

ನವದೆಹಲಿ: ಐಸಿಸ್ ಸಂಘಟನೆಯ ಇಬ್ಬರು ಪ್ರಮುಖ ಉಗ್ರರು ನೇಪಾಳ ಮಾರ್ಗವಾಗಿ ಭಾರತ ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಉಗ್ರರು ಉತ್ತರಪ್ರದೇಶದಲ್ಲಿ ಅಡಗಿಕೊಂಡಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಬಸ್ತಿ, ಗೋರಖ್ಪುರ, ಸಿದ್ಧಾರ್ಥನಗರ, ಕುಶ್ನಗರ, ಮಹಾರಾಜಗಂಜ್ ಸೇರಿ ಭಾರತ-ನೇಪಾಳ ಗಡಿಯಲ್ಲಿನ ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಐಸಿಸ್ನ ಇಬ್ಬರು ಉಗ್ರರನ್ನು ಮೊಯಿನುದ್ದೀನ್ ಮತ್ತು ಅಬ್ದುಲ್ ಸಮದ್ ಎಂದು ಗುರುತಿಸಲಾಗಿದ್ದು, ಇವರನ್ನು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕೊನೆಯ ಬಾರಿ ನೋಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಇಬ್ಬರು ಉಗ್ರರ ಫೋಟೋಗಳನ್ನು ಬಿಡುಗಡೆಗೊಳಿಸಿದ್ದು, ಇವರಿಗಾಗಿ ಉತ್ತರ ಭಾರತದಾದ್ಯಂತ ತೀವ್ರ ಶೋಧ ನಡೆಸುತ್ತಿದ್ದಾರೆ.
ಮೊಯಿನುದ್ದೀನ್ನನ್ನು ಈ ಹಿಂದೆ 2017ರ ಸೆಪ್ಟೆಂಬರ್ನಲ್ಲಿ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಬಂಧಿಸಿತ್ತು. ಈತ ದಕ್ಷಿಣ ಭಾರತದಲ್ಲಿ ಹೆಚ್ಚು ಕಾರ್ಯ ಪ್ರವೃತ್ತನಾಗಿದ್ದ. ಸಿರಿಯಾದಿಂದ ಭಾರತಕ್ಕೆ ಮರಳಿದ ಬಳಿಕ ಈತ ದಕ್ಷಿಣ ಭಾರತದ ರಾಜ್ಯಗಳ ಯುವಕರನ್ನು ಭಯೋತ್ಪಾದಕ ಕೃತ್ಯಗಳಿಗೆ ಪ್ರೇರೆಪಿಸಿ, ಉಗ್ರ ಸಂಘಟನೆಗಳಿಗೆ ಸೇರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೋರ್ವ ಉಗ್ರ ಅಬ್ದುಲ್ ಸಮದ್ನನ್ನು 2018ರಲ್ಲಿ ಪ್ರಕರಣವೊಂದರ ಸಂಬಂಧ ಬಂಧಿಸಲಾಗಿತ್ತು. ಪುಣೆ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ ಲಷ್ಕರ್ ಸಂಘಟನೆಯ ಉಗ್ರನೊಬ್ಬನಿಗೆ ಹವಾಲಾ ಮೂಲಕ ಹಣ ನೀಡಿದ್ದ ಆರೋಪ ಹೊತ್ತಿದ್ದಾನೆ. ಸಿಮಿ ಸಂಘಟನೆ ಜತೆಗೂ ನಂಟು ಹೊಂದಿರುವ ಅಬ್ದುಲ್, ಉಗ್ರ ಚಟುವಟಿಕೆಗಳಿಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ನೇಪಾಳ ಮಾರ್ಗವಾಗಿ ಐವರು ಉಗ್ರರು ಉತ್ತರಪ್ರದೇಶಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅವರು ಹಿಂದುಗಳ ರೀತಿ ವೇಶ ಮರೆಸಿಕೊಂಡು ಅಡಗಿರುವ ಶಂಕೆ ಇದೆ.