

ಬೆಂಗಳೂರು: ಕರೊನಾ ಸೋಂಕು ನಿಯಂತ್ರಣದ ಉದ್ದೇಶದಿಂದ ಕಳೆದೆರಡು ವರ್ಷದಿಂದ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಂ) ಮಾಡುತ್ತಿದ್ದ ಐಟಿಬಿಟಿ ಕಂಪನಿಗಳ ಸಿಬ್ಬಂದಿ ಶೀಘ್ರದಲ್ಲೇ ಕಚೇರಿಗೆ ತೆರಳಬೇಕಾಗಬಹುದು. ಮಾಹಿತಿ ತಂತ್ರಜ್ಞಾನ ಕಂಪನಿಗಳು (ಐಟಿ) ಕ್ರಮೇಣವಾಗಿ ಕಚೇರಿಗಳಿಗೆ ಮರಳುವಂತೆ ಎಲ್ಲ ನೌಕರರಿಗೆ ಸೂಚಿಸಿರುವುದೇ ಇದಕ್ಕೆ ಕಾರಣ. ವರ್ಕ್ ಫ್ರಂ ಹೋಂನಿಂದಾಗಿ ಸಂಕಷ್ಟ ಅನುಭವಿಸಿದ್ದ ಟ್ರಾವೆಲ್ಸ್, ಹೋಟೆಲ್ ಇತ್ಯಾದಿ ಉದ್ಯಮ ಸಂಸ್ಥೆಗಳು ಐಟಿ ಕಂಪನಿಗಳ ಈ ನಿರ್ಧಾರದಿಂದ ತಮ್ಮ ಜೀವನವೂ ಹಳಿಗೆ ಬರುತ್ತದೆ ಎಂಬ ಆಶಾಭಾವನೆ ಹೊಂದಿವೆ. ಕರೊನಾ ಸೋಂಕು 2020ರಲ್ಲಿ ಭಾರತಕ್ಕೆ ದಾಂಗುಡಿಯಿಟ್ಟಿತ್ತು. 2020ರ ಮಾರ್ಚ್ ಮೂರನೇ ವಾರದಲ್ಲಿ ಲಾಕ್ಡೌನ್ ಘೋಷಿಸಲಾಯಿತು. ಸೋಂಕಿನ ಹಾವಳಿ ತೀವ್ರಗೊಂಡಾಗ ಜಗತ್ತಿನ ಬಹುತೇಕ ಭಾಗಗಳಲ್ಲಿ ವರ್ಕ್ ಫ್ರಂ ಹೋಂ ಪದ್ಧತಿ ಜಾರಿಗೆ ಬಂದಿತ್ತು.
ಪರಿಸ್ಥಿತಿ ಸುಧಾರಿಸಿ ಕಚೇರಿಗಳನ್ನು ತೆರೆಯಬೇಕೆಂಬ ಹಂತದಲ್ಲೇ ಒಂದೊಂದೇ ಪ್ರಭೇದದಿಂದ ಹೊಸ ಅಲೆಗಳು ಉಂಟಾಗಿ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಮುಂದುವರಿದಿತ್ತು. ಕಳೆದ ವರ್ಷ ಸೆಪ್ಟೆಂಬರ್ ನಂತರ ಕಚೇರಿಗಳಿಗೆ ಮರಳಲು ಟೆಕ್ಕಿಗಳಿಗೆ ಸೂಚಿಸುವುದಾಗಿ ಐಟಿ ಕಂಪನಿಗಳು ಪ್ರಕಟಿಸಿದ್ದವು. ಆದರೆ, ಒಮಿಕ್ರಾನ್ ರೂಪಾಂತರಿಯ ಅಬ್ಬರ ಹಾಗೂ ಸ್ಥಳೀಯ ಲಾಕ್ಡೌನ್ಗಳ ಕಾರಣ ಆ ನಿರ್ಧಾರವನ್ನು ಮುಂದೂಡಿದ್ದವು. ಇದೀಗ ಕರೊನಾ 3ನೇ ಅಲೆ ಪರಿಣಾಮ ಭಾರತದ ಮಟ್ಟಿಗೆ ಹಾಗೂ ವಿಶ್ವದ ಅನೇಕ ಭಾಗಗಳಲ್ಲಿ ಹೆಚ್ಚಾಗಿ ಬಾಧಿಸದ ಕಾರಣ ಟಿಸಿಎಸ್, ವಿಪ್ರೊ, ಟಿಸಿಎಸ್, ಕಾಗ್ನಿಜಂಟ್, ಇನ್ಪೋಸಿಸ್ ಮೊದಲಾದ ಐಟಿ ಕಂಪನಿಗಳು ಸಿಬ್ಬಂದಿಗೆ ಸಂದೇಶ ರವಾನಿಸಿವೆ. 2 ವರ್ಷದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಪಡೆದಿದ್ದ ಟೆಕ್ಕಿಗಳು ಇನ್ನು ಮುಂದೆ ಕಚೇರಿಗಳಿಗೆ ಹಾಜರಾಗುವುದು ಅನಿವಾರ್ಯ ಆಗಲಿದೆ.
ಸಿಬ್ಬಂದಿ ಒತ್ತಡ: ಮನೆಯಲ್ಲಿ ಕುಟುಂಬ ಸದಸ್ಯರೊಂದಿಗಿದ್ದು ಕೆಲಸವನ್ನೂ ಮಾಡಬಹುದು ಎಂದು ವರ್ಕ್ ಫ್ರಂ ಹೋಂ ಪ್ರಾರಂಭದಲ್ಲಿ ಐಟಿ ಉದ್ಯೋಗಿಗಳು ತಿಳಿದಿದ್ದರು. ಉದ್ಯಮ ಸಂಸ್ಥೆಗಳಿಗೂ ಇದರಿಂದಾಗಿ ಕಟ್ಟಡ ಬಾಡಿಗೆ, ಸ್ವಚ್ಛತಾ ಸಿಬ್ಬಂದಿ ಸೇರಿ ಅನೇಕ ವೆಚ್ಚಗಳು ಉಳಿತಾಯವಾಗಿತ್ತು. ಆದಷ್ಟೂ ಈ ವ್ಯವಸ್ಥೆಯನ್ನೇ ಮುಂದುವರಿಸಲು ಸಂಸ್ಥೆಗಳು ಆಸಕ್ತಿ ವಹಿಸಿದ್ದವು. ಆದರೆ ಮನೆಯಿಂದಲೇ ಕೆಲಸ ಮಾಡಲು ಹೊಂದಿಕೊಂಡರೆ ಒಂದು ತಂಡವಾಗಿ ಕಾರ್ಯನಿರ್ವಹಿಸುವ, ಸಹೋದ್ಯೋಗಿಗಳ ಜತೆಗೆ ಬೆರೆಯುವ, ಚರ್ಚೆ ನಡೆಸುವ ಅಭ್ಯಾಸ ತಪ್ಪಿಹೋಗಿ ಭವಿಷ್ಯದಲ್ಲಿ ಉತ್ಪಾದಕತೆ ಕಳೆದುಕೊಳ್ಳುವ ಆತಂಕ ಉದ್ಯೋಗಿಗಳದ್ದಾಗಿತ್ತು. ಕಚೇರಿಯಲ್ಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸಾಕಷ್ಟು ಒತ್ತಡಗಳಿದ್ದವು.
ವರ್ಕ್ ಫ್ರಂ ಹೋಂನಿಂದಾಗಿ ಹೋಟೆಲ್ ಉದ್ಯಮ ಭಾರೀ ಆಘಾತ ಎದುರಿಸಿದೆ. ಐಟಿ ಕಂಪನಿಗಳ ಸುತ್ತಮುತ್ತ ಮುಖ್ಯವಾಗಿ ಮಧ್ಯಾಹ್ನದ ಊಟದ ಆದಾಯ ನಿರೀಕ್ಷಿಸಿ ಕೋಟ್ಯಂತರ ರೂ. ಹೂಡಿಕೆ ಮಾಡಿದವರು ನಷ್ಟ ಅನುಭವಿಸಿದ್ದಾರೆ. ವರ್ಕ್ ಫ್ರಂ ಹೋಂ ರದ್ದಾದರೆ ಹೋಟೆಲ್ ಉದ್ಯಮಕ್ಕೆ ಒಳ್ಳೆಯದು. | ಬೀಜಾಡಿ ಚಂದ್ರಶೇಖರ ಹೆಬ್ಬಾರ್ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ರಾಜಸ್ಥಾನ, ಹರ್ಯಾಣ, ಉತ್ತರಾಖಂಡ ಸೇರಿ ದೇಶದೆಲ್ಲೆಡೆಯ ಉದ್ಯೋಗಿಗಳಿದ್ದಾರೆ. ಶಾಲೆಗಳೂ ಆನ್ಲೈನ್ ಆಗಿರುವುದರಿಂದ ಎಲ್ಲರೂ ತಂತಮ್ಮ ಊರುಗಳಲ್ಲೇ ಇದ್ದಾರೆ. ಒಮ್ಮೆ ವರ್ಕ್ ಫ್ರಂ ಹೋಂ ರದ್ದಾದರೆ ಕಂಪನಿಗಳ ವಾಹನಗಳು, ಶಾಲಾ ವಾಹನಗಳಿಗೂ ಅನುಕೂಲವಾಗುತ್ತದೆ. ಸಾಲ ಮರುಪಾವತಿಗೆ ಕರೊನಾ ಸಮಯದಲ್ಲಿ ನೀಡಿದ್ದ ವಿನಾಯಿತಿಗಳು ಮುಗಿದಿದ್ದು, ಇಡೀ ಉದ್ಯಮ ಕಷ್ಟದಲ್ಲಿದೆ. ಆದಷ್ಟೂ ಶೀಘ್ರದಲ್ಲಿ, ಕಚೇರಿಯಿಂದಲೇ ಕೆಲಸ ಮಾಡುವಂತಾಗಲಿ ಎಂಬ ಆಶಯ ನಮ್ಮದು. | ಕೆ. ರಾಧಾಕೃಷ್ಣ ಹೊಳ್ಳ ಕರ್ನಾಟಕ ಸ್ಟೇಟ್ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ
ಸಂಬಂಧಿತ ಉದ್ಯಮದಲ್ಲಿ ಸಂತಸ: ಲಾಕ್ಡೌನ್ನಿಂದಾಗಿ ಐಟಿ ಉದ್ಯೋಗಿಗಳನ್ನು ಕಚೇರಿ- ಮನೆಗೆ ಕರೆದೊಯ್ಯುತ್ತಿದ್ದ ಕ್ಯಾಬ್ ಚಾಲಕರು, ಟ್ಯಾಕ್ಸಿ ಚಾಲಕರು, ಟ್ರಾವೆಲ್ಸ್ ಸಂಸ್ಥೆಗಳು, ಹೋಟೆಲ್ ಉದ್ಯಮ ಸೇರಿ ಅನೇಕರು ನಷ್ಟ ಅನುಭವಿಸಿದ್ದರು. ಸಾಲ ಮಾಡಿ ವಾಹನ ಖರೀದಿಸಿದ, ಉದ್ಯಮ ಆರಂಭಿಸಿದವರು ಬಾಗಿಲು ಮುಚ್ಚಿ ಬೇರೆ ಕೆಲಸಗಳತ್ತ ತೆರಳಿದ್ದರು. ಇದೀಗ ಹಂತಹಂತವಾಗಿ ವರ್ಕ್ ಫ್ರಂ ಹೋಂ ನಿರ್ಬಂಧ ತೆರವಾಗುವುದರಿಂದ ಉದ್ಯಮ ಚಿಗುರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.