

Benjamin Netanyahu: ಕತಾರ್‌ನ ದೋಹಾದಲ್ಲಿ ಹಮಾಸ್ ನಾಯಕರ ಮೇಲೆ ನಡೆಸಿದ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಇಸ್ರೇಲ್ ವಹಿಸಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ (ಸೆಪ್ಟೆಂಬರ್,15) ಹೇಳಿದ್ದಾರೆ.
ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು, ಇಸ್ರೇಲ್ ಮತ್ತು ಅಮೆರಿಕ ತಮ್ಮ ದೇಶಗಳನ್ನು ರಕ್ಷಿಸಲು ಒಟ್ಟಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ನೆತನ್ಯಾಹು, ರುಬಿಯೊ ಅವರ ಇಸ್ರೇಲ್ ಭೇಟಿಯು ಅಮೆರಿಕವು ಇಸ್ರೇಲ್ ಜತೆ ನಿಂತಿದೆ ಎಂದು ಸಬೀತುಪಡಿಸಿದೆ. ರುಬಿಯೊ ಭೇಟಿಯು ಭಯೋತ್ಪಾದನೆಯ ವಿರುದ್ಧ ಅಮೆರಿಕ ಇಸ್ರೇಲ್ ಜೊತೆ ನಿಂತಿದೆ ಎಂಬುದರ ಸ್ಪಷ್ಟ ಸಂದೇಶವಾಗಿದೆ ಎಂದಿದ್ದಾರೆ. ಕತಾರ್‌ನಲ್ಲಿ ಹಮಾಸ್ ನಾಯಕರ ಮೇಲೆ ಇಸ್ರೇಲ್ ನಡೆಸಿದ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ರೂಬಿಯೊ ಇಸ್ರೇಲ್ಗೆ ಭೇಟಿ ನೀಡಿದ್ದಾರೆ.
ಗಾಜಾದ ಜನರು ಉತ್ತಮ ಭವಿಷ್ಯಕ್ಕೆ ಅರ್ಹರು. ಆದರೆ, ಹಮಾಸ್ ನಿರ್ಮೂಲನೆ ಮಾಡುವವರೆಗೆ ಆ ಉತ್ತಮ ಭವಿಷ್ಯ ಪ್ರಾರಂಭವಾಗುವುದಿಲ್ಲ ಎಂದು ರುಬಿಯೊ ತಿಳಿಸಿದ್ದಾರೆ. ಅಲ್ಲದೆ, ಗಾಜಾದಲ್ಲಿ ಇಸ್ರೇಲ್ ತನ್ನ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಅಮೆರಿಕದ ಅಚಲ ಬೆಂಬಲ ನೀಡುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)