

ನವದೆಹಲಿ: ಕರೊನಾ ವೈರಸ್ ನಿಯಂತ್ರಣಾ ನಿರ್ಬಂಧದ ನಡುವೆಯೂ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಧಾರ್ಮಿಕ ಸಮಾವೇಶ ನಡೆಸಿ, ಸದ್ಯ ನಾಪತ್ತೆಯಾಗಿರುವ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಖಾಂಡಲ್ವಿ ದೆಹಲಿ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದಾರೆ.
ತಬ್ಲಿಘಿ ಜಮಾತ್ನ ಧಾರ್ಮಿಕ ಸಮಾವೇಶದ ಬಳಿಕ ಅದು ಕರೊನಾ ವೈರಸ್ ಹಾಟ್ಸ್ಫಾಟ್ ಆಗಿ ಬದಲಾಗಿದೆ. ಮೌಲಾನಾ ಸಾದ್ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಮಾ.28ರಿಂದಲೂ ಸಾದ್ ಪತ್ತೆಯಿಲ್ಲ. ತಾನು ಕ್ವಾರಂಟೈನ್ನಲ್ಲಿದ್ದೇನೆ. ಅದು ಮುಗಿದ ಬಳಿಕ ತನಿಖೆಗೆ ಹಾಜರಾಗುತ್ತೇನೆ ಎಂದು ಸಾದ್ ತಮ್ಮ ವಕೀಲರ ಮೂಲಕ ಪೊಲೀಸರಿಗೆ ಹೇಳಿದ್ದರು. ಅವರ ಕ್ವಾರಂಟೈನ್ ಅವಧಿ ಏಪ್ರಿಲ್ 13ಕ್ಕೆ ಮುಕ್ತಾಯವಾಗಿದೆ. ಸಾದ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಸಂಬಂಧ ಪ್ರಕರಣವನ್ನೂ ದಾಖಲಿಸಿದೆ.
ಇದೀಗ ಮೌಲಾನಾ ಸಾದ್ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಪತ್ರ ಬರೆದಿದ್ದು, ನೀವು ಏಪ್ರಿಲ್ 1 ಮತ್ತು 2ರಂದು ನೀಡಿದ್ದ ಎರಡೂ ನೋಟಿಸ್ಗಳಿಗೆ ಉತ್ತರ ನೀಡುವ ಮೂಲಕ ತನಿಖೆಗೆ ಸಹಕರಿಸುತ್ತಿದ್ದೇನೆ. ಇನ್ನು ಮುಂದೆ ಕೂಡ ವಿಚಾರಣೆಗೆ ಸಹಕರಿಸಲು ಸಿದ್ಧನಿದ್ದೇನೆ. ತನಿಖೆಗೆ ನಾನು ರೆಡಿ ಎಂದು ಏ.16ರಂದು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)