

ಬಾಳೆಹೊನ್ನೂರು: ಇಂದಿನ ಯುವಜನರು, ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವಿನ ಕೊರತೆ ಇದೆ. ಈ ಕಾರಣಕ್ಕೆ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತೆರೆದ ಮನೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವಿನ ಕೊರತೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ರಾಜ್ಯಾದ್ಯಂತ ಏಕಕಾಲಕ್ಕೆ ತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತೆರೆದ ಮನೆಯಲ್ಲಿ ಪೊಲೀಸರ ಕರ್ತವ್ಯ, ಜವಾಬ್ದಾರಿಗಳು, ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಭ್ರೂಣಾವಸ್ಥೆಯಲ್ಲಿರುವ ಮಗುವಿನಿಂದ ಹಿಡಿದು ವಯಸ್ಕರವರೆಗೆ ಕಾನೂನಿನಲ್ಲಿ ರಕ್ಷಣೆಯಿದೆ. ಜನಸಾಮಾನ್ಯರ ಹಿತ ಕಾಪಾಡುವುದು ಪೊಲೀಸ್ ಕರ್ತವ್ಯ. ತಪ್ಪು ಮಾಡಿದವರನ್ನು ಕಾನೂನಿನ ಚೌಕಟ್ಟಿನಲ್ಲಿ ತರುವುದು ಪೊಲೀಸರ ಕೆಲಸ. ಈ ನಿಟ್ಟಿನಲ್ಲಿ ಜನಸ್ನೇಹಿಯಾಗಿ ಪೊಲೀಸರು ಕರ್ತವ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದು ವಿದ್ಯಾರ್ಥಿಗಳು ಸಣ್ಣ ಕಾರಣಕ್ಕೂ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಕೇವಲ ಅಂಕ ಗಳಿಕೆಯೊಂದೇ ವಿದ್ಯಾರ್ಥಿಗಳ ಗುರಿಯಾಗಬಾರದು. ಸರ್ಕಾರವು ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದೆ. ಕ್ರೀಡೆ, ಸಂಗೀತ, ಸಿನಿಮಾ, ಕೃಷಿ ಸೇರಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಬಹುದು. ಜೀವನದ ಕುರಿತು ಭಯ ಹೊಂದದೆ ಪಾಲಕರು, ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಅನಿಲ್‌ಕುಮಾರ್ ಮಾತನಾಡಿ, ಹಿರಿಯ ಅಧಿಕಾರಿಗಳ ಆದೇಶದಂತೆ ಜಿಲ್ಲೆಯ ಎಲ್ಲ ಠಾಣೆಗಳಲ್ಲೂ ಏಕಕಾಲಕಕ್ಕೆ ತೆರೆದ ಮನೆ ಕಾರ್ಯಕ್ರಮ ಮಾಡಲಾಗುತ್ತಿದೆ. ಇನ್ನುಮುಂದೆ ಪ್ರತಿ ಗುರುವಾರ ಈ ಕಾರ್ಯಕ್ರಮ ನಡೆಸಿ ಪ್ರತ್ಯೇಕವಾಗಿ ಶಾಲಾ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಯಿಸಿ ಕಾನೂನು ಮಾಹಿತಿ ನೀಡಲಾಗುವುದು. ಮಕ್ಕಳ, ಮಹಿಳಾ ಸುರಕ್ಷತೆ, ಹಕ್ಕುಗಳ ಮಾಹಿತಿ, ಉಚಿತ ಶಿಕ್ಷಣ ಕಾಯ್ದೆ, ಬಾಲ್ಯವಿವಾಹ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸೈಬರ್ ಕ್ರೈಂಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಸುವಾಗ ಎಚ್ಚರ ವಹಿಸಬೇಕು. ಅಪರಿಚಿತ ಸಂಖ್ಯೆಗಳಿಂದ ಒಟಿಪಿ ಕೇಳಲು, ವಿಡಿಯೋ ಕರೆಗಳು ಬಂದಾಗ ಸ್ಪಂದಿಸಬಾರದು. ತಮ್ಮ ಫೋಟೋಗಳನ್ನು ಅಪರಿಚಿತರಿಗೆ ಶೇರ್ ಮಾಡಿಕೊಳ್ಳಬಾರದು. 18 ವರ್ಷದೊಳಗಿನವರು ವಾಹನ ಚಲಾಯಿಸುವುದು ಕಾನೂನು ಬಾಹಿರ. ನಿಯಮ ಉಲ್ಲಂಘಿಸಿದರೆ 25 ಸಾವಿರ ರೂ. ದಂಡ ವಿಧಿಸಬಹುದು. ತುರ್ತು ಸಂದರ್ಭದಲ್ಲಿ 112, ಸಮಸ್ಯೆಗಳು ಎದುರಾದಾಗ 1098 ಶುಲ್ಕರಹಿತ ಸಂಖ್ಯೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಸದಸ್ಯರಾದ ರವಿಚಂದ್ರ, ಮಹಮ್ಮದ್ ಜುಹೇಬ್, ಶಶಿಕಲಾ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಪ್ರಮುಖರಾದ ಹೇಮಲತಾ, ನವೀನ್ ಕರುವಾನೆ, ಪೊಲೀಸ್ ಸಿಬ್ಬಂದಿ ಕಲ್ಲೇಶ್, ಉಮಾದೇವಿ ಇತರರಿದ್ದರು.