ಬಿಜೆಪಿಗೆ ಇಸ್ರೇಲಿ ಸಂಸ್ಥೆಗಳ ನೆರವು? ಚುನಾವಣೆಯಲ್ಲಿ ಹಸ್ತಕ್ಷೇಪ!

964564
Published on

ನವದೆಹಲಿ: ಭಾರತ ಚುನಾವಣಾ ಪ್ರಕ್ರಿಯೆಯಲ್ಲಿ ಇಸ್ರೇಲ್​ನ ಗುತ್ತಿಗೆ ತಂಡದ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಯಬೇಕು. ಈ ವಿಷಯದಲ್ಲಿ ಸರ್ಕಾರ ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಗುರುವಾರ ಒತ್ತಾಯಿಸಿದೆ. ಇಸ್ರೇಲ್​ನ ‘ಟೀಮ್ ಜಾರ್ಜ್’ಗೆ ಮತದಾರರ ವಿವರ ನೀಡಲಾಗಿದೆ ಮತ್ತು ಈ ತಂಡ ಹಾಗೂ ಬಿಜೆಪಿಯ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗಗಳು ಸುಳ್ಳುಸುದ್ದಿ ಮತ್ತು ತಪು್ಪ ಮಾಹಿತಿಯನ್ನು ಪಸರಿಸಿ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಕಾರ್ಯ ಮಾಡುತ್ತಿವೆ ಎಂದು ಕಾಂಗ್ರೆಸ್ ವಕ್ತಾರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನತೆ ಆರೋಪಿಸಿದ್ದಾರೆ.

ಟೀಮ್ ಜಾರ್ಜ್ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ 30 ಚುನಾವಣೆಗಳಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಸಾಫ್ಟ್​ವೇರ್ ಆಧಾರಿತವಾಗಿ ನಡೆಸುತ್ತಿದೆ. ಬಿಜೆಪಿ ಐಟಿ ವಿಭಾಗಕ್ಕೂ ಟೀಮ್ ಜಾರ್ಜ್​ಗೂ ಏನು ಸಂಬಂಧ ಎಂಬುದರ ಬಗ್ಗೆ ಸರ್ಕಾರ ಮೌನ ಮುರಿಯಬೇಕು. ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಮೂಗುತೂರಿಸುತ್ತದೆ ಎಂದರೆ ಗಂಭೀರ ವಿಷಯ. ಇದನ್ನು ತನಿಖೆಗೆ ಒಳಪಡಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಸರ್ಕಾರ ತನಿಖೆ ನಡೆಸುವುದಿಲ್ಲ ಎಂದರೆ, ಟೀಮ್ ಜಾರ್ಜ್ ಜತೆಗೆ ಅದು ಶಾಮೀಲಾಗಿದೆ ಎಂದೇ ಅರ್ಥ. ದೇಶದ ಚುನಾವಣೆ ಮತ್ತು ಪ್ರಜಾಪಭುತ್ವದ ವಿಷಯದಲ್ಲಿ ಅನ್ಯದೇಶದ ಸಂಸ್ಥೆಯೊಂದಿಗೆ ಸರ್ಕಾರ ರಾಜಿ ಮಾಡಿಕೊಂಡಿದೆ ಎಂದೇ ತಿಳಿಯಬೇಕಾಗುತ್ತದೆ ಎಂದಿದ್ದಾರೆ. ಕರ್ನಾಟಕದಲ್ಲಿ ಮತದಾರರ ಡೇಟಾವನ್ನು ಖಾಸಗಿ ಸಂಸ್ಥೆಯೊಂದು ನಿರ್ವಹಣೆ ಮಾಡುತ್ತಿದ್ದ ವಿಷಯ ಇತ್ತೀಚೆಗೆ ಬಯಲಾಯಿತು. ಕರ್ನಾಟಕದಲ್ಲಿ ಏಪ್ರಿಲ್/ಮೇನಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈ ಸಂಸ್ಥೆ ಲಾಭ ಮಾಡಿಕೊಟ್ಟಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ ವಕ್ತಾರರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net