

ಬೆಂಗಳೂರು: ಹೊಂಬೇಗೌಡನಗರ ಮಾಧವನ್ ಪಾರ್ಕ್ ಕೊಳಗೇರಿ ಪ್ರದೇಶದಿಂದ ಕೊರಮಂಗಲ 3ನೇ ಹಂತದ ಕೊಳಗೇರಿ ಪ್ರದೇಶಕ್ಕೆ ಸ್ಥಳಾಂತರಿಸಲಾದ 951 ಕುಟುಂಬಗಳಿಗೆ ಕ್ರಯ ಪತ್ರ ವಿತರಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ಹರಿಜನ ಕೊಳಗೇರಿ ನಿವಾಸಿಗಳ ಸಂಘ (ರಿ) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಲವು ದಶಕಗಳಿಂದ ಮಾಧವನ್ ಪಾರ್ಕ್ ಕೊಳಗೇರಿ ಪ್ರದೇಶದಲ್ಲಿ ವಾಸವಾಗಿದ್ದ 951 ಕುಟುಂಬಗಳನ್ನು ಸರ್ಕಾರ 1998ರಲ್ಲಿ ಕೋರಮಂಗಲ 3ನೇ ಹಂತಕ್ಕೆ ಸ್ಥಳಾಂತರಿಸಿತು. ಸ್ಥಳಾಂತರಿಸಿದ ಬಳಿಕ ಹಂಚಿಕೆ ಹಕ್ಕುಪತ್ರ ಸಹ ನೀಡಲಾಗಿತ್ತು. ಮಾಧವನ್ ಪಾರ್ಕ್‌ನಿಂದ ಕೋರಮಂಗಲಕ್ಕೆ ಸ್ಥಳಾಂತರಗೊಂಡ ಕೊಳಗೇರಿ ನಿವಾಸಿಗಳಿಗೆ ಕ್ರಯ ಪತ್ರ ನೀಡುವಂತೆ 1996ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸರ್ಕಾರ ಮತ್ತು ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ್ಲ. ಕ್ರಯಪತ್ರ ಇಲ್ಲದ ಕಾರಣ, ಖಾತಾ ಸಿಗುತ್ತಿಲ್ಲ. ಇದರಿಂದ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ತೊಂದರೆ ಆಗುತ್ತಿದೆ. 30 ವರ್ಷಗಳಿಂದ ಈ ಸಮಸ್ಯೆಯನ್ನು ಕೊಳಗೇರಿ ನಿವಾಸಿಗಳು ಎದುರಿಸುತ್ತಿದ್ದಾರೆ ಎಂದು ಪೀಠದ ಮುಂದೆ ವಿವರಸಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.