ಇಷ್ಟಲಿಂಗ ಪೂಜಾನುಷ್ಠಾನ ಮಂಗಲ ಸಮಾರಂಭ 14ಕ್ಕೆ

13bhr 1
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭದಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಇಷ್ಟಲಿಂಗ ಪೂಜೆ ನಡೆಸಿದರು.
Published on

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಶ್ರಾವಣ ಧರ್ಮ ಸಮಾರಂಭ ಹಾಗೂ 32ನೇ ವರ್ಷದ ಇಷ್ಟಲಿಂಗ ಪೂಜಾ ತಪೋನುಷ್ಠಾನದ ಮಂಗಲ ಸಮಾರಂಭ ಸೆ.14ರ ಶ್ರಾವಣ ಬಹುಳ ಅಮಾವಾಸ್ಯೆಯ ಪರ್ವಕಾಲದಲ್ಲಿ ನಡೆಯಲಿದ್ದು, ಶ್ರಾವಣ ಮಾಸಕ್ಕೆ ಈ ಮೂಲಕ ವಿದ್ಯುಕ್ತ ತೆರೆ ಬೀಳಲಿದೆ.
ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಒಂದು ತಿಂಗಳು ಪೀಠದಲ್ಲೇ ವಾಸ್ತವ್ಯ ಹೂಡಿ ಲೋಕಕಲ್ಯಾಣಾರ್ಥ ಹಾಗೂ ಭಕ್ತರ ಒಳಿತಿಗಾಗಿ ಪ್ರತಿನಿತ್ಯ ಮುಂಜಾನೆ ಇಷ್ಟಲಿಂಗ ಪೂಜಾ ತಪೋನುಷ್ಠಾನ ನಡೆಸಿ ಭಕ್ತರಿಗೆ ದರ್ಶನ, ಆಶೀರ್ವಾದ ನೀಡುತ್ತಿದ್ದರು. ಪ್ರತಿನಿತ್ಯ ಸಂಜೆ ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳಿಂದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ, ಅತಿಥಿಗಳಿಂದ ನುಡಿಸೇವೆ, ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸೋಮವಾರ, ಗುರುವಾರ ರಂಭಾಪುರಿ ಜಗದ್ಗುರುಗಳು ಧರ್ಮ ಸಂದೇಶ ಅನುಗ್ರಹಿಸುತ್ತಿದ್ದರು.
ಶ್ರಾವಣದ ಕೊನೆ ದಿನವಾದ ಗುರುವಾರ ಬೆಳಗ್ಗೆ ಪ್ರಸಕ್ತ ಸಾಲಿನ ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನುಷ್ಠಾನ ಮಂಗಲ ಸಮಾರಂಭ ನಡೆಯಲಿದೆ. ಸಂಜೆ ಧರ್ಮಸಭೆ ಹಾಗೂ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದ ಮಂಗಲ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net