

Israel: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಗಾಜಾ ನಗರದ ಮೇಲೆ ಹಿಡಿತ ಸಾಧಿಸಲು ಮಂಡಿಸಿದ ಪ್ರಸ್ತಾವನೆಯನ್ನು ಇದೀಗ ಇಸ್ರೇಲ್ ಭದ್ರತಾ ಸಚಿವ ಸಂಪುಟ ಅನುಮೋದಿಸಿದೆ. ಈ ಯೋಜನೆ ಅಡಿಯಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಗಾಜಾ ಮೇಲೆ ಹಿಡಿತ ಸಾಧಿಸಲು ಸಿದ್ಧತೆ ನಡೆಸುತ್ತಿವೆ.
ಆರಂಭದಲ್ಲಿ, ಕೆಲವು ಕ್ಯಾಬಿನೆಟ್ ಸಚಿವರು ಈ ಯೋಜನೆಯ ಬಗ್ಗೆ ಅನುಮಾನ ಹಾಗೂ ಗೊಂದಲ ವ್ಯಕ್ತಪಡಿಸಿದ್ದರು. ಇದು ಹಮಾಸ್ ಅನ್ನು ಸೋಲಿಸುವಲ್ಲಿ ವಿಫಲವಾಗುತ್ತದೆ ಮತ್ತು ಒತ್ತೆಯಾಳುಗಳನ್ನು ಹಿಂದಿರುಗಿಸುವಲ್ಲಿಯೂ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದಾಗ್ಯೂ, ಗುರುವಾರ (ಆ.07) ನೆತನ್ಯಾಹು ಮಾತನಾಡಿ, "ನಾವು ಗಾಜಾವನ್ನು ಶಾಶ್ವತವಾಗಿ ಆಕ್ರಮಿಸಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ" ಎಂದು ಸ್ಪಷ್ಟಪಡಿಸಿದರು.
ಹಮಾಸ್ ಅನ್ನು ನಿರ್ಮೂಲನೆ ಮಾಡುವುದು ಮತ್ತು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವುದು ತಮ್ಮ ಮುಖ್ಯ ಗುರಿಯಾಗಿದೆ" ಎಂದಿರುವ ಇಸ್ರೇಲ್ ಪ್ರಧಾನಿ, ಯುದ್ಧದ ಬಳಿಕ ಇಸ್ರೇಲ್ ಗಾಜಾದ ಭದ್ರತೆಯ ಮೇಲೆ ಹಿಡಿತ ಸಾಧಿಸಲು ಬಯಸುತ್ತದೆ ಎಂಬುದನ್ನು ಒತ್ತಿ ಹೇಳಿದರು. "ನಾವು ಗಾಜಾವನ್ನು ಆಕ್ರಮಿಸಿಕೊಳ್ಳಲು ನೋಡುತ್ತಿಲ್ಲ. ಆಡಳಿತಕ್ಕೆ ತೆಗೆದುಕೊಳ್ಳುವ ಯೋಚನೆಯಲ್ಲಿಯೂ ಇಲ್ಲ, ಭದ್ರತಾ ವಲಯವನ್ನು ನಿರ್ವಹಿಸಲು ಎದುರು ನೋಡುತ್ತಿದ್ದೇವೆ" ಎಂದು ಪುನರುಚ್ಚರಿಸಿದರು.
ಇಸ್ರೇಲ್ ಗಾಜಾಗೆ ಕಳುಹಿಸಿದ ಮಾನವೀಯ ನೆರವಿನ ಬಗ್ಗೆ ಪ್ರಸ್ತಾಪಿಸಿದ ನೆತನ್ಯಾಹು. "ನಾವು ಗಾಜಾಗೆ ಎರಡು ಮಿಲಿಯನ್ ಟನ್‌ಗಳಿಗೂ ಹೆಚ್ಚು ಆಹಾರವನ್ನು ಪೂರೈಕೆ ಮಾಡಿದ್ದೇವೆ. ಆದರೆ, ಆ ಸರಬರಾಜುಗಳನ್ನು ಈಗ ನಿರ್ಬಂಧಿಸಲಾಗಿದೆ. ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ತನ್ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಯುದ್ಧವು ತಕ್ಷಣವೇ ಅಂತ್ಯಗೊಳ್ಳುತ್ತದೆ" ಎಂದಿದ್ದಾರೆ,(ಏಜೆನ್ಸೀಸ್).