'ಯೆಮನ್‌' ರಾಜಧಾನಿ ಮೇಲೆ ವೈಮಾನಿಕ ದಾಳಿ ಮಾಡಿದ 'ಇಸ್ರೇಲ್‌'; ಇಬ್ಬರು ಸಾವು| airstrikes

Israel
Published on

ಯೆಮನ್ : ಹೌತಿ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದಲ್ಲಿ ಇಂದು (ಆ.24) ಇಸ್ರೇಲಿ ಯುದ್ಧ ವಿಮಾನಗಳು ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ದಾಳಿಗಳು ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೌತಿಗಳ ನಡುವಿನ ಹಗೆತನದಲ್ಲಿ ತೀವ್ರ ಏರಿಕೆಯನ್ನು ಸೂಚಿಸುತ್ತವೆ.

ಇನ್ನೂ ಈ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಅಧ್ಯಕ್ಷರ ಭವನವಿರುವ ಮಿಲಿಟರಿ ಕಾಂಪೌಂಡ್, ಎರಡು ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಸಂಗ್ರಹಣಾ ಸ್ಥಳವು ಗುರಿಗಳಲ್ಲಿ ಸೇರಿವೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. ಹೌತಿ ನಿಯಂತ್ರಿತ ಸಬಾ ಸುದ್ದಿ ಸಂಸ್ಥೆ ಪ್ರಕಾರ, ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಪ್ರದೇಶದ ಕಡೆಗೆ ಮೇಲ್ಮೈಯಿಂದ ಕ್ಷಿಪಣಿಗಳು ಮತ್ತು ಯುಎವಿಗಳನ್ನು ಉಡಾಯಿಸುವುದು ಸೇರಿದಂತೆ, ಇಸ್ರೇಲ್ ಹೌತಿ ಭಯೋತ್ಪಾದಕ ಆಡಳಿತವು ಪದೇ ಪದೇ ನಡೆಸುತ್ತಿರುವ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಹೌತಿಗಳ ವಿರುದ್ಧ ಗುಡುಗಿದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹೌತಿ ಉಗ್ರರನ್ನು ಸೆದೆಬಡಿಯಲು ಸರಣಿ ದಾಳಿ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಹೌತಿ ದಾಳಿಗೆ ಇಸ್ರೇಲ್‌ನ ಪ್ರತಿಕಾರ ತೀರಿಸಿಕೊಳ್ಳುತ್ತದೆ ಎಂದು ನೆತನ್ಯಾಹು ಹೇಳಿದ್ದರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net