

ಕಿಶನ್ಗಂಜ್: ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದ್ದು, ನ. 11ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನೂ ಬಿಜೆಪಿ ಒಳನುಸುಳುವಿಕೆಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi), ಬಿಹಾರದಲ್ಲೇನು ಚಿನ್ನದ ದಂಧೆ ನಡೆಯುತ್ತದೆಯೇ ವಲಸೆ ಬರೋಕೆ ಎಂದು ಶನಿವಾರ(ನ. 08) ಟಕ್ಕರ್ ನೀಡಿದ್ದಾರೆ.
ಈ ಕುರಿತು ಎನ್ಡಿಟಿವಿ ಸಂಪಾದಕರೊಂದಿಗೆ ಮಾತನಾಡಿರುವ ಅವರು, ಬಿಹಾರದಲ್ಲಿ ಎನ್ಡಿಎ ಕೂಟ ಮುಸ್ಲಿಮರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಮತ್ತು ಅವರನ್ನು ಕೆಣಕುತ್ತಿದೆ. ಬಿಹಾರದಲ್ಲೇನು ಚಿನ್ನದ ದಂಧೆ ನಡೆಯುತ್ತಿದೆಯೇ ಒಳನುಸುಳಿ ಬರೋಕೆ?, ತೈಲ ನಿಕ್ಷೇಪಗಳು ಪತ್ತೆಯಾದರೆ ಜನರು ರಾಜ್ಯಕ್ಕೆ ವಲಸೆ ಬರುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ.
ಇಲ್ಲಿನ ಯುವಕರು ದೇಶಾದ್ಯಂತ ವಲಸೆ ಹೋಗುತ್ತಾರೆ. ಅವರನ್ನು ತಡೆಯುವ ಬದಲು, ಒಳನುಸುಳುವವರು ಎಂದು ಕರೆಯುವ ಮೂಲಕ ಅವರಿಗೆ ಕೆಟ್ಟ ಹೆಸರು ತರುತ್ತೀರಿ. ಸೀಮಾಂಚಲ್‌ನಲ್ಲಿರುವ ಮುಸ್ಲಿಮರು ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶಕ್ಕೆ ಹೋಗಲಿಲ್ಲ. ಭಾರತವನ್ನು ತಮ್ಮ ದೇಶವಾಗಿ ಆಯ್ಕೆ ಮಾಡಿಕೊಂಡರು ಎಂದು ಹೇಳಿದ್ದಾರೆ.
ಒಳನುಸುಳುಕೋರರು ಇದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಸಿಎಂ ನಿತೀಶ್ ಕುಮಾರ್ ಅವರನ್ನು ಅದಕ್ಕೆ ದೂಷಿಸಬೇಕು. ಒಳನುಸುಳುವಿಕೆ ತಡಯಲು ಅವರು ವಿಫಲರಾಗಿದ್ದಾರೆ ಅಂತ ಅರ್ಥ. ನಿಮ್ಮ ಬಳಿ ಬಿಎಸ್ಎಫ್ ಮತ್ತು ಸೀಮಾ ಸುರಕ್ಷಾ ಬಲವಿದೆ. ಆದರೆ ರಾಜ್ಯ ಸರ್ಕಾರಗಳನ್ನು ಟೀಕಿಸುತ್ತೀರಿ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್)