ಸಹಕಾರ ವ್ಯವಸ್ಥೆಯಡಿ ಅಡಕೆ ಮಾರುಕಟ್ಟೆ ತರುವುದೇ ಸೂಕ್ತ

dr prakasha kammaradi
ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ
Published on

ಶಿವಮೊಗ್ಗ: ಇಂದಿನ ಅಡಕೆ ಮಾರುಕಟ್ಟೆಯನ್ನು ವಿಶ್ಲೇಷಿಸುವುದಾದರೆ ಭವಿಷ್ಯದ ದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ಸಹಕಾರ ವ್ಯವಸ್ಥೆಯಡಿ ತರುವುದೇ ಸೂಕ್ತ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ ಹೇಳಿದರು.

ಸಹಕಾರ ತತ್ತ್ವವು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು ಪಶ್ಚಿಮಘಟ್ಟ ವ್ಯಾಪ್ತಿಯೂ ಒಳಗೊಂಡಂತೆ 137 ತಾಲೂಕಿಗೆ ವ್ಯಾಪಿಸಿರುವ ಅಡಕೆಗೂ ಸಹಕಾರ ವ್ಯವಸ್ಥೆ ಪರಿಹಾರವಾಗಿದೆ. ಅಡಕೆ ಮತ್ತು ಪಶ್ಚಿಮಘಟ್ಟದಲ್ಲಿರುವ ಸಮಸ್ಯೆಗಳಿಗೂ ನಿಕಟ ಸಂಬಂಧಗಳಿದ್ದು ಅಡಕೆ ಮಾರುಕಟ್ಟೆಯನ್ನು ಸರ್ಕಾರದ ಬದಲು ನೇರವಾಗಿ ಮ್ಯಾಮ್ಕೋಸ್ ಒಳಗೊಂಡಂತೆ ಸಹಕಾರ ಸಂಸ್ಥೆಗಳ ಮೂಲಕ ನೋಡಬೇಕಿದೆ. ಮುಖ್ಯವಾಗಿ ಈ ಬಗ್ಗೆ ಅಡಕೆ ಬೆಳೆಗಾರರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ ಎಂದು ಹೇಳಿದರು.

ಅಡಕೆ ಸಂಶೋಧನೆ ಒಳಗೊಂಡಂತೆ ನಾನಾ ಸಮಸ್ಯೆಗಳ ಪರಿಹಾರಕ್ಕೆ ಅಡಕೆ ಅಭಿವೃದ್ಧಿ ಮಂಡಳಿ ಅಗತ್ಯವಿದೆ. ಇಲ್ಲಿ ಸಂಶೋಧನೆಗೆ ಹಣವೊಂದೇ ಮುಖ್ಯವಲ್ಲ. ಮೂಲಸೌಕರ್ಯ, ವೈಜ್ಞಾನಿಕ ತಂಡ ಮತ್ತು ಅದಕ್ಕಾಗಿ ಸಮರ್ಪಣಾ ಭಾವನೆ ಹೊಂದಿರುವ ಸಿಬ್ಬಂದಿ ಕೊರತೆ ಇದೆ. ರಾಜ್ಯ ಸರ್ಕಾರ ಕೇಂದ್ರದ ಬಳಿ ಸಂಶೋಧನೆಗೆ ಹಣಕ್ಕೆ ಮೊರೆ ಹೋಗುವುದನ್ನು ಬಿಡಬೇಕು. ಕರ್ನಾಟಕದಲ್ಲೇ ಪ್ರತಿವರ್ಷ 20ರಿಂದ 25 ಸಾವಿರ ಕೋಟಿ ರೂ. ಅಡಕೆ ವಹಿವಾಟು ನಡೆಯಲಿದ್ದು ಪ್ರತಿ ವರ್ಷ ಕನಿಷ್ಠ 50 ಕೋಟಿ ರೂ. ಮೀಸಲಿಡಬೇಕು. ಸರ್ಕಾರ ಮತ್ತು ಸಂಶೋಧನೆಗೆ ಸಹಕಾರ ವ್ಯವಸ್ಥೆಯೇ ನೇತೃತ್ವ ವಹಿಸಿಕೊಳ್ಳಬೇಕಿದೆ ಎಂದು ಆಶಿಸಿದರು.

ಕರ್ನಾಟಕದಲ್ಲಿ ಅಡಕೆ ಬೆಳೆಯುವ ಪ್ರದೇಶವು ಕೇವಲ ಹತ್ತೇ ವರ್ಷದಲ್ಲಿ ಶೇ.138ರಷ್ಟು ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 6ರಿಂದ 7 ಲಕ್ಷ ಹೆಕ್ಟೇರ್‌ಗೆ ಅಡಕೆ ವಿಸ್ತರಿಸಿದೆ. ಕರ್ನಾಟದಲ್ಲೇ ಪ್ರತಿ ವರ್ಷ 10 ಲಕ್ಷ ಟನ್ ಉತ್ಪಾದನೆ ಆಗುತ್ತಿದೆ. ಕೆಂಪಡಿಕೆಗೆ ಶೇ.63ರಷ್ಟು ಮತ್ತು ಬಿಳಿ ಅಡಕೆಗೆ ಶೇ.74ರಷ್ಟು ಲಾಭಾಂಶ ಸಿಗುತ್ತಿದೆ. ಪ್ರದೇಶ, ಉತ್ಪಾದನೆ ಮತ್ತು ದರ ಮೂರೂ ಬಿದ್ದು ಹೋಗದೇ ಇರುವುದು ವಂಡರ್ ಏಕೈಕ ಬೆಳೆಯಾಗಿದೆ ಎಂದು ಹೇಳಿದರು.

ಅಡಕೆಗೂ ಕ್ಯಾನ್ಸರ್‌ಗೂ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಡಕೆ ಹಾನಿಕಾರಕವಲ್ಲ ಎಂಬ ಅಫಿಡೇವಿಟ್ ಸಲ್ಲಿಸದೇ ಇರುವುದು ಸಂಪ್ರದಾಯಿಕ ಬೆಳೆಗಾರರಿಗೆ ತಲೆನೋವು ತರಿಸುತ್ತಿದೆ. ಸಿಗರೇಟ್ ಸೇವನೆಗಿಂತ ಸ್ಮೋಕ್‌ಲೆಸ್ ಟ್ಯೊಬ್ಯಾಕೋ ಹೆಚ್ಚಾಗಿದ್ದು ಅಡಕೆ ಬ್ಯಾನ್ ಮೇಲೆ ಸಿಗರೇಟ್ ಕಂಪನಿಗಳ ಲಾಭಿ ದೊಡ್ಡಮಟ್ಟದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net