ಎತ್ತಿನಹೊಳೆ ನೀರು ಚಿಕ್ಕಬಳ್ಳಾಪುರ, ಕೋಲಾರ ತಲುಪುವುದೇ ಅನುಮಾನ

yettinahole
Published on

ಬೆಂಗಳೂರು: ಬೆಂಗಳೂರು ಕೆರೆಗಳ ಒತ್ತುವರಿ ತೆರವುಗೊಳಿಸಿ ಸಂಸ್ಕರಿಸಿದ ನೀರನ್ನು ಬಿಟ್ಟು ಅಂತರ್ಜಲ ಕಾಪಾಡಿಕೊಳ್ಳಲು ಆದ್ಯತೆ ನೀಡಿರುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆರೆ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ನಿಮ್ಮೆಲ್ಲರ ಸಲಹೆ ಪಡೆದು ರೂಪುರೇಷೆ ಸಿದ್ಧಪಡಿಸುತ್ತೇವೆ. ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ನಡೆಸಲಿರುವ ಬೆಂಗಳೂರು ನಗರದ ಶಾಸಕರ ಸಭೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಬರದ ಸಂದರ್ಭದಲ್ಲಿ ಬೆಂಗಳೂರಿನ ಏಳು ಸಾವಿರ ಕೊಳವೆ ಬಾವಿಗಳು ಬತ್ತಿವೆ. ಅಂತರ್ಜಲ ಸಂರಕ್ಷಣೆಗೆ ಕೆರೆಗಳನ್ನು ಉಳಿಸಬೇಕಾಗಿದೆ. ಬೆಂಗಳೂರು ಅಭಿವೃದ್ಧಿ ಕುರಿತಂತೆ ಜು.27ರಂದ ಸಭೆ ಕರೆದಿದ್ದು, ಕೆರೆಗಳನ್ನು ಉಳಿಸುವ ಬಗ್ಗೆ, ಹೂಳು ತೆಗೆಸಿ ಸಂಸ್ಕೃತಿ ನೀರು ಹರಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸೋಣ ಎಂದು ಹೇಳಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ, ಬೆಂಗಳೂರಿನ ಹೆಸರುಘಟ್ಟ ಕೆರೆಗೆ 0.50 ಟಿಎಂಸಿ ಅಡಿ ನೀರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಡೇಶ್ವರ ಗ್ರಾಮದ ಸಮೀಪ ನಿರ್ಮಿಸಿರುವ ವಿತರಣಾ ತೋಟ್ಟಿ -5ರಿಂದ ಬಲ್ಕ್ ಪೂರೈಕೆ ಮಾಡಲು ವಿಶ್ವೇಶ್ವರಯ್ಯ ಜಲ ನಿಗಮದಿಂದ ಯೋಜಿಸಲಾಗಿದೆ. ಈ ಕಾಮಗಾರಿ 2025ರ ಅಕ್ಟೋಬರ್ 31ಕ್ಕೆ ಪೂರ್ಣಗೊಳಿಸಲುವ ಗುರಿ ಹೊಂದಲಾಗಿದೆ. ಈ ಅವಧಿಯಲ್ಲೇ ಹೆಸರುಘಟ್ಟ ಕೆರೆಗೆ ನೀರು ತುಂಬಿಸುವ ಫೀಡರ್ ಪೈಪ್ಲೆ ಲೈನ್ ಕಾಮಗಾರಿಯನ್ನು ಬೆಂಗಳೂರು ಜಲಮಂಡಳಿಯಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಣದ ಹೊಳೆಯೇ ಹರಿದಿದೆ

ಅದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಎತ್ತಿನಹೊಳೆ ಯೋಜನೆಗೆ ಹಣ ಹೊಳೆಯೇ ಹರಿದಿದೆ. ಆದರೂ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗಿದೆ. ಹೆಸರುಘಟ್ಟ ಕೆರೆಗೆ ನೀರು ತುಂಬಿಸುವ ಮೊದಲು ಹೂಳು ತೆಗೆಸಬೇಕು ಎಂದು ಆಗ್ರಹಿಸಿದರು.

ಮಧ್ಯ ಪ್ರವೇಶಿಸಿದ ಬಿಜೆಪಿಯ ಸುರೇಶ್ ಕುಮಾರ್, ಬೆಂಗಳೂರು ಜಲ ಮಂಡಳಿಗೆ ಎಲ್ಲ ಕೆರೆ ಸಂರಕ್ಷಣೆ ಹೊಣೆ ಕೊಡಿ ಎಂದು ಸಲಹೆ ಮಾಡಿದರು.

ನೀರು ತಲುಪುವುದೇ ಅನುಮಾನ:

ಪ್ರತಿಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಎತ್ತಿನಹೊಳೆ ಯೋಜನೆಯ ಕಾಮಗಾರಿಯು ಕಳಪೆಯಾಗಿದೆ. ಪ್ರಾಯೋಗಿಕವಾಗಿ ನೀರು ಪೂರೈಸಿದಾಗ ಕಳೆಪೆಯಾಗಿರುವುದು ಕಂಡುಬಂದಿದೆ. 8 ಸಾವಿರ ಕೋಟಿ ರೂ. ಈ ಯೋಜನೆ ಒಂದು ಲಕ್ಷ ಕೋಟಿ ರೂ.ಗೆ ತಲುಪಿದರು ಆಶ್ಚರ್ಯ.ಎಂಜಿನಿಯರುಗಳು ಮನೆ ಹಾಳರಿದ್ದಾರೆ. ಈ ನೀರು ಚಿಕ್ಕಬಳ್ಳಾಪುರ, ಕೋಲಾರ ತಲುಪುವುದೇ ಅನುಮಾನವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net