

ಬೆಂಗಳೂರು: ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸರ್ಕಾರವನ್ನು ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳಿಗೆ ಹಣ ಬೇರೆ ಕಡೆಯಿಂದ ತರಬೇಕೆ? ಹೇಗೆ ತರಬೇಕು? ಎನ್ನುವ ಕುರಿತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಅದನ್ನು ಬಿಟ್ಟು ಉಚಿತ, ಖಚಿತ ಅಂತ ಹೇಳಬೇಡಿ. ಈ ಉಚಿತ ಖಚಿತದಿಂದ ಹೇಗೆ ಹೊರ ಬರಬಹುದು ಎಂಬುದನ್ನು ಯೋಚನೆ ಮಾಡಿ ಎಂದು ಸಲಹೆ ನೀಡಿದರು.
ಸರ್ವಪಕ್ಷ ಸಭೆ ಕರೆಯಿರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ತಿಂಗಳಿಗೊಂದು ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಹೇಳಿದರು. ಎಸ್.ಸಿ.ಎಸ್.ಟಿ ಸಮುದಾಯದ ಹಣ ಗ್ಯಾರಂಟಿಗೆ ಬಳಕೆ ಸಲ್ಲದು. ಇದರ ಬಗ್ಗೆ ಆಯಾ ಸಮುದಾಯಗಳು ಯೋಚಿಸಬೇಕು. ಕಾಂಗ್ರೆಸ್ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ. ಅವರು ಮಾಡಿದ್ದೇ ಸರಿ ಅಂತ ಹೇಳುತ್ತಿದ್ದಾರೆ. ನಾವು ಹೇಳಿದರೆ ಹೊಟ್ಟೆ ಕಿಚ್ಚಿನಿಂದ ಹೇಳುತ್ತಾರೆ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪರಿಶಿಷ್ಟರ ಹಣ ಬೇರೆ ಕಾರ್ಯಕ್ರಮಗಳಿಗೆ ಬಳಕೆ ಮಾಡಬಾರದು ಎಂದು ನೀವೇ ಕಾನೂನು ಮಾಡಿದ್ದೀರಾ. ಈಗ ನೀವೇ ಅದನ್ನ ಬಳಿಕೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.
ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ:
ಕಾಂಗ್ರೆಸ್‌ನ ಗ್ಯಾರಂಟಿ ನಿಲುವು ಸ್ಪಷ್ಟವಾಗಿ ಇಲ್ಲ. ಗ್ಯಾರಂಟಿ ಅನುಷ್ಠಾನಕ್ಕೆ ತಾಲೂಕು ಮಟ್ಟದಲ್ಲಿ ಎಲ್ಲ ಪಕ್ಷಗಳನ್ನು ಒಳಗೊಂಡಿರುವ ಒಂದು ಸಮಿತಿ ಮಾಡಿ, ಗ್ಯಾರಂಟಿಗಳು ಜನರಿಗೆ ತಲುಪುತ್ತಿವೆಯೆ? ಇಲ್ಲವೆ ಎಂಬುದನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆ ರದ್ದು ಮಾಡಿ ಆಸ್ಪತ್ರೆ, ಶಾಲೆ ಕಟ್ಟಿಸಿ. ಆಟೋ ಚಾಲಕರಿಗೆ ಕೆಲಸ ಇಲ್ಲ. ಅವರಿಗೆ ಪರಿಹಾರ ಕೊಡಿ. ಅದು ಬಿಟ್ಟು ಗ್ಯಾರಂಟಿ ಹೆಸರು ಹೇಳಿ ಮೋಸ ಮಾಡಬೇಡಿ. ರೈತನಿಗೆ ಹಣ ಕೊಡಿ. ಅವನು ಬಿತ್ತನೆ ಮಾಡಿ ಹಣ ವಾಪಸ್ ಮಾರುಕಟ್ಟೆಗೆ ಕೊಡುತ್ತಾನೆ ಎಂದರು.
ಮೋದಿ ಬೈದರೆ ಆಗುವುದಿಲ್ಲ:
ಮೋದಿಗೆ ಪರ್ಯಾಯ ಯಾರು ಎಂದು ಹೇಳಬೇಕು. ಅಭಿವೃದ್ಧಿಗೆ ನಿಮ್ಮ ಪರ್ಯಾಯ ಏನು ಎಂದು ಹೇಳಬೇಕು. ಬರೀ ಮೋದಿ ಬೈದರೆ ಆಗುವುದಿಲ್ಲ. ಮಮತಾ, ನಿತೀಶ್, ಚಂದ್ರಶೇಖರ ಯಾರು ಪ್ರಧಾನಿ ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ಕೆಜಿಹಳ್ಳಿ,ಡಿಜಿಹಳ್ಳಿ ನ್ಯಾಯಾಂಗ ತನಿಖೆಗೆ ಆಗ್ರಹ:
ಶೇ.4 ಮೀಸಲಾತಿ ಬಗ್ಗೆ ಕಾಂಗ್ರೆಸ್ ಸರ್ಕಾರ ಮಾತನಾಡುತ್ತಿಲ್ಲ. ಅಲ್ಪಸಂಖ್ಯಾತರಿಗೆ 10 ಸಾವಿರ
ಕೋಟಿ ರೂ. ಕೊಡುತ್ತೇವೆ ಎಂದಿದ್ದರು. ಕೊಟ್ಟರಾ? ಕೆ.ಜಿ.ಹಳ್ಳಿ-ಡಿ.ಜಿ.ಹಳ್ಳಿ ಪ್ರಕರಣ, ಹುಬ್ಬಳ್ಳಿ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ಕೊಡಿ. ಕೆ.ಜಿ.ಹಳ್ಳಿಯಲ್ಲಿ ಆಗಿದ್ದು ಕಮ್ಯೂನಲ್ ಗಲಾಟೆ ಅಲ್ಲ. ಡ್ರಗ್ಸ್ ಗಲಾಟೆ ಎಂದು ನೀವೇ ಹೇಳಿದ್ದೀರಿ. ನ್ಯಾಯಾಂಗ ತನಿಖೆಗೆ ಕೊಡಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.
ಕೋಟ್:
ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬಂದಿದ್ದಕ್ಕೆ ನನಗೇನು ಬೇಸರವಿಲ್ಲ, ಪಶ್ಚಾತ್ತಾಪವೂ ಇಲ್ಲ. ಮತ್ತೆ ಕಾಂಗ್ರೆಸ್‌ಗೆ ನಾನು ಹೋಗುವುದಿಲ್ಲ. ನನಗೆ ಸ್ಥಾನ ದೊಡ್ಡದಲ್ಲ ಮಾನ ದೊಡ್ಡದು. ಮಾನ ಇಲ್ಲದ ಅಧಿಕಾರ, ಗೌರವ ಇಲ್ಲದ ಸ್ಥಾನ ಬೇಕಾಗಿಲ್ಲ. ಒಂದು ಸಿದ್ದಾಂತದ ಮೇಲೆ ನಾನು ರಾಜೀನಾಮೆ ಕೊಟ್ಟೆ. ಆ ಬಗ್ಗೆ ನನಗೆ ಕಿಂಚಿತ್ತೂ ಪಶ್ಚಾತ್ತಾಪ ಇಲ್ಲ.
-ಸಿ.ಎಂ. ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ.