

ವಿಜಯವಾಣಿ ಸುದ್ದಿಜಾಲ ಕಾರವಾರ
ಆಕಾಶದಿಂದ ಗುಡ್ಡ ಬಂದು ನೆಲಕ್ಕೆ ಅಪ್ಪಳಿಸಿದಂತೆ ಭಾಸವಾಯಿತು. ಕಲ್ಲು-ಬಂಡೆಗಳ ಸಮೇತ ಜರಿದ ಗುಡ್ಡದೊಂದಿಗೆ ಜನ, ವಾಹನ, ಮನೆ ಕೊಚ್ಚಿ ಹೋಯಿತು. ಬಂಡೆ ನದಿಯಲ್ಲಿ ಬಿದ್ದ ರಭಸಕ್ಕೆ ಸುನಾಮಿಯಂತೆ ಅಲೆಗಳು ಎದ್ದವು. ಅದು ಎದೆ ಝುಲ್ ಎನಿಸುವ ದೃಶ್ಯ’ ಎಂದು ಪ್ರತ್ಯಕ್ಷದರ್ಶಿಗಳು ಗುಡ್ಡ ಕುಸಿತ ಘಟನೆಯ ಘೊರತೆ ಬಿಚ್ಚಿಟ್ಟರು.
ಅಂಕೋಲಾ ತಾಲೂಕು ಶಿರೂರು ಗ್ರಾಮದಲ್ಲಿ ಬೃಹತ್ ಗುಡ್ಡ ಜರಿದು ಬಿದ್ದಿದ್ದರಿಂದ ಒಂದೇ ಕುಟುಂಬದ ಐವರು ಸೇರಿ 11ಕ್ಕಿಂತ ಹೆಚ್ಚು ಜನರು ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗಿದೆ. ಕಾರವಾರ ತಾಲೂಕು ಕಡವಾಡದಲ್ಲಿ 9 ಜನರನ್ನು ಬಲಿ ಪಡೆದ ಘಟನೆಯ ಬಳಿಕ ನಡೆದ ಘೊರ ದುರಂತ ಇದಾಗಿದೆ. ಜರಿದ ಗುಡ್ಡದ ಅವಶೇಷಗಳು ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ನೂರು ಮೀಟರ್ಗಿಂತ ಹೆಚ್ಚು ಉದ್ದಕ್ಕೆ 20 ಅಡಿಯಷ್ಟು ಎತ್ತರಕ್ಕೆ ರಾಶಿಯಾಗಿ ಬಿದ್ದಿವೆ. ಹೆದ್ದಾರಿ ಮೇಲೆ ಮತ್ತೊಂದು ಗುಡ್ಡದಂತೆಯೇ ಕಾಣುತ್ತಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.
ನದಿ ಮಧ್ಯಕ್ಕೆ ತಲುಪಿದ ಬಂಡೆ: ಗುಡ್ಡದಿಂದ ಉರುಳಿ ಬಂದ ಬೃಹತ್ ಬಂಡೆ ನದಿಯಲ್ಲಿ ಬಿದ್ದ ಪರಿಣಾಮ ಗಂಗಾವಳಿ ನದಿಯ ಇನ್ನೊಂದು ಪಾರ್ಶ್ವ, ಅಂದರೆ ಸಗಡಗೇರಿ ಗ್ರಾಪಂ ವ್ಯಾಪ್ತಿಯ ಉಳುವರೆ ಅಂಬುಕೋಳ ಗ್ರಾಮದ ಎರಡು ಮನೆಗಳನ್ನು ಕೊಚ್ಚಿ ಹೋಗುವಂತೆ ಮಾಡಿದೆ. ಸುನಾಮಿ ರೀತಿಯಲ್ಲಿ ಅಪ್ಪಳಿಸಿ ಮನೆಯನ್ನು ಆಪೋಷನಗೈದಿದ್ದು, ಮನೆಯಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ. ಅದರಲ್ಲಿ ಒಬ್ಬರು ಸನ್ನಿ ಹನುಮಂತ ಗೌಡ (65) ಎಂದು ತಿಳಿದು ಬಂದಿದೆ. ದಡದಲ್ಲಿ ನಿಂತರೆ ನದಿಯಲ್ಲಿ ಬಿದ್ದಿರುವ ಬೃಹತ್ ಬಂಡೆ ಕಾಣುತ್ತಿದೆ. ಈ ಗ್ರಾಮದ 11 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕಾರವಾರ ತಾಲೂಕಿನ ಕಿನ್ನರದಲ್ಲಿ ಗುಡ್ಡ ಕುಸಿತವಾಗಿದ್ದು, ತಿಕರ್ಸ ಗುರವ (83) ಮೃತಪಟ್ಟಿದ್ದಾರೆ.
ತೇಲಿ ಬಂದ ಆನೆ ಕಳೇಬರ: ಉತ್ತರ ಕನ್ನಡದ 10 ತಾಲೂಕುಗಳಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಸರಾಸರಿ 101 ಮಿಮೀ ಮಳೆಯಾಗಿದೆ. ಪರಿಣಾಮ ಗಂಗಾವಳಿ, ಅಘನಾಶಿನಿ, ಗುಂಡಬಾಳ ಮತ್ತಿತರ ನದಿಗಳು ಉಕ್ಕಿದ್ದು, 100 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ನಿರಂತರ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ತಗ್ಗು ಪ್ರದೇಶಗಳು, ಕೃಷಿ ಭೂಮಿ ಜಲಾವೃತಗೊಂಡಿವೆ. ಪಶ್ಚಿಮ ಘಟ್ಟ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಗೆ ಕುಮಾರಧಾರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಸೋಮವಾರ ತಡರಾತ್ರಿ ನದಿಯಲ್ಲಿ ಆನೆ ಮೃತದೇಹ ತೇಲಿಬಂದಿದೆ. ಜಲಮಟ್ಟ ವೀಕ್ಷಣೆಗೆ ತಡರಾತ್ರಿ 1 ಗಂಟೆ ತೆರಳಿದ ಮನ್ಮಥ ಬಟ್ಟೋಡಿ ಮತ್ತಿತರರ ತಂಡ ಸೇತುವೆ ಮೇಲಿನಿಂದ ಟಾರ್ಚ್ ಹಾಯಿಸಿ ನೋಡಿದಾಗ ಆನೆಯ ಮೃತದೇಹ ತೇಲುತ್ತಿರುವುದು ಕಂಡುಬಂತು. ಕೆಲ ದಿನಗಳ ಹಿಂದೆ ಸತ್ತು ಹೋಗಿದ್ದ ಆನೆ ನೀರಲ್ಲಿ ಕೊಚ್ಚಿ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ತುಂಗಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ದಾವಣಗೆರೆ ಜಿಲ್ಲೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ ಮಂಗಳವಾರವೂ ಮುಂದುವರಿದಿದೆ. ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ನದಿ ಒಳಹರಿವು ಪ್ರಮಾಣ ಹೆಚ್ಚಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ ನಿತ್ಯ 75 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಚಿಕ್ಕೋಡಿ ವಿಭಾಗದಲ್ಲಿ ದೂಧಗಂಗಾ ನದಿಯ ನಾಲ್ಕು ಸೇತುವೆ, ಕೃಷ್ಣಾ ನದಿಯ ಒಂದು ಸೇತುವೆ ಮುಳುಗಡೆಯಾಗಿದೆ.
ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 110 ಅಡಿ ತಲುಪಿದೆ. 35 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್, ಕಬಿನಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕೊಡಗಿನ ಬಹುತೇಕ ಕಡೆಗಳಲ್ಲಿ ಮಂಗಳವಾರವೂ ಜೋರು ಮಳೆಯಾಗಿದೆ. ಬುಧವಾರ ಬೆಳಗ್ಗೆ 8.30ರ ತನಕ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೊಷಿಸಲಾಗಿದೆ. ಸಂಪಾಜೆ ಹೋಬಳಿ ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಬರೆ ಜರಿದು ಭಾರಿ ಹಾನಿಯಾಗಿದೆ. ಮಳೆ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವರುಣಾರ್ಭಟ ಮುಂದುವರಿದಿದೆ. ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಶರಾವತಿ, ಮಾಲತಿ, ಕುಮದ್ವತಿ, ಶರ್ಮಣಾವತಿ, ವರದಾ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಸಾಕಷ್ಟು ಅವಾಂತರವೂ ಸೃಷ್ಟಿಯಾಗಿದೆ. ಜಿಲ್ಲೆಯ ವಿವಿಧ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ತಲಾ 5 ಲಕ್ಷ ರೂಪಾಯಿ ಪರಿಹಾರ: ಗುಡ್ಡ ಕುಸಿತ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ನದಿ ಹಾಗೂ ಗುಡ್ಡದ ನಡುವೆ ರಾಷ್ಟ್ರೀಯ ಹೆದ್ದಾರಿ ಇದ್ದು, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೆಲವರು ಸಣ್ಣ ಮಟ್ಟದ ಡಾಬಾ ನಿರ್ವಿುಸಿಕೊಂಡಿದ್ದಾರೆ. ಇಲ್ಲಿ ಅಡುಗೆ ಅನಿಲ ಹೊತ್ತೊಯ್ಯುವ ಟ್ಯಾಂಕರ್ ಚಾಲಕರು ಟೀ ಕುಡಿಯಲು ವಾಹನ ನಿಲ್ಲಿಸಿದ್ದಾಗ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೂಡಲೇ ರೂ.5 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇನ್ನೂ ವಾಹನ ಚಾಲಕರು ನಮ್ಮ ರಾಜ್ಯದವರಲ್ಲ. ಆದರೂ, ಅವರು ಕೆಲಸದ ಮೇಲೆ ನಮ್ಮ ರಾಜ್ಯಕ್ಕೆ ಬಂದಿದ್ದು, ಈ ವೇಳೆ ದುರಾದೃಷ್ಟವಶಾತ್ ಅಪಘಾತ ಸಂಭವಿಸಿದೆ. ಹೀಗಾಗಿ ಅವರಿಗೂ ಪರಿಹಾರ ನೀಡುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ನೀರಿನ ರಭಸಕ್ಕೆ ತೇಲಿ ಹೋದ ಗ್ಯಾಸ್ ಟ್ಯಾಂಕರ್: ಎರಡು ಟ್ಯಾಂಕರ್ಗಳು ಗಂಗಾವಳಿ ನದಿಯಲ್ಲಿ ಮರದ ದಿಮ್ಮಿಯಂತೆ ತೇಲಿ ಹೋಗಿವೆ! ಖಾಲಿ ಟ್ಯಾಂಕರ್ ಸಮೀಪದ ಸಗಡಗೇರಿ ಕಣಗಿಲ ಬಳಿ ಕಾಣಿಸಿದೆ. ಅನಿಲ ತುಂಬಿದ ಟ್ಯಾಂಕರ್ ಕೂರ್ವೆ ಗ್ರಾಮದ ಬಳಿ ಕಾಣಿಸಿಕೊಂಡಿದೆ. ಅನಿಲ ಸೋರಿಕೆಯಾಗಿ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ನದಿಯ ದಡದ ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ. ಮಂಗಳೂರಿನಿಂದ ಟ್ಯಾಂಕರ್ ಕಂಪನಿಯ ತಜ್ಞರ ತಂಡ ಆಗಮಿಸಿದೆ. ಇನ್ನು ಶಿರೂರಿನ ಎರಡೂ ದಿಕ್ಕಿನಲ್ಲಿ ಸಾವಿರಾರು ವಾಹನಗಳು ನಿಂತಿದ್ದು, ಬದಲಿ ರಸ್ತೆಗಳ ಮೂಲಕ ಅವುಗಳನ್ನು ಕಳುಹಿಸುವ ಕಾರ್ಯ ನಿಧಾನವಾಗಿ ಸಾಗಿದೆ.