ಇಸ್ಕಾನ್‌ನಲ್ಲಿ ಮನಸೆಳೆದ ನಂದ ಉತ್ಸವ

krishna
Published on

ಶಿವಮೊಗ್ಗ: ಸಮೀಪದ ಬಿದರೆಯ ಇಸ್ಕಾನ್‌ನಲ್ಲಿ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಕ್ರಮ ಭಾನುವಾರ ನಂದ ಉತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿತು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರಿಂದ ಕೃಷ್ಣನಾಮ ಸ್ಮರಣೆ, ನಿರಂತರ ಭಜನೆ ನಡೆಯಿತು. ಹರಿನಾಮ ಜಪಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಕೃಷ್ಣನ ಸನ್ನಿಧಾನ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಕೃಷ್ಣನ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರವೇಶದ್ವಾರದಲ್ಲೇ ಸ್ವಾಗತ ಕೋರಿ ಅಚ್ಚು ಹಚ್ಚಿದ್ದು ವಿಶೇಷವಾಗಿತ್ತು. ಶ್ರೀಕೃಷ್ಣನಿಗೆ ಸಂಬಂಧಿಸಿದ ವಿಚಾರಗಳು, ಭಕ್ತಿವೇದಾಂತ ಪ್ರಭುಪಾದರ ಸಂದೇಶಗಳನ್ನು ಒಳಗೊಂಡ ಗ್ರಂಥಗಳ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತು. ಭಕ್ತರು ಪುಸ್ತಕ ಭಂಡಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಕೃತಿಗಳ ಖರೀದಿಯಲ್ಲಿ ಮಗ್ನರಾಗಿದ್ದರು.

ಪ್ರತಿ ಭಾನುವಾರಗಳಿಗಿಂತ ಈ ಭಾನುವಾರ ತುಸು ಭಿನ್ನವಾಗಿತ್ತು. ಪ್ರತಿವಾರ ನೂರಾರು ಭಕ್ತರು ಇಲ್ಲಿಗೆ ಆಗಮಿಸಿದರೆ ಈ ಬಾರಿ ಸಾವಿರಾರು ಭಕ್ತರು ಬಂದು ನಂದ ಉತ್ಸವ ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು. ಏಳು ಸಾವಿರ ಮಂದಿ ಭಕ್ತರಿಗೆ ಮಧ್ಯಾಹ್ನದ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ನಂದ ಉತ್ಸವದ ಅಂಗವಾಗಿ ಕೃಷ್ಣ ರಾಧೆಯ ಮೂರ್ತಿಗೆ ಅಭಿಷೇಕ, ಉಯ್ಯಲೆ ಸೇವೆ ನೆರವೇರಿಸಲಾಯಿತು. ವಿಶೇಷವೆಂದರೆ ಸ್ವತಃ ಭಕ್ತರೇ ಅಭಿಷೇಕ ಮಾಡಲು, ಉಯ್ಯಲೆ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಯಿತು. ನೂರಾರು ಮಂದಿ ಅಭಿಷೇಕ ನೆರವೇರಿಸಿ ಧನ್ಯತಾ ಭಾವ ವ್ಯಕ್ತಪಡಿಸಿದರು.

ಕ್ಷೀರ, ಆಜ್ಯ, ಮಧುಪರ್ಕಗಳಿಂದ ಅಭಿಷೇಕ ಮಾಡಲಾಯಿತು. ಬಳಿಕ ಕೃಷ್ಣ, ರಾಧೆಯರಿಗೆ ಶುದ್ಧೋದಕ ಸ್ನಾನ ನೆರವೇರಿಸಲಾಯಿತು. ಸುಮಾರು ಎರಡು ತಾಸು ಅಭಿಷೇಕ ನಡೆಯಿತು. ಭಕ್ತರು ಸಂಪೂರ್ಣವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಭಾಗವಹಿಸಿದ್ದು ವಿಶೇಷವಾಗಿತ್ತು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:

ನಂದ ಉತ್ಸವದ ಅಂಗವಾಗಿ ಅಭಿಷೇಕದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದಕ್ಷಿಣ ಮಾಯಾಪುರ್ ಧಾಮ್‌ನ ಭಕ್ತರು, ಸ್ವಯಂ ಸೇವಕರು, ವಿವಿಧ ನಾಟ್ಯ ಶಾಲೆಗಳ ಕಲಾವಿದರು ಕೃಷ್ಣ ಹಿರಿಮೆ ಸಾರುವ ನೃತ್ಯ ರೂಪಕಗಳನ್ನು ಪ್ರದರ್ಶಿಸಿ ಗಮನಸೆಳೆದರು.

ಗೌರಿ ನಾಟ್ಯ ಶಾಲೆಯ ಮಕ್ಕಳು ಸಾಮೂಹಿಕ ನೃತ್ಯ ಪ್ರದರ್ಶಿಸಿದರು. ಕೃಷ್ಣ ಮಂದಿರದ ಭಕ್ತರಾದ ಪ್ರಿಯಾಂಕ ಹಾಗೂ ತೇಜಸ್ವಿನಿ ನೃತ್ಯದ ಮೂಲಕವೇ ಮಧುರಾಷ್ಟಕಂ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net