

ಬದಲಾದ ಕಾಲಘಟ್ಟ, ಬದಲಾದ ಜೀವನಶೈಲಿ, ಬದಲಾದ ಆಹಾರ ಪದ್ಧತಿಯಿಂದ ಪ್ರಸ್ತುತ ಬಹಳಷ್ಟು ಮಂದಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ, ಸಣ್ಣ ವಯಸ್ಸಿನ ಯುವಜನರಲ್ಲೂ ಕಾಣಿಸಿಕೊಳ್ಳಲಾರಂಭಿಸಿರುವುದು ಬಹಳ ನೋವಿನ ವಿಷಯ. ಹೃದಯದ ಆರೋಗ್ಯ ಕೆಡುವ ಮುನ್ನವೇ ಜಾಗ್ರತೆ ವಹಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ವೈದ್ಯರ ಸಲಹೆ. ಕ್ರಮಬದ್ಧ ಆಹಾರ ಸೇವನೆ, ನಿಯಮಿತ ನಿದ್ದೆ, ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದಲೂ ಹೃದಯಾಘಾತ ತಡೆಗಟ್ಟಬಹುದು ಎನ್ನುತ್ತಾರೆ ತಜ್ಞರು. ‘ವಿಶ್ವ ಹೃದಯ ದಿನ’ದ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರು ಹೃದಯದ ಆರೋಗ್ಯ ರಕ್ಷಣೆ ಕುರಿತು ಉಪಯುಕ್ತ ಮಾಹಿತಿ ನೀಡಿದ್ದಾರೆ. ಅದರ ಸವಿವರ ಇಲ್ಲಿದೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಜಯನಗರದ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಟರ ಪ್ರಕಾರ, ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಅಂಶ, ಕೊಬ್ಬು, ಶರೀರದ ತೂಕ ಹಾಗೂ ಸೊಂಟದ ಸುತ್ತಳತೆ... ಪ್ರತಿಯೊಬ್ಬರೂ ಈ ಐದು ಅಂಶಗಳತ್ತ ಗಮನ ಹರಿಸಿದ್ದೇ ಆದಲ್ಲಿ ಆರೋಗ್ಯಕರ ಹೃದಯ ಕಾಪಾಡಿಕೊಳ್ಳಬಹುದು!
‘ವಿಶ್ವ ಹೃದಯ ದಿನ’ದ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಅಭಿಜಿತ್ ವಿಲಾಸ್ ಕುಲಕರ್ಣಿ ನೇತೃತ್ವದಲ್ಲಿ, ತಜ್ಞ ವೈದ್ಯರುಗಳಾದ ಡಾ. ಟಿ.ಕೆ. ವೆಂಕಟೇಶ್, ಡಾ. ವಿಠಲ್ ಡಿ ಬಾಗಿ, ಡಾ. ಪಿ. ಲಕ್ಷ್ಮೀಕಾಂತ್ ಮತ್ತು ಡಾ. ಡಿ. ಮಂಜುನಾಥ್ ಪಾಲ್ಗೊಂಡು ಹೃದಯದ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಹೃದಯದ ಆರೋಗ್ಯ ಕೆಡುವ ಮುನ್ನವೇ ಜಾಗ್ರತೆ ವಹಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ‘ಪ್ರತಿ ವರ್ಷ ಗಾಡಿ (ವಾಹನಗಳ) ಸರ್ವೀಸ್ ಮಾಡಿಸುವಂತೆ ನಮ್ಮ ಬಾಡಿಗೂ ಸರ್ವೀಸ್ನ ಅಗತ್ಯವಿದೆ’. ಅದೆಂದರೆ ನಿಯಮಿತ ಆರೋಗ್ಯ ತಪಾಸಣೆ. ವಯಸ್ಸು ಹೆಚ್ಚಾದಂತೆಲ್ಲ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಹಾಗಾಗಿ 40 ವರ್ಷ ಮೇಲ್ಪಟ್ಟವರು ವರ್ಷಕ್ಕೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದಲ್ಲಿ ಸಕ್ಕರೆ ಅಂಶ, ರಕ್ತದೊತ್ತಡ, ಕೊಬ್ಬಿನಾಂಶ, ಸೊಂಟದ ಸುತ್ತಳತೆ ಇವುಗಳ ಪರೀಕ್ಷೆ ಮಾಡಿಸಿದರೆ ಹೃದಯಕ್ಕೆ ಇರುವ ಸಮಸ್ಯೆ ತಿಳಿಯಬಹುದಾಗಿದೆ. ಹೀಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ ವೈದ್ಯರ ಸಲಹೆ ಪಾಲಿಸುವ ಮೂಲಕ ಹೃದಯ ಸಮಸ್ಯೆಯನ್ನು 10 ವರ್ಷ ಕಾಲ ಮುಂದೂಡಬಹುದಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು.
ಸಾಮಾನ್ಯವಾಗಿ ಹೃದಯಾಘಾತ 18 ವರ್ಷ ಮೇಲ್ಪಟ್ಟವರಲ್ಲಿ ಸಂಭವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ 18-30 ವರ್ಷ ವಯೋಮಾನದವರಲ್ಲಿ ಇದು ಹೆಚ್ಚಾಗಿದೆ. ಆದರೆ, ಮಕ್ಕಳಲ್ಲಿ ಹೃದಯಾಘಾತ ಪ್ರಮಾಣ ಅತೀ ವಿರಳ. ಸಾಮಾನ್ಯವಾಗಿ ವಂಶವಾಹಿ (ಜೆನೆಟಿಕ್ ಪ್ರಾಬ್ಲಮ್ ಸಮಸ್ಯೆ ಇರುವ ಮಕ್ಕಳಲ್ಲಿ ಹೃದಯದ ತೊಂದರೆ ಕಂಡು ಬರುತ್ತದೆ. ಆದರೂ ಅದು ಹೃದಯಾಘಾತ ಅಲ್ಲ. ಬದಲಿಗೆ ಹೃದಯ ಬಡಿತ ಜೋರಾಗುವುದರಿಂದ ಹೃದಯ ಸ್ತಂಭನವಾಗಿ ಸಾವು ಸಂಭವಿಸುತ್ತದೆ. ಇನ್ನು ಸೋಂಕಿನಿಂದಲೂ ರಕ್ತಪೂರೈಸುವ ನಾಳದಲ್ಲಿ ರಕ್ತ ಹೆಪು್ಪಗಟ್ಟಿ ಆಗುವ ಸಾವು ಹೆಚ್ಚಿರುತ್ತದೆ.
ಯುವಜನರಲ್ಲಿ ಹೃದಯಾಘಾತ ಹೆಚ್ಚು : ಕುಟುಂಬ ನಿರ್ವಹಣೆ, ಕೆಲಸದ ಒತ್ತಡ, ಮಕ್ಕಳ ಪಾಲನೆ ಮಹಿಳೆಯರಲ್ಲಿ ಒತ್ತಡ ಹೆಚ್ಚಿಸುತ್ತಿದ್ದು, ಹೃದಯಘಾತಕ್ಕೆ ಕಾರಣವಾಗಿದೆ. ಜತೆಗೆ ಜೀವನ ಶೈಲಿ, ಆಹಾರ ಕ್ರಮ, ಚಟುವಟಿಕೆ ರಹಿತ ಜೀವನದಿಂದಾಗಿ ಭಾರತೀಯರಲ್ಲಿ ಹೃದ್ರೋಗ ಸೇರಿ ನಾನಾ ಆರೋಗ್ಯ ಸಮಸ್ಯೆಗಳು 15-20 ವರ್ಷ ಮುಂಚಿತವಾಗಿ ಕಾಣಿಸಿಕೊಳ್ಳುತ್ತಿವೆ. ಹಿಂದೆಲ್ಲಾ 60 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸುತ್ತಿದ್ದ ಹಾರ್ಟ್ ಅಟ್ಯಾಕ್ ಈಗ ಯುವಜನರಲ್ಲಿ ಸಾಮಾನ್ಯವಾಗುತ್ತಿದೆ.
ಇತ್ತೀಚೆಗೆ ಯುವಜನರು ದೇಹದಾರ್ಢ್ಯ ಹಾಗೂ ಸದೃಢರಾಗಲು ಜಿಮ್ಳಿಗೆ ಸೇರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎನಿಸಿದರೂ, ಬೇಗನೆ ದೇಹಾರೋಗ್ಯ ಹೊಂದುವ ಭರದಲ್ಲಿ ಅತಿಯಾದ ವರ್ಕೌಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಸಲ್ಲ. ತರಬೇತುದಾರರ ಸೂಚನೆ ಇಲ್ಲದೆ ಹೆಚ್ಚಿನ ಕಸರತ್ತು ನಡೆಸುವ ಅಗತ್ಯ ಇಲ್ಲ. ಆವರವರ ದೇಹ ರಚನೆ, ತೂಕ ಹಾಗೂ ಇನ್ನಿತರ ಅಂಶಗಳನ್ನು ಆಧರಿಸಿ ವರ್ಕೌಟ್ ಮಾಡಿದರೆ ತಪ್ಪಲ್ಲ. ಬೇಗನೆ ಪ್ರಸಿದ್ಧಿಗೆ ಬರಲು ಕಸರತ್ತು ಮಾಡದಿರುವುದು ಒಳಿತು. ಅಥ್ಲೆಟಿಕ್ಸ್ ಸೇರಿ ಇತರ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು ಟಿಎಂಟಿ (ಟ್ರೆಡ್ ಮಿಲ್ ಟೆಸ್ಟ್) ಮಾಡಿಸಿಕೊಂಡ ಬಳಿಕ ಕಸರತ್ತು ಆರಂಭಿಸುವುದು ಸೂಕ್ತ. ಈ ಅಂಶಗಳನ್ನು ಯುವಜನರು ಗಮನಿಸಿದ್ದಲ್ಲಿ ಹೃದಯಾಘಾತಕ್ಕೆ ಒಳಗಾಗುವುದು ಕಡಿಮೆಯಾಗುತ್ತದೆ. ಇದರ ಜತೆಗೆ ತಮ್ಮ ಇಷ್ಟದ ವ್ಯಾಯಾಮದ ಜತೆಗೆ ಯೋಗ, ಪ್ರಾಣಾಯಾಮವನ್ನೂ ಕೈಗೊಳ್ಳಬಹುದು ಎಂದು ಡಾ. ವಿಠ್ಠಲ್ ಬಾಗಿ ಸಲಹೆ ನೀಡಿದರು.
ಹೃದಯಾಘಾತ ಇಂತಹದೇ ವ್ಯಕ್ತಿ, ವಯೋಮಾನ ಹಾಗೂ ನಿರ್ದಿಷ್ಟ ಸಮಯದಲ್ಲಿ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹಾರ್ಟ್ ಅಟ್ಯಾಕ್ನಿಂದ ಜೀವಹಾನಿಯನ್ನು ತಪ್ಪಿಸಬಹುದಾಗಿದೆ. ಮುಖ್ಯವಾಗಿ ಬಿಪಿ, ಶುಗರ್, ಕೊಲೆಸ್ಟ್ರಾಲ್, ಇಸಿಜಿ ಮುಂದಿನ 10 ವರ್ಷದಲ್ಲಾಗುವ ರಿಸ್ಕ್ ಅನ್ನು ಈಗಲೇ ಪತ್ತೆ ಹಚ್ಚಿ ಅದಕ್ಕೆ ಬೇಕಾಗುವ ವೈದ್ಯಕೀಯ ಪರಿಹಾರಗಳನ್ನು ದೈನಂದಿನ ಜೀವನದಲ್ಲಿ ಅಳಡಿಸಿಕೊಳ್ಳಬಹುದು ಎಂದು ತಜ್ಞ ವೈದ್ಯರು ತಿಳಿಸಿದರು.
ಹೃದಯಾಘಾತ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಎಂಬ ಭೇದವಿಲ್ಲದೆ ಎಲ್ಲರಿಗೂ ಬರುವಂಥದ್ದೆ. ಆದರೆ, ಸಸ್ಯಾಹಾರಿಗಳಲ್ಲಿ ಹಾರ್ಟ್ ಅಟ್ಯಾಕ್ ಪ್ರಮಾಣ ತುಸು ಕಡಿಮೆ. ರಿಸ್ಕ್ ಕೂಡ ಸ್ವಲ್ಪ ಕಡಿಮೆಯಿರುತ್ತದೆ. ಹಾಗಾಗಿ ಹೃದ್ರೋಗದಿಂದ ದೂರವಿರಲು ಸಸ್ಯಾಹಾರ ವಿಧಾನ ಆಯ್ಕೆ ಸೂಕ್ತ. ಸೊಪು್ಪ, ಹಣ್ಣು-ಹಂಪಲುಗಳಲ್ಲಿ ಆರೋಗ್ಯಭರಿತ ಅಂಶಗಳಿದ್ದು, ಸುಲಭವಾಗಿ ಸೇವನೆಗೆ ಅರ್ಹವಿದೆ. ಹಾಗಂತ ನಿರಂತರವಾಗಿ ಒಂದೇ ಬಗೆಯ ಆಹಾರ ಸೇವಿಸದೆ ನಿಯಮಿತವಾಗಿ ವಿವಿಧ ಬಗೆಯ ಅಡುಗೆಯನ್ನು ತಯಾರಿಸಿ ಸೇವಿಸಬೇಕು. ಈಗೀಗ ರಾಸಾಯನಿಕ ಅಂಶಗಳು ಸೇರಿ ತರಕಾರಿಗಳಲ್ಲಿ ಆ ಅಂಶ ಸೇರಿಕೊಂಡಿರುವ ಬಗ್ಗೆ ಆತಂಕ ಎದ್ದಿದೆ. ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ ಎಂಬ ಕೂಗೆದ್ದಿದೆ. ಈ ರೀತಿ ಹೇಳಲು ಪೂರ್ಣಪ್ರಮಾಣದ ಸಂಶೋಧನಾ ವರದಿಗಳು ದೃಢಪಡಿಸಿಲ್ಲ. ಆದರೂ, ಹೆಚ್ಚು ರಾಸಾಯನಿಕ ಅಂಶ ಒಳಗೊಂಡ ಉತ್ಪನ್ನಗಳ ಬಳಕೆಯನ್ನು ತಗ್ಗಿಸಬಹುದಾಗಿದೆ ಎಂದು ಹೃದ್ರೋಗ ತಜ್ಞರು ಕಿವಿಮಾತು ಹೇಳಿದರು.
ಹೃದ್ರೋಗಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಜತೆಗೆ ವೈದ್ಯರು ಸೂಚಿಸುವ ಔಷಧಗಳನ್ನು ಮಾತ್ರ ನಿಯಮಿತವಾಗಿ ಬಳಕೆ ಮಾಡಬೇಕು. ಅದರಲ್ಲೂ ರಕ್ತದ ಒತ್ತಡ, ಕೊಬ್ಬ ಕರಗಿಸುವ, ರಕ್ತವನ್ನು ತಿಳಿಗೊಳಿಸುವ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ಕ್ರಮವಾಗಿ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವೈದ್ಯರು ಸೂಚಿಸದ ಹಾಗೂ ಅಪರಿಚಿತ ವ್ಯಕ್ತಿಗಳು ನೀಡುವ ಬಿಟ್ಟಿ ಸಲಹೆಗಳಿಗೆ ಮಾರುಹೋಗಿ ಔಷಧ ಸೇವಿಸುವುದರಿಂದ ದೂರವಿರುವುದು ಲೇಸು.
ಹೃದಯ ಆರೋಗ್ಯ ರಕ್ಷಣೆ, ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಆಧಾರಿತ ವೈದ್ಯಕೀಯ ಉಪಕರಣಗಳು ಹಾಗೂ ಸೌಲಭ್ಯಗಳನ್ನು ಹೊಂದಿರುವ ದೇಶದ ಕೆಲವೇ ಕೆಲ ಆಸ್ಪತ್ರೆಗಳಲ್ಲಿ ಅಪೋಲೋ ಕೂಡ ಒಂದು. ಹೃದಯದ ಆರ್ಟರಿಯಲ್ಲಿ ಕ್ಯಾಮರಾ ಹಾಕಿ ತಪಾಸಣೆ ಮಾಡಿ ಹೃದಯದ ಆರೋಗ್ಯ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅರಿಯುವ ವೈಶಿಷ್ಟ್ಯತೆಯನ್ನು ಅಪೋಲೋ ಆಸ್ಪತ್ರೆಯು ಹೊಂದಿದೆ. 70 ವರ್ಷ ಮೇಲ್ಪಟ್ಟ ವಿವಿಧ ಆರೋಗ್ಯ ಸಮಸ್ಯೆ ಹೊಂದಿರುವ ವೃದ್ಧರಿಗೂ ಅತ್ಯಂತ ಕ್ಲಿಷ್ಟಕರ ಆರೋಗ್ಯ ಸ್ಥಿತಿಯಲ್ಲೂ ‘ಟ್ರಾನ್ಸಾ ್ಕಟರ್ ಆರ್ಟಿಕ್ ವ್ಯಾಲ್ವ್ ಇಂಪ್ಲಾಂಟೇಷನ್’ (ಖಅಐ) ಚಿಕಿತ್ಸೆ ಅಪೋಲೋ ಆಸ್ಪತ್ರೆಯಲ್ಲಿ ಲಭ್ಯವಿದೆ. ಎಲ್ಲ ರೀತಿಯ ಹೃದಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಲ್ಲ ನುರಿತ ಹೃದ್ರೋಗ ತಜ್ಞರ ತಂಡವನ್ನು ಆಸ್ಪತ್ರೆ ಹೊಂದಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಹೃದಯದ ಆರೋಗ್ಯ ರಕ್ಷಣೆ ಕುರಿತು ಅರಿವು ಮೂಡಿಸುವ ಕೆಲಸದಲ್ಲಿ ಅಪೋಲೋ ಆಸ್ಪತ್ರೆ ಕಾರ್ಯನಿರತವಾಗಿದೆ.
ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅದರಲ್ಲೂ 40 ವರ್ಷ ಮೇಲ್ಪಟ್ಟವರು ಹೃದಯ ತಪಾಸಣೆ ಮಾಡಿಸಿಕೊಂಡಲ್ಲಿ ಮುಂದಾಗುವ ಸಮಸ್ಯೆಗಳನ್ನು ಮೊದಲೇ ಊಹಿಸಿ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ. ಈ ಮಾದರಿಯಲ್ಲೇ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯು ತನ್ನ ಸಿಬ್ಬಂದಿಗಳೆಲ್ಲರಿಗೂ ಕಡ್ಡಾಯವಾಗಿ ಹೃದಯ ತಪಾಸಣೆಯನ್ನು ಉಚಿತವಾಗಿ ಮಾಡುತ್ತಾ ಬಂದಿದೆ. ಕೆಲವೊಮ್ಮೆ ಸಂಘ-ಸಂಸ್ಥೆಗಳ ಜತೆಗೂಡಿ ಸಾರ್ವಜನಿಕರಿಗೂ ಉಚಿತ ಹೃದಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು ಸಾಮಾಜಿಕ ಕಾಳಜಿಯನ್ನು ಮೆರೆಯುತ್ತಿದೆ.
ಬದಲಾದ ಕಾಲಘಟ್ಟದಲ್ಲಿ ಹೃದಯಾಘಾತ ಸಣ್ಣ ವಯಸ್ಸಿನ ಯುವಜನರಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆ. ಯಾವುದೇ ಕಾಯಿಲೆ ಇದ್ದರೂ ಹಾರ್ಟ್ ಅಟ್ಯಾಕ್ಗೆ ಒಳಗಾಗುತ್ತಾರೆ. ಇಂತಹವರ ಕುಟುಂಬಸ್ಥರಿಗೆ ಹಿಂದೆ ಹಾರ್ಟ್ ಅಟ್ಯಾಕ್ ಆಗಿದ್ದಲ್ಲಿ ಹಾಗೂ ಯಾವ ಯಾವ ಕಾರಣದಿಂದ ಘಟಿಸಿರಬಹುದು ಎಂಬ ದತ್ತಾಂಶವನ್ನು ಸಿದ್ಧಪಡಿಸಿ ಜಾಗೃತಿ ಮೂಡಿಸುವ ಹೊಸ ವಿಧಾನವನ್ನು ಅಮೆರಿಕದ ಹಾರ್ಟ್ ಅಸೋಷಿಯೇಷನ್ ಶೋಧಿಸಿದೆ. ಇದರನ್ವಯ ಸಿಕೆಎಂ ಸಿಂಡ್ರೋಮ್ ವಿಧಾನದಲ್ಲಿ ಹೃದಯಾಘಾತದ 4 ಹಂತಗಳಲ್ಲಿನ ರಿಸ್ಕ್ ಅಂಶಗಳನ್ನು ಆಧರಿಸಿ ವೈದ್ಯಕೀಯ ಪರಿಹಾರ ಒಳಗೊಂಡ ಜಾಗೃತಿಯನ್ನು ನಿರಂತರವಾಗಿ ನೀಡಲಾಗುತ್ತದೆ. ಇದರಿಂದ ರಿಸ್ಕ್ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಡಾ. ವೆಂಕಟೇಶ್ ತಿಳಿಸಿದರು.
ಹೃದಯಾಘಾತ ಎಂದರೆ ರಕ್ತನಾಳ ಬ್ಲಾಕ್ ಆಗಿ ರಕ್ತಸಂಚಾರ ಇಲ್ಲದಿದ್ದಾಗ ಹೃದಯಾಘಾತ ಎಂದು ಹೇಳುತ್ತೇವೆ. ಹೃದಯಸ್ತಂಭನ ಎಂದರೆ ಏಕಾಏಕಿ ಹೃದಯದ ಕಾರ್ಯ ನಿಂತು ಹೋಗುತ್ತದೆ. ಅದಕ್ಕೆ ಹೃದಯಾಘಾತ ಹಾಗೂ ಹೃದಯ ವೈಫಲ್ಯ ಕಾರಣವಾಗಿರುತ್ತದೆ. ಹೀಗಾದಾಗ ‘ಗೋಲ್ಡನ್ ಅವರ್’ ನಲ್ಲಿ ಚಿಕಿತ್ಸೆ ದೊರೆಯಬೇಕು. ಇಲ್ಲವಾದಲ್ಲಿ ಹೃದಯಾಘಾತದಿಂದಾಗುವ ಸಾವಿನ ಪ್ರಮಾಣ ಶೇ.7 ಹೆಚ್ಚಾಗಲಿದೆ. ಹಾಗಾಗಿ ಹೃದಯಾಘಾತ ಸಂಭವಿಸಿದಲ್ಲಿ ತುರ್ತು ಸಂದರ್ಭದಲ್ಲಿ ಅಂದರೆ ಚಿಕಿತ್ಸೆ ಕೊಡಿಸುವ ಕಾರ್ಯವಾಗಬೇಕು. ಆದ್ದರಿಂದ 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಹಾಗೂ ಹೃದಯಾಘಾತದ ಕೌಟುಂಬಿಕ ಹಿನ್ನೆಲೆ ಹೊಂದಿರುವವರು ಹೃದಯದ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ.
ಹೃದಯ ರಕ್ತನಾಳದ ಕಾಯಿಲೆಗಳ (ಇಈಠ) ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕವಾಗಿ ಹೃದಯದ ಆರೋಗ್ಯವನ್ನು ಉತ್ತೇಜಿಸಲು ಪ್ರತಿ ವರ್ಷ ಸೆ.29ರಂದು ‘ವಿಶ್ವ ಹೃದಯ ದಿನ’ ಆಚರಿಸಲಾಗುತ್ತದೆ. ಹೃದಯ ಸಂಬಂಧಿ ಪರಿಸ್ಥಿತಿಯನ್ನು ತಡೆಗಟ್ಟುವಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ವ್ಯಕ್ತಿ, ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳಿಗೆ ಇದು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಹೃದ್ರೋಗ ವಿಶ್ವದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ದಿನದ ಮಹತ್ವದ ಮೂಲಕ ನಾವು ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕಾಯಿಲೆ ತಡೆಗಟ್ಟುವ ಕ್ರಮವನ್ನು ಪೋ›ತ್ಸಾಹಿಸಲಾಗುತ್ತದೆ.
ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿರುವ ಹೃದ್ರೋಗದಿಂದ ವಾರ್ಷಿಕ ಸುಮಾರು 18.6 ದಶಲಕ್ಷ ಸಂಖ್ಯೆಯಷ್ಟು ಸಾವು ಸಂಭವಿಸುತ್ತವೆ. ಇದನ್ನು ತಡೆಯಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ವರ್ಲ್ಡ್ ಹಾರ್ಟ್ ಫೆಡರೇಶನ್ (ಗಏಊ), ವಿಶ್ವ ಆರೋಗ್ಯ ಸಂಸ್ಥೆ (ಗಏಣ) ಸಹಯೋಗದಲ್ಲಿ 1999ರಲ್ಲಿ ವಿಶ್ವ ಹೃದಯ ದಿನವನ್ನು ಗೊತ್ತು ಮಾಡಿತು. 2000ದ ಸೆ.24ರಂದು ಮೊದಲ ಬಾರಿಗೆ ‘ವಿಶ್ವ ಹೃದಯ ದಿನ’ ಆಚರಿಸಲಾಯಿತು. ಅಂದರೆ ಆರಂಭದಲ್ಲಿ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರ ಆಚರಿಸಲಾಗುತ್ತಿತ್ತು. 2011ರಲ್ಲಿ ಸೆ. 29ರಂದು ಅಧಿಕೃತ ದಿನಾಂಕ ನಿಗದಿಪಡಿಸಲಾಯಿತು.
ಹೃದಯಾಘಾತಕ್ಕೆ ಬಹುತೇಕ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮ ಕಾರಣವಾಗಿರುತ್ತದೆ. ಇದರ ಹೊರತಾಗಿ ಅನುವಂಶಿಕ ಕಾರಣವೂ ಇರುತ್ತದೆ. ಹಾಗಾಗಿ ಕೌಟುಂಬಿಕ ಹಿನ್ನೆಲೆ ಹೊಂದಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕೌಟುಂಬಿಕ ಹಿನ್ನೆಲೆ ಎಂದರೆ ಯಾರ ಕುಟುಂಬದಲ್ಲಿ ಪುರುಷರು 55 ವರ್ಷಕ್ಕಿಂತ ಮೊದಲು ಹಾಗೂ ಮಹಿಳೆಯರು 65 ವರ್ಷಕ್ಕಿಂತ ಮೊದಲು ಹೃದಯಾಘಾತಕ್ಕೆ ಒಳಗಾಗಿದ್ದರೆ ಇಲ್ಲವೆ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿದ್ದರೆ ಅಂತಹವರು ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. 70 ವರ್ಷ ಮೇಲ್ಪಟ್ಟು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ ಅದು ವಯೋಸಹಜವೇ ಹೊರತು ಅನುವಂಶಿಕವಾಗಿ ಬರುವಂತಹದ್ದಲ್ಲ ಎಂದು ತಜ್ಞ ವೈದ್ಯರು ವಿಶ್ಲೇಷಿಸಿದರು.
ಆರೋಗ್ಯವಂತ ವ್ಯಕ್ತಿಯಲ್ಲಿ ರಕ್ತದೊತ್ತಡ (ಬಿಪಿ) ಪ್ರಮಾಣ 120/70 ಅಂಶಗಳಿರುತ್ತದೆ. ಈ ಪ್ರಮಾಣದ ಆಸುಪಾಸಿನಲ್ಲಿ ಬಿಪಿ ಇದ್ದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ, ಹೈ ಬಿಪಿ ಇದ್ದಲ್ಲಿ ರಿಸ್ಕ್ ಜಾಸ್ತಿ ಇರುತ್ತದೆ. ಹೃದಯ ಬಡಿತದ ಒತ್ತಡ ತಡೆಯಲಾರದೆ ಮೆದುಳನ್ನೂ ಘಾಸಿ ಮಾಡುತ್ತದೆ. ಆಗ ಪಾರ್ಶ್ವವಾಯು (ಸ್ಟ್ರೋಕ್) ಉಂಟಾಗುತ್ತದೆ. ರಕ್ತಸಂಚಾರ ಕಡಿಮೆಯಾಗಿ ಗಂಭೀರ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾಗಿ ಬಿಪಿ ಹೆಚ್ಚಿಸಿಕೊಳ್ಳುವ ವಾತಾವರಣ ಹಾಗೂ ಕಾಯಿಲೆಗಳಿಂದ ದೂರವಿರಲು ಪ್ರಯತ್ನಿಸಬೇಕು ಎಂದು ತಜ್ಞರು ಸಲಹೆ ನೀಡಿದರು.
ಜಿಮ್ಳಲ್ಲಿ ದೇಹದಂಡನೆ ಮಾಡುವ ವ್ಯಕ್ತಿಗಳು ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಕೃತಕ ಪ್ರೋಟೀನ್ ಪೌಡರ್ ಬಳಸುವಿಕೆ ಹೆಚ್ಚುತ್ತಿದೆ. ತರಬೇತುದಾರರು ಇಂತಹದ್ದೇ ಪ್ರೋಟೀನ್ಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುವುದುಂಟು. ಆದರೆ, ಇಂತಹ ಪ್ರೋಟೀನ್ ಪೌಡರ್ ಅನ್ನು ಮಿತವಾಗಿ ಬಳಸುವುದು ಉತ್ತಮ. ಕೆಲವರಿಗೆ ಅವರ ದೇಹದ ರಚನೆ ಹಾಗೂ ಕಾಯಿಲೆಗಳ ಹಿನ್ನೆಲೆ ತಿಳಿಯದೆ ಸೇವಿಸಿದ್ದಲ್ಲಿ ನಕಾರಾತ್ಮಕ ಬದಲಾವಣೆಗೂ ಆಸ್ಪದ ನೀಡುತ್ತದೆ. ಹಾಗಾಗಿ ಪ್ರೋಟೀನ್ ಪೌಡರ್ ಅನ್ನು ಕಡಿಮೆ ಸೇವಿಸುವ ಜತೆಗೆ ಸಹಜ ಹಾಗೂ ಸಾತ್ವಿಕ ಆಹಾರವನ್ನು ಸೇವಿಸುವತ್ತ ದೃಷ್ಟಿಹರಿಸಿದ್ದಲ್ಲಿ ಅಪಾಯದಿಂದ ಪಾರಾಗಬಹುದಾಗಿದೆ.
* ಎದೆ ಎಡಭಾಗದಲ್ಲಿ ತೀವ್ರವಾದ ನೋವು /ಉರಿ
* ಹೃದಯ ಭಾರವಾದ ಅನುಭವ
* ಚಳಿಯಲ್ಲೂ ಮೈ ಬೆವರುವುದು
* ನಡೆಯುವಾಗ ಭುಜ, ಕೈ, ಕುತ್ತಿಗೆ, ಕೆಳ ದವಡೆ ಮತ್ತು ಬೆನ್ನು ನೋವು
* ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಜತೆಗೆ ವಾಂತಿ
* ಆಯಾಸ ಮತ್ತು ಅತಿಯಾದ ಸುಸ್ತು
* ಗ್ಯಾಸ್ಟ್ರಿಕ್ ರೀತಿಯ ಲಕ್ಷಣ
*ತಲೆ ಸುತ್ತುವಿಕೆ, ವಾಕರಿಕೆ
* ಉಸಿರಾಟದ ಸಮಸ್ಯೆ
*ಎದೆಬಡಿತ ಜೋರಾಗುವುದು
* ಬಿಟ್ಟುಬಿಟ್ಟು ಎದೆ ನೋವು ಕಾಣಿಸಿಕೊಳ್ಳುವುದು.
* ಬದಲಾದ ಆಹಾರ ಮತ್ತು ಜೀವನ ಶೈಲಿ
* ಚಟುವಟಿಕೆ ರಹಿತ ಜೀವನ ಕ್ರಮ
* ಧೂಮಪಾನ ಮತ್ತು ಮದ್ಯಪಾನ ಸೇವನೆ
* ಅತಿಯಾದ ರಕ್ತದೊತ್ತಡ ಮತ್ತು ಮಧುಮೇಹ
* ಸ್ಥೂಲಕಾಯ ಸಮಸ್ಯೆ
* ಕುಟುಂಬದಲ್ಲಿ ಹೃದಯಾಘಾತದ ಹಿನ್ನೆಲೆ
* ಉದ್ದೀಪನ ಮದ್ದುಗಳ ಬಳಕೆ
* ಮಾನಸಿಕ ಒತ್ತಡ, ಖಿನ್ನತೆ
* ನಿದ್ರಾಹೀನತೆ
* ಅತಿಯಾದ ಉಪು್ಪ ಸೇವನೆ ಬೇಡ
* ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ
* ಮದ್ಯಪಾನ, ಧೂಮಪಾನದಿಂದ ದೂರವಿರಿ
* ಸಕ್ಕರೆ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿರಿ
* ಆಲಸ್ಯ ಬಿಟ್ಟು ಚಟುವಟಿಕೆಯಿಂದಿರಿ
* ನಡಿಗೆ, ವ್ಯಾಯಾಮ, ಯೋಗ, ಪ್ರಾಣಾಯಾಮ
* ಸಮತೋಲಿತ ಆಹಾರ ಸೇವಿಸಿರಿ
* ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
* 7-9 ತಾಸು ಉತ್ತಮ ನಿದ್ರೆ ಮಾಡಿರಿ.
ಹೃದಯಾಘಾತ ಸಂಭವಿಸಿದ್ದಲ್ಲಿ ವ್ಯಕ್ತಿಯನ್ನು ಗರಿಷ್ಠ 90 ನಿಮಿಷದೊಳಗೆ ಹೃದ್ರೋಗದ ಸೌಲಭ್ಯವಿರುವ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ರೋಗಿಗೆ ತೀವ್ರ ಹೃದಯಾಘಾತ ಆಗಿದ್ದಲ್ಲಿ ‘ಕ್ಲಾಟ್ ಬ್ಲಸ್ಟರ್’ ಇಂಜಕ್ಷನ್ ಕೊಡಿಸಿ ದೊಡ್ಡಾಸ್ಪತ್ರೆಗೆ ಸೇರಿಸಬೇಕು. ಬಳಿಕ ಆರೈಕೆ ಮಾಡಿ ಆಂಜಿಯೋಗ್ರಾಮ್ ಮಾಡಿಸುವುದರಿಂದ ರೋಗಿಯನ್ನು ಉಳಿಸಿಕೊಳ್ಳಬಹುದು. ಹೃದಯದ ಸಮಸ್ಯೆ ಇದ್ದಲ್ಲಿ ತಡಮಾಡದೆ ಹೃದ್ರೋಗ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. | ಡಾ. ಟಿ.ಕೆ.ವೆಂಕಟೇಶ್ ಹಿರಿಯ ಸಲಹೆಗಾರರು, ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಜಯನಗರ
ಈ ವರ್ಷದ ವಿಶ್ವ ಹೃದಯ ದಿನದ ಘೋಷವಾಕ್ಯವಾಗಿ ‘ನಿಮ್ಮ ಹೃದಯ ನಿಮ್ಮ ಜವಾಬ್ದಾರಿ’ ಎಂಬುದು ಪ್ರತಿಯೊಬ್ಬರ ಧ್ಯೇಯಮಂತ್ರವಾಗಬೇಕು. ನಮಗಿರುವ ಏಕೈಕ ಹೃದಯವನ್ನು ಆದಷ್ಟು ಕಾಪಾಡಿಕೊಳ್ಳಲು ಕಾಳಜಿ ವಹಿಸಬೇಕು. ಒತ್ತಡದ ಬದುಕಿನಿಂದ ಆಚೆಬರಲು ಪ್ರಾಮುಖ್ಯತೆ ನೀಡಬೇಕು. ಜೀವನದಲ್ಲಿ ಸಂತೋಷದಿಂದರಲು ಹೆಚ್ಚು ಗಮನ ವಹಿಸುವುದು ಯುಕ್ತ. ಉತ್ತಮ ಆರೋಗ್ಯ ಹೊಂದಿದ ವ್ಯಕ್ತಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಿದೆ. | ಡಾ. ವಿಠಲ್ ಡಿ. ಬಾಗಿ ಹೃದಯ ತಜ್ಞ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಜಯನಗರ ಒಳ್ಳೆಯ ಹೃದಯ ಆರೋಗ್ಯವಾಗಿರಲು ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರ ಇರಬೇಕು. ನಿತ್ಯ 45 ನಿಮಿಷ ನಡಿಗೆ, ವಾರದಲ್ಲಿ ಕನಿಷ್ಠ 5 ದಿನ ವ್ಯಾಯಾಮ ಮಾಡುವುದು ದೈನಂದಿನ ಚಟುವಟಿಕೆಯಾಗಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಬೊಜ್ಜು ಹೆಚ್ಚಿಸುವ ವಸ್ತುಗಳ ಸೇವನೆ ಬಿಡುವುದು ಒಳಿತು. ಹಸಿರು ಸೊಪು್ಪ ಒಳಗೊಂಡ ಸಸ್ಯಾಹಾರದ ಊಟ ಉತ್ತಮ. 40 ವರ್ಷ ದಾಟಿದ ಬಳಿಕ ವರ್ಷಕ್ಕೊಮ್ಮೆ ವೈದ್ಯಕೀಯ ಪರೀಕ್ಷಿಸಿಕೊಳ್ಳುವುದು ಉತ್ತಮ. | ಡಾ. ಪಿ.ಲಕ್ಷ್ಮೀಕಾಂತ್ ಹೃದ್ರೋಗ ತಜ್ಞರು, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಜಯನಗರ
ನಿತ್ಯ ಚುರುಕಿನ ನಡಿಗೆ ಸಹಿತ ವ್ಯಾಯಾಮ ಮಾಡುವುದು, ಸಮತೋಲಿತ ಆಹಾರ ಸೇವನೆ, 6-8 ತಾಸು ಉತ್ತಮ ನಿದ್ರೆ ಮಾಡಬೇಕು. ಉತ್ತಮ ಜೀವನಶೈಲಿಗಾಗಿ ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯದಿರಿ. ಈ ಅಂಶಗಳನ್ನು ಅನುಸರಿಸಿದ್ದಲ್ಲಿ ಆರೋಗ್ಯವಂತ ಹೃದಯವನ್ನು ಹೊಂದಬಹುದು. | ಡಾ. ಡಿ. ಮಂಜುನಾಥ್ ಹೃದ್ರೋಗ ತಜ್ಞ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ ಜಯನಗರ
ನಿಮ್ಮ ಹೃದಯದ ಅಪಾಯವನ್ನು ತಿಳಿಯಿರಿ’ (Know your heart risk) ಅಂದರೆ ಹೃದಯ ಆರೋಗ್ಯ ಮತ್ತು ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿರಿ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ನಿಮ್ಮ ಹೃದಯ ಎಷ್ಟು ಆರೋಗ್ಯಕರವಾಗಿದೆ ಅಥವಾ ಇಲ್ಲವೆ?, ಎಷ್ಟು ಅಪಾಯದಲ್ಲಿದೆ ಎಂಬ ಮಾಹಿತಿಯನ್ನು ಅರಿಯಬಹುದಾಗಿದೆ. ಸಾರ್ವಜನಿಕರು ತಮ್ಮ ಆರೋಗ್ಯಕರ ಹೃದಯಕ್ಕೆ ಪೂರಕವಾದ ಕ್ರಮಗಳನ್ನು ಅನುಸರಿಸುವುದು ಯುಕ್ತ. | ಡಾ. ಅಭಿಜಿತ್ ವಿಲಾಸ್ ಕುಲಕರ್ಣಿ ಹಿರಿಯ ಸಲಹೆಗಾರರು, ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಜಯನಗರ