

ಸೊರಬ: ಕಾಲು ಸಂಕಗಳು ಕೃಷಿ, ಶಿಕ್ಷಣ, ವ್ಯಾಪಾರ ವಹಿವಾಟುಗಳ ಬೆಳವಣಿಗೆಗೆ ಹಾಗೂ ಜಿಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಗಳು. ಈಗಿನ ಕಾಲಕ್ಕೂ ಕೆಲ ಗ್ರಾಮಗಳ ಜನರು ಈ ಸಂಕಗಳ ಮೂಲಕವೇ ತಮ್ಮ ಜಮೀನು, ಮುಖ್ಯ ರಸ್ತೆಗಳನ್ನು ತಲುಪಬೇಕಾದ ಅನಿವಾರ್ಯತೆ ಇದೆ.
ತಾಲೂಕು ಅರ್ಧಕ್ಕೂ ಹೆಚ್ಚು ಭಾಗ ವರದಾ ಮತ್ತು ದಂಡಾವತಿ ನದಿ ಹರಿವಿನಿಂದ ಕೂಡಿದೆ. ಅಲ್ಲದೆ ಮಲೆನಾಡು ಭಾಗವಾದ್ದರಿಂದ ಸಾಕಷ್ಟು ಹಳ್ಳ-ಕೊಳ್ಳಗಳು ಕೂಡ ಹರಿಯುತ್ತವೆ. ಅಂದು ಒಂದೂರಿನಿಂದ ಮತ್ತೊಂದು ಊರಿಗೆ ಹೋಗಬೇಕೆಂದರೆ ನದಿ, ಹಳ್ಳ-ಕೊಳ್ಳ ದಾಟಬೇಕೆಂದರೆ ಕಾಲು ಸಂಕವನ್ನೆ ಅವಲಂಬಿಸಬೇಕಿತ್ತು. ಮಳೆಗಾಲದಲ್ಲಿ ಈ ಭಾಗದ ಗ್ರಾಮೀಣ ಜನರು ಬಹಳಷ್ಟು ಕಷ್ಟಪಡಬೇಕಾಗಿತ್ತು. ಈಗಲೂ ಇದೇ ಪರಿಸ್ಥಿತಿ ಇದೆ. ಶಾಲಾ ಕಾಲೇಜು, ಪಟ್ಟಣ ಪ್ರದೇಶಗಳಿಗೆ ಮತ್ತು ಜಮೀನುಗಳಗೆ ಹೋಗಲು ಕಾಲು ಸಂಕವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ತಾಲೂಕಿನಲ್ಲಿದೆ.
ತಾಲೂಕಿನ ನಿಸರಾಣಿ ಗ್ರಾಮದ 50ಕ್ಕೂ ಹೆಚ್ಚಿನ ಕುಟುಂಬಗಳು ಕುಪ್ಪೆ ಗ್ರಾಮದ ಸರ್ವೇ ನಂ.64ರ ಲಕ್ಕೇರ್ ಬಯಲು ಎಂಬ ಜಮೀನುಗಳಿಗೆ ಪ್ರತಿದಿನ 2 ಕಿ.ಮೀ ದೂರ ನಡೆದು ಬಂದು ದಂಡಾವತಿ ನದಿ ದಾಟಿ ಬರಬೇಕು. ಈ ಕುಟುಂಬಗಳಿಗೆ ಸ್ವಗ್ರಾಮದಲ್ಲಿ ಜಮೀನುಗಳಿಲ್ಲ. ನದಿಯಾಚೆಗಿನ ಜಮೀನಿನ ಮೇಲೆ ಜೀವನ ಅವಲಂಬಿತ. ಮಳೆಗಾಲದಲ್ಲಿ ಕೃಷಿ ಕಾರ್ಯಕ್ಕೆ ಬರಬೇಕೆಂದರೆ ನದಿ ದಾಟಿಯೇ ಬರಬೇಕು. ನದಿಗೆ ಯಾವುದೇ ಸೇತುವೆ ಇಲ್ಲ. ಮಳೆಗಾಲ ಬಂತೆಂದರೆ ಸಂಕ ನಿರ್ಮಿಸಿಕೊಳ್ಳಲೇಬೇಕು. ಇಲ್ಲವಾದರೆ ಮಳೆಗಾಲದಲ್ಲಿ ಕುಪ್ಪೆ, ಕಾನುಗೊಡು ಗ್ರಾಮಗಳ ಮಾರ್ಗವಾಗಿ 8 ಕಿ.ಮೀ ದೂರ ನಡೆದು ಬಂದು ಜಮೀನಿನ ಕೆಲಸ ಮಾಡಬೇಕಾಗುತ್ತದೆ.
ಸಂಕದ ಮೇಲೆ ಜನರು ದಾಟಿ ಬರುತ್ತಾರೆ. ಬೇಸಾಯಕ್ಕೆ ಹೊಡೆದುಕೊಂಡು ಬಂದ ಎತ್ತುಗಳನ್ನು ಪ್ರವಾಹದ ನೀರಿನಲ್ಲಿ ಈಜಲು ಬಿಟ್ಟು ದಡ ಸೇರುವಂತೆ ನೋಡಿಕೊಳ್ಳಬೇಕು. ಜಾನುವಾರುಗಳು ಬಿಟ್ಟ ಸ್ಥಳದಿಂದ ಬಹಳಷ್ಟು ದೂರ ತೇಲಿಕೊಂಡು ಹೋಗಿ ದಡ ಸೇರುತ್ತವೆ. ಕೆಲವೊಮ್ಮೆ ಜಾನುವರಗಳು ಪ್ರವಾಹದಲ್ಲಿ ಕೊಚ್ಚಿಹೋದ ಉದಾಹರಣೆಗಳೂ ಇವೆ. ಮಳೆಗಾಲದಲ್ಲಿ ಸಂಕಷ್ಟದ ಜೀವನ ನಡೆಸಬೇಕಾಗಿದೆ. ಈ ಭಾಗದ ರೈತರ ಸಂಕಷ್ಟ ನಿವಾರಣೆಗೆ ಶಾಶ್ವತ ಸೇತುವೆ ನಿರ್ಮಿಸಬೇಕಿದೆ.
50ಕ್ಕೂ ಹೆಚ್ಚು ಅರ್ಜಿಗಳ ಸಲ್ಲಿಕೆ: 2021ರಲ್ಲಿ 4.85 ಕೋಟಿ ರೂ. ಅನುದಾನದಲ್ಲಿ ಯಡಗೊಪ್ಪದಿಂದ ಮಾಳೆಕಪ್ಪ, ಉಳವಿ, ಗುಡ್ಡೆಕೊಪ್ಪ, ಬೆಟ್ಟದಕೊರ್ಲಿ, ಕುಬಟೂರು, ಕಾತವಳ್ಳಿಯಿಂದ ಲಕ್ಕವಳ್ಳಿ, ಹರೀಶಿ ಗುಡ್ಡದ ಗದ್ದೆ ಬಳಿ, ತೋರಣಕೊಪ್ಪ ಕತವಾಯಿಗೆ, ಶಿಗ್ಗಾದಿಂದ ಕಾಸ್ಪಾಡಿಕೊಪ್ಪ ಗ್ರಾಮಕ್ಕೆ ಸೇತುವೆ, ತಲಗಡ್ಡೆ-ಕೊಡಿಕೊಪ್ಪ ಸೇರಿ ಹಲವಾರು ಗ್ರಾಮಗಳಿಗೆ ಕಾಲು ಸಂಕ ಇರುವಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆಯಿಂದ ಅತಿ ಅವಶ್ಯವಿರುವ ಕಡೆ ಸೇತುವೆ ಆಗದಿರುವುದು ರೈತರಿಗೆ ಸಂಕಷ್ಟ ಎದುರಾಗಿದೆ. ಕಳೆದ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ಸಣ್ಣ ಪುಟ್ಟ ಹಳ್ಳಗಳಿಂದ ಹಿಡಿದು ಮಧ್ಯಮ ಗಾತ್ರದ ಹಳ್ಳಗಳ ಕಾಲು ಸಂಕಗಳು ಕೊಚ್ಚಿಹೋಗಿವೆ. ಈ ಪೈಕಿ 26ಕ್ಕೂ ಹೆಚ್ಚು ಕಾಲು ಸಂಕಗಳನ್ನು ಗುರುತಿಸಿ 10.90 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 15 ಕಾಮಗಾರಿಗಳು ಪೂರ್ಣವಾಗಿವೆ. ಕೆಲವು ಸಮಸ್ಯೆಯಿಂದ 3 ಕಾಮಗಾರಿಗಳು ಆರಂಭವಾಗಿಲ್ಲ. ಈಗ ಸಾಗರ ತಾಲೂಕಿನ ತಾಳಗುಪ್ಪ ಸೇರಿ 50ಕ್ಕೂ ಹೆಚ್ಚು ಕಾಲು ಸೇತುವೆ ನಿರ್ಮಾಣಕ್ಕೆ ಅರ್ಜಿಗಳು ಸಲ್ಲಿಕೆಯಾಗಿವೆ.
ಗ್ರಾಮಸ್ಥರು ನಿರಾಳ: ಓಟೂರು, ಮಳೆಕೊಪ್ಪ ಗ್ರಾಮಸ್ಥರು ಸೊರಬ-ಶಿರಸಿ ಸಂಪರ್ಕ ಕಲ್ಪಿಸುವ 16ನೇ ಮೈಲುಗಲ್ಲು, ಕಲ್ಗೋಡ್‌ಹಳ್ಳ ದಾಟಿ ಬರಬೇಕಿತ್ತು. ವಿದ್ಯಾರ್ಥಿಗಳು ಸೊರಬ ಪಟ್ಟಣಕ್ಕೆ ಬರಬೇಕೆಂದರೆ ಸೀಗೆಹಳ್ಳಿ ಬಳಿ ದಂಡಾವತಿ ನದಿಗೆ ಹಾಕಲಾದ ಕಾಲು ಸಂಕವನ್ನೇ ದಾಟಿ ಬರಬೇಕಿತ್ತು. 2011-12ರಲ್ಲಿ 16ನೇ ಮೈಲುಗಲ್ಲು ಹಾಗೂ ಸೀಗೆಹಳ್ಳಿ ಬಳಿ ಸೇತುವೆ ನಿರ್ಮಿಸಲಾಗಿದೆ. 2019-20 ತಾಲೂಕಿನ ಉಳವಿ ಹೋಬಳಿಯ ಕೋಳಿಸಾಲು ಗ್ರಾಮದ ಬಳಿ ದಂಡಾವತಿ ನದಿಗೆ ಸೇರುವ ಹೊಳೆ ಮಳೆಗಾಲದಲ್ಲಿ ಉಕ್ಕಿ ಹರಿಯುವಾಗ ಹೊಳೆಯಿಂದಾಚೆ ಇರುವ 10 ಕುಟುಂಬಗಳು ಸಂಪರ್ಕ ಕಳೆದುಕೊಳ್ಳುತ್ತಿದ್ದವು. ಹೊಳೆಗೆ ಸೇತುವೆ ನಿರ್ಮಿಸಿದ್ದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ. ಇನ್ನೂ ಅನೇಕ ಗ್ರಾಮಗಳಿಗೆ ಸಂರ್ಪಕ ಹಾಗೂ ಜಮೀನುಗಳಿಗೆ ಕಾಲು ಸೇತುವೆಗಳ ಅಗತ್ಯವಿದ್ದು ಸರ್ಕಾರ ಗಮನ ಹರಿಸಬೇಕಿದೆ.