

ಶಿವಮೊಗ್ಗ: ಒಳಮೀಸಲಾತಿಗೆ ಸಂಬಂಧಿಸಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎ.ಭಾನುಪ್ರಸಾದ್ ಒತ್ತಾಯಿಸಿದರು.
ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿ ಗೊಂದಲ ಸೃಷ್ಟಿ ಮಾಡಿದ್ದು, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸ್ವಜಾತಿ ಪ್ರೇಮದಿಂದ ಮನಸ್ಸಿಗೆ ಬಂದಂತೆ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಪ್ರೀಂಕೋರ್ಟ್ ಆದೇಶದ ನಂತರವೂ ಒಳಮೀಸಲಾತಿ ವರ್ಗೀಕರಣವನ್ನು ನನೆಗುದಿಗೆ ಬೀಳಿಸಲಾಗುತ್ತಿದೆ. ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಇದನ್ನು ವಿರೋಧಿಸಿ ಅ.10ರಂದು ಬೆಂಗಳೂರಿನಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮನೆ ಮುತ್ತಿಗೆ ಹಾಕಲಾಗುವುದು. ಅವರ ರಾಜೀನಾಮೆಗೆ ಒತ್ತಾಯಿಸಲಾಗುವುದು ಎಂದರು.
ಸಮೀಕ್ಷೆಯಲ್ಲಿ ತೊಡಕಾಗಿರುವ ಎ.ಕೆ., ಎ.ಡಿ., ಎ.ಎ. ಎಂಬ ಪದಗಳನ್ನು ಮೂಲ ಜಾತಿಗಳ ವಿವರವನ್ನು ಪಡೆಯದೆ ನೇರನೇಮಕಾತಿಯಲ್ಲಿ ಎ ಮತ್ತು ಬಿ ಗುಂಪಿನಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದು ಸರ್ಕಾರದ ನಿರ್ಲಕ್ಷೃಕ್ಕೆ ಕೈಗನ್ನಡಿಯಾಗಿದೆ. ಕೂಡಲೇ ಮೂಲ ಜಾತಿಗಳ ವಿವರ ಪಡೆದು ಅವರವರ ಗುಂಪಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
2025ರ ಆ.25ರಂದು ಹೊರಡಿಸಿದ ಒಳಮೀಸಲಾತಿ ಆದೇಶದ ಪ್ಯಾರಾ 2ಅನ್ನು ಕೂಡಲೇ ತಿದ್ದುಪಡಿ ಮಾಡಬೇಕು. ಬಡ್ತಿ ಮೀಸಲಾತಿ ಹೊಸ ಪ್ರವರ್ಗಕ್ಕೆ ಸಂಬಂಧಿಸಿ ಜಾತಿ ಪ್ರಮಾಣಪತ್ರ, ಬ್ಯಾಕ್‌ಲಾಗ್ ಹುದ್ದೆಗಳು, ಸ್ಥಳೀಯ ಸಂಸ್ಥೆಗಳ ರಾಜಕೀಯ ಮತ್ತು ಶೈಕ್ಷಣಿಕ ಪ್ರಾತಿನಿಧ್ಯ, ಆರ್ಥಿಕ ಅನುದಾನ ಹಂಚಿಕೆಗೆ ಸಂಬಂಧಿಸಿ ಒಟ್ಟಾರೆ ಆದೇಶವನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಬಿಡುಗಡೆ ಮಾಡಬೇಕು. ಒಳಮೀಸಲಾತಿಗೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸಬೇಕು. ಅಲೆಮಾರಿಗಳಿಗೆ ನ್ಯಾಯ ಕೊಡಿಸಬೇಕು ಎಂದರು.
ಪ್ರಮುಖರಾದ ಆರ್.ರಂಗನಾಥ್, ಎ.ವಿ.ಮಲ್ಲೇಶ್, ಎ.ಪ್ರತಾಪ್, ವಿಜಯಕುಮಾರ್, ಎ.ಕೆ.ಮೋಹನ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.