ಜೀವನ್ಮುಖಿ ಸಂಸ್ಥೆಯ ಚೂಡಾಮಣಿ ರಾಮಚಂದ್ರ ಇತರರಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಒಲೆರಹಿತ ಅಡುಗೆ ಸ್ಪರ್ಧೆಯಲ್ಲಿ ಹಂದಿಗೋಡು ಮಲೆನಾಡು ಸ್ನೇಹಿತರು ಪ್ರಥಮ ಸ್ಥಾನ ಪಡೆದು 5 ಸಾವಿರ ರೂ. ನಗದು ಬಹುಮಾನ ಪಡೆದರು. ಹೆಗ್ಗೋಡು ಗ್ರಾಮದ ವಂಡರಿಂಗ್ ಬರ್ಡ್ಸ್ ದ್ವಿತೀಯ, ಕಾನುಗೋಡು ಗ್ರಾಮದ ತ್ರಿವೇಣಿ ಸಂಘ ತತೀಯ, ಶಿವಮೊಗ್ಗದ ಅಕ್ಕಮಹಾದೇವಿ ಮಹಿಳಾ ಸಂಘ, ಮಾಲ್ವೆಯ ಸೋಮೇಶ್ವರ ಸ್ವಸಹಾಯ ಸಂಘ ಸಮಾಧಾನಕರ ಬಹುಮಾನ ಪಡೆದುಕೊಂಡವು.