ಗಾಜಾ ಮೇಲಿನ ದಾಳಿಗೆ ತಾತ್ಕಾಲಿಕ ವಿರಾಮ ನೀಡಿದ ಇಸ್ರೇಲ್​!Israel

Gaza
Published on

Israel: ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಹಸಿವಿನಿಂದ ಹೆಚ್ಚುತ್ತಿರುವ ಬಿಕ್ಕಟ್ಟಿನ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಿದ ನಂತರ, ಗಾಜಾದ ಕೆಲವು ಭಾಗಗಳಲ್ಲಿ ತಾನು ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಇಸ್ರೇಲ್ ಸೇನೆ ಭಾನುವಾರ ಘೋಷಿಸಿದೆ.

ಇಸ್ರೇಲ್​ ಮಾರ್ಚ್​ನಲ್ಲಿ ಗಾಜಾ ಮೇಲೆ ತನ್ನ ಆಕ್ರಮಣವನ್ನು ಪುನರಾರಂಭಿಸಿತ್ತು. ದಾಳಿ ನಡೆಸಿದ ಪ್ರದೇಶಗಳಲ್ಲಿ, ಮುಂದಿನ ಸೂಚನೆ ಬರುವವರೆಗೆ ಅಲ್-ಮವಾಸಿ, ದೇರ್ ಅಲ್-ಬಲಾಹ್ ಮತ್ತು ಗಾಜಾ ನಗರದಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಸೇನಾ ಚಟುವಟಿಕೆಯನ್ನು ನಿಲ್ಲಿಸುವುದಾಗಿ ತಿಳಿಸಿದೆ.

ಅಲ್ಲದೆ, ಆಹಾರ ಮತ್ತು ಔಷಧಿಗಳನ್ನು ತಲುಪಿಸುವ ಬೆಂಗಾವಲು ವಾಹನಗಳಿಗೆ ಗೊತ್ತುಪಡಿಸಿದ ಸುರಕ್ಷಿತ ಮಾರ್ಗಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ಸಂಚಾರಿಸಲು ಅವಕಾಶ ನೀಡಲಾಗಿದೆ ಎಂದು ಸೇನೆ ಹೇಳಿದೆ.

ಗಾಜಾದ ವಾಯು ಮಾರ್ಗದ ಮೂಲಕ ಮಾನವವೀಯ ನೆರವು ಕಾರ್ಯ ಆರಂಭವಾಗಲಿದೆ. ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಮಾನವೀಯ ಕಾರಿಡಾರ್​ಗಳನ್ನು ಸ್ಥಾಪಿಸಲಾಗುವುದು ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

ಗಾಜಾದಲ್ಲಿ ಜನರು ಹಸಿವಿನಿಂದ ಸಾವಿಗೀಡಾಗುತ್ತಿರುವ ಹಿನ್ನೆಲೆ ಇಸ್ರೇಲ್​ನಿಂದ ಈ ಆದೇಶ ಬಂದಿದೆ. ಇತ್ತೀಚೆಗೆ ಗಾಜಾದ ಜನರು ನೆರವು ಪಡೆಯುತ್ತಿರುವಾಗ ಇಸ್ರೇಲ್​ ದಾಳಿಗೆ ತುತ್ತಾಗಿ ನೂರಾರು ಮಂದಿ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದರು. ಈ ಘಟನೆ ಅಂತಾರಾಷ್ಟ್ರೀಯ ವಲಯದಲ್ಲಿ ತೀವ್ರ ಆಕ್ರೋಶ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net