ಕೆ-ಸೆಟ್ ಪ್ರಶ್ನೆಪತ್ರಿಕೆ ಕನ್ನಡದಲ್ಲಿ ನೀಡಿ: ಕೆಇಎಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ

Dr Purushothama bilimale
Published on

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನ.24ರಂದು ನಡೆಸಲು ಉದ್ದೇಶಿಸಿರುವ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ- ಸೆಟ್) ಮನೋವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯನ್ನು ಕೇವಲ ಆಂಗ್ಲ ಭಾಷೆಯಲ್ಲಿ ನೀಡುತ್ತಿರುವ ನಿರ್ಧಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿರುವ ಡಾ .ಬಿಳಿಮಲೆ, ಪರೀಕ್ಷಾ ಪ್ರಾಧಿಕಾರದ ನಿರ್ಣಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಷ್ಟೇ ಅಲ್ಲ, ಈ ನೆಲದ ಕಾನೂನನ್ನು ಉಲ್ಲಂಘಿಸುವ ವಿಷಯವಾಗಿರುತ್ತದೆ. ಈ ಕುರಿತು ಕೂಡಲೇ ಕ್ರಮ ವಹಿಸಿ ಕನ್ನಡ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವುದು ಮತ್ತು ಈ ಅಚಾತುರ್ಯಕ್ಕೆ ಕಾರಣವೇನು ಎಂಬ ಕುರಿತು ವರದಿ ಸಲ್ಲಿಸುವುದು ಎಂದು ಸೂಚಿಸಿದ್ದಾರೆ.

ಒಂದು ವೇಳೆ ಆಂಗ್ಲಭಾಷೆಯಲ್ಲಿ ಮಾತ್ರ ಪರೀಕ್ಷೆಯನ್ನು ನಿರ್ವಹಿಸಿ ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಅನ್ಯಾಯವಾದಲ್ಲಿ ಮುಂದಿನ ಆಗುಹೋಗುಗಳಿಗೆ ತಾವೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಡಾ. ಬಿಳಿಮಲೆ ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥರಿಗೆ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net