

ತೀರ್ಥಹಳ್ಳಿ: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಹೊಣೆ ಸಮಸ್ತ ಕನ್ನಡಿಗರ ಮೇಲಿದೆ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಆಗುಂಬೆಯ ಎಸ್‌ವಿಎಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸ್ನೇಹಮಿಲನ ಮತ್ತು ಎರಡು ದಿನಗಳ ವಲಯ ಮಟ್ಟದ ಗುಂಪು ಆಟಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
60 ವರ್ಷಗಳಿಂದ ಆಗುಂಬೆ ಭಾಗದ ಸಹಸ್ರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಎಸ್‌ವಿಎಸ್ ಪ್ರೌಢಶಾಲೆ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ನೆರವು ಅಗತ್ಯ. ಬಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮಲೆನಾಡಿನ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವವರ ಕೊಡುಗೆ ಅಮೂಲ್ಯ. ಶಾಲೆ ಕಟ್ಟಡ ಅಭಿವೃದ್ಧಿಗೆ ಎಂಎಡಿಬಿಯಿಂದ 5 ಲಕ್ಷ ರೂ. ನೆರವು ನೀಡಲಾಗುವುದು ಎಂದರು.
ಶಿಕ್ಷಕರಿಗೆ ವೈಯಕ್ತಿಕವಾಗಿ ವೇತನ ನೀಡುವ ಮೂಲಕ ಶಾಲೆ ಉಳಿವಿಗೆ ಶ್ರಮಿಸಿದ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹೊಸಳ್ಳಿ ಸುಧಾಕರ್ ಮತ್ತು ಶಾಲೆಯಲ್ಲಿ ಕಲಿತು ಉನ್ನತ ಸ್ಥಾನದ ಮೂಲಕ ಭವಿಷ್ಯ ರೂಪಿಸಿಕೊಂಡವರ ಕೊಡುಗೆ ಪ್ರಶಂಸನೀಯ. ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಅರ್ಥಪೂರ್ಣ ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿ ವೇಣು ಹೆಬ್ಬಾರ್ ಮಾತನಾಡಿ, ಶಾಲೆಯ ವಜ್ರ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರ ಸಹಕಾರ ಬೇಕು ಎಂದರು. ಕ್ರೀಡಾಕೂಟದಲ್ಲಿ ಎಸ್‌ವಿಎಸ್ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಪಡೆಯಿತು. ಶಾಲೆಯ ಕಾರ್ಯದರ್ಶಿ ಹೊಸಳ್ಳಿ ಸುಧಾಕರ್, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಗ್ರಾಪಂ ಸದಸ್ಯ ರಾಘವೇಂದ್ರ, ಶಿಕ್ಷಣ ಸಂಸ್ಥೆ ನಿರ್ದೆಶಕ ರವಿಕುಮಾರ್, ಜಿಪಂ ಮಾಜಿ ಸದಸ್ಯ ಟಿ.ಎಲ್.ಸುಂದರೇಶ್, ನಿವೃತ್ತ ಪೋಲಿಸ್ ಅಧಿಕಾರಿ ರತ್ನಾಕರ್, ಹಿರಿಯ ವಿದ್ಯಾರ್ಥಿ ರಘುರಾಜ್ ಇದ್ದರು.