

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದಲ್ಲಿ ವಿಲೀನವಾಗಲಿದೆಯೇ? ಈ ನಿಟ್ಟಿನಲ್ಲಿ ಸದ್ದಿಲ್ಲದೆ ತಯಾರಿಗಳು ನಡೆದಿರುವುದಂತೂ ಹೌದು. 2024ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ‘ಪಿಒಕೆ ಭಾರತದ ಅವಿಭಾಜ್ಯ ಅಂಗ. ಅದನ್ನು ಭಾರತದಲ್ಲಿ ವಿಲೀನ ಮಾಡಲಾಗುವುದು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಪಾಕಿಸ್ತಾನ ಮತ್ತು ಚೀನಾವನ್ನು ರಾಜತಾಂತ್ರಿಕವಾಗಿ ಎದುರಿಸಿಯೇ ಇದನ್ನು ಸಾಧ್ಯವಾಗಿಸಬೇಕಿದೆ ಎನ್ನುವುದು ವಾಸ್ತವ.
ಅಲ್ಲಿ ಮನುಷ್ಯ ಬದುಕಲು ಬೇಕಾದ ಯಾವ ಕನಿಷ್ಠ ಸೌಲಭ್ಯಗಳೂ ಇಲ್ಲ! ತಾಂಡವವಾಡುತ್ತಿರುವುದು ಬಡತನ, ನಿರಕ್ಷರತೆ, ಹಸಿವು ಮತ್ತು ಅಜ್ಞಾನ! ಇದಕ್ಕೆ ‘ಪರಿಹಾರ’ವಾಗಿ ಇವರ ಕೈಗೆ ಬಂದುಕುಗಳನ್ನು ನೀಡಲಾಯಿತು, ಹಸಿದ ಹೊಟ್ಟೆಗೆ ‘ಜನ್ನತ್’ಗೆ ಸೇರುವ ಕನಸು ತೋರಲಾಯಿತು. ಅಕ್ಷರ ಲೋಕ ಪ್ರವೇಶಿಸಬೇಕಿದ್ದ ಮುಗ್ಧ ಮಕ್ಕಳನ್ನು ಶಾಲೆಯ ಬದಲು ಭಯೋತ್ಪಾದಕ ತರಬೇತಿ ಕೇಂದ್ರಗಳಿಗೆ ಅಟ್ಟಲಾಯಿತು. ಮೀಸೆ ಚಿಗುರುವ ಮುನ್ನವೇ ಆ ಮಕ್ಕಳು ಮತ್ತೊಬ್ಬರ ರಕ್ತಹೀರುವ ಭಯೋತ್ಪಾದಕರಾಗತೊಡಗಿದರು. ಬಡತನದ ಕಾರಣ ಆತ್ಮಹತ್ಯಾ ಬಾಂಬರ್ಗಳೂ ಆಗಿ ತಾವು ಸತ್ತು ಕುಟುಂಬ ನೆಮ್ಮದಿಯಾಗಿರಲಿ ಎಂದು ಬಯಸಿದರು! ಹಾಗೇ, ಭಾರತದ ಗಡಿಗೆ ನುಸುಳಿದಾಗ ‘ನಾವಿರುವ ಪ್ರದೇಶ ಯಾಕೆ ಹೀಗಿಲ್ಲ’ ಎಂದು ಪ್ರಶ್ನಿಸಿಕೊಳ್ಳ ತೊಡಗಿದರು.
ಹೊರಪ್ರಪಂಚದಲ್ಲಿ ಸಿಗುವ ಶಿಕ್ಷಣ, ಉದ್ಯೋಗ, ಸಂಬಳ, ಸವಲತ್ತು- ಇದ್ಯಾವುದೂ ತಮಗೆ ದಕ್ಕುತ್ತಿಲ್ಲ ಎಂಬ ಸಂಗತಿ ನವ ಪೀಳಿಗೆಗೆ ಗೊತ್ತಾಗತೊಡಗಿತು. ‘ಜಿಹಾದ್’ ಹೆಸರಲ್ಲಿ ಸಾಯಬಾರದು, ಬದುಕಿದ್ದು ಏನಾದರೂ ಮಾಡಬೇಕು ಎಂಬ ಕನಸುಗಳೂ ಚಿಗುರತೊಡಗಿದವು. ಪರಿಣಾಮ, ತಾವಿರುವ ದಯನೀಯ ಸ್ಥಿತಿಯಿಂದ ರೋಸಿಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾದಾಗ ದಬ್ಬಾಳಿಕೆ ವಿರುದ್ಧ ದನಿ ಕೇಳಲು ಆರಂಭಿಸಿತು. ಈ ದನಿ ಇದೀಗ ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ! ಬಂಡಾಯದ ಕಿಡಿ ವ್ಯಾಪಕವಾಗಿ ಹರಡುತ್ತಿದೆ. ಇದು ಪಿಒಕೆ ಎಂದು ಕರೆಯಲ್ಪಡುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಕೀಕತ್.
ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕೆಲ ಪ್ರದೇಶವೇ ಪಿಒಕೆ. ಇದರ ಭೌಗೋಳಿಕ ವಿಸ್ತೀರ್ಣ 13 ಸಾವಿರ ಚದರ ಕಿಲೋಮೀಟರ್. ಇಲ್ಲಿ 40 ಲಕ್ಷ ಜನರು ವಾಸಿಸುತ್ತಿದ್ದಾರೆ. ಮುಜಫರಾಬಾದ್ ಇವರ ರಾಜಧಾನಿ. ಪಿಒಕೆಯ ಗಡಿಯು ಪಶ್ಚಿಮದಲ್ಲಿ ಪಾಕಿಸ್ತಾನದ ಪಂಜಾಬ್ ಹಾಗೂ ಖೈಬರ್ ಪಖ್ತುನ್ಖ್ವಾಲಾ, ಉತ್ತರದಲ್ಲಿ ಚೀನಾದ ಜಿಂಜ್ಜಿಯಾಂಗ್ ಸ್ವಾಯತ್ತ ಪ್ರಾಂತ್ಯ, ಪೂರ್ವದಲ್ಲಿ ಜಮ್ಮು-ಕಾಶ್ಮೀರದೊಂದಿಗೆ ತಾಗಿಕೊಂಡಿದೆ. ಪಾಕ್ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಅಕ್ಸಾಯ್ ಚಿನ್ ಶಾಮೀಲಾಗಿಲ್ಲ. ಅಕ್ಸಾಯ್ ಚಿನ್ ರಾಜಾ ಹರಿ ಸಿಂಗ್ ಕಾಲದಿಂದಲೂ ಕಾಶ್ಮೀರದ ಭಾಗವಾಗಿತ್ತು. 1962ರ ಭಾರತ-ಚೀನಾ ಯುದ್ಧದ ಬಳಿಕ ಅಕ್ಸಾಯ್ ಚಿನ್ ಅನ್ನು ಚೀನಾ ತನ್ನ ವಶದಲ್ಲಿ ಇರಿಸಿಕೊಂಡಿದೆ. 2005ರಲ್ಲಿ ಸಂಭವಿಸಿದ ಭೀಕರ ಭೂಕಂಪದ ಪರಿಣಾಮ ಪಿಒಕೆಯ ಕೆಲ ಭಾಗ ಅಸ್ತಿತ್ವವನ್ನೇ ಕಳೆದುಕೊಂಡಿತ್ತು.
ಪಿಒಕೆ ಉಗ್ರರ ಬಹುದೊಡ್ಡ ಅಡಗುತಾಣವಾಗಿದೆ ಎಂಬ ಸಂಗತಿ ರಹಸ್ಯವೇನಲ್ಲ. ಪಾಕಿಸ್ತಾನ 1988ರಿಂದಲೂ ಈ ಪ್ರದೇಶವನ್ನು ಭಯೋತ್ಪಾದನೆಯ ರಫ್ತಿಗಾಗಿ ಬಳಸುತ್ತಿದೆ. ಪಾಕ್ನಿಂದ ಇಲ್ಲಿ ಬಂದು ತರಬೇತಿ ಪಡೆಯುವ ಭಯೋತ್ಪಾದಕರು ಕಾಶ್ಮೀರ ಗಡಿ ಮೂಲಕ ಭಾರತದೊಳಕ್ಕೆ ನುಸುಳುತ್ತಾರೆ. ಕೇಂದ್ರ ಸರ್ಕಾರ ಹೇಳುವಂತೆ, ಪಿಒಕೆಯಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುತಾಣಗಳಿದ್ದು ಲಷ್ಕರ್-ಇ-ತೊಯ್ಬಾ, ಇಂಡಿಯನ್ ಮುಜಾಹಿದಿನ್, ಜೈಷ್-ಎ-ಮೊಹಮ್ಮದ್ ಸಂಘಟನೆಗಳು ಇಲ್ಲಿ ಸಕ್ರಿಯವಾಗಿವೆ. ಪ್ರಸಕ್ತ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಇಲ್ಲಿನ ಜನರು ತೊಡಗಿಸಿಕೊಳ್ಳಲು ನಿರಾಕರಿಸುತ್ತಿರುವುದು ಪಾಕ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಭಾರತ ಅದರಲ್ಲೂ ಜಮ್ಮು-ಕಾಶ್ಮೀರದಲ್ಲಾಗುತ್ತಿರುವ ಸುಧಾರಣೆಗಳನ್ನು ಕಂಡು ಪಿಒಕೆ ಪ್ರದೇಶದ ನಿವಾಸಿಗಳೂ ನರೇಂದ್ರ ಮೋದಿ ಅವರ ಆಡಳಿತವೈಖರಿಯನ್ನು ಪ್ರಶಂಸಿಸುತ್ತಿದ್ದಾರೆ. ಅಲ್ಲದೆ, ಪಿಒಕೆ ಜನರು ಭಾರತಕ್ಕೆ ಸೇರಲು ಬಯಸುತ್ತಿರುವುದು ಮೋದಿ ಆಡಳಿತದ ಪರಿಣಾಮವಂತೆ! ಅಂಜುಮನ್ ಮಿನ್ಹಾಸ್-ಎ- ರಸೂಲ್ನ ಅಧ್ಯಕ್ಷ ಮೌಲಾನಾ ಸಯ್ಯದ್ ಅಥರ್ ದೆಹಲ್ವಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತ, ಪಿಒಕೆ ಜನರು ಕಷ್ಟದಲ್ಲಿ ಸಿಲುಕಿದಾಗ ಭಾರತೀಯರು ದೇವದೂತರಂತೆ ನೆರವಿಗೆ ಬಂದಿದ್ದಾರೆ. ನೆರೆ ಬಂದಾಗ, ಭೂಕಂಪ ಸಂಭವಿಸಿದಾಗ ಭಾರತೀಯರು ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ. ಹಾಗಾಗಿ, ನಾವು ಭಾರತಕ್ಕೆ ಸೇರಿದ್ದಲ್ಲಿ ಉತ್ತಮ ಬದುಕು ಕಂಡುಕೊಳ್ಳಬಹುದು ಎಂಬ ಆಶಾವಾದ ಮೂಡಿದೆ ಎಂದಿದ್ದಾರೆ.
‘ಪಿಒಕೆಯ ಜನರು ಮೋದಿ ಆಡಳಿತವೈಖರಿಯಿಂದ ಖುಷಿಯಾಗಿದ್ದಾರೆ. ಮೋದಿ ಜಮ್ಮು-ಕಾಶ್ಮೀರದಲ್ಲಿ ಉತ್ತಮ ಆಡಳಿತ-ಸುಧಾರಣೆ ತರಲು ಪ್ರಯತ್ನಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದ ಬಗ್ಗೆ ಅವರು ಹೊಂದಿರುವ ದೃಷ್ಟಿಕೋನದಿಂದ ಸಂತೋಷವಾಗಿದೆ. ಪಿಒಕೆಯ ಜನರಿಗೆ ನೀರು, ವಿದ್ಯುತ್, ಶಿಕ್ಷಣ, ಉದ್ಯೋಗ ಯಾವುದೂ ದೊರೆಯುತ್ತಿಲ್ಲ. ಹಾಗಾಗಿ, ಭಾರತಕ್ಕೆ ಸೇರಲು ಮನಸ್ಸು ಮಾಡಿದ್ದಾರೆ. ಅದಕ್ಕೆ ಪಾಕಿಸ್ತಾನ ದೌರ್ಜನ್ಯ ಎಸಗುತ್ತಿದೆ’ ಎಂದಿದ್ದಾರೆ. ಮಾತ್ರವಲ್ಲ, ಪಿಒಕೆಯಲ್ಲಿ ಜನಮತ ಸಂಗ್ರಹ ನಡೆಸಿದರೆ ಶೇಕಡ 99ರಷ್ಟು ಜನರು ಭಾರತಕ್ಕೆ ಸೇರಲು ಬಯಸುತ್ತಾರೆ ಎಂದರು. ಅಂಜುಮನ್ ಮಿನ್ಹಾಸ್-ಎ-ರಸೂಲ್ ಸಂಘಟನೆ ಜಮ್ಮು-ಕಾಶ್ಮೀರದಲ್ಲಿನ ಭಯೋತ್ಪಾದಕ ಕೃತ್ಯಗಳನ್ನು, ಪಾಕ್ ಕುತಂತ್ರಗಳನ್ನು ಖಂಡಿಸುತ್ತ ಬಂದಿದ್ದು, ಕಾನೂನು ಸುವ್ಯವಸ್ಥೆಗಾಗಿ ಆಗ್ರಹಿಸುತ್ತ ಬಂದಿದೆ ಎಂಬುದು ಗಮನಾರ್ಹ.
ಪಿಒಕೆ ತನ್ನ ಗಡಿಯನ್ನು ಅಫ್ಘಾನಿಸ್ತಾನದೊಂದಿಗೆ ಹಂಚಿಕೊಂಡಿದೆ. ಪಿಒಕೆ ಭಾರತದ ಭಾಗವಾದರೆ ಭಾರತವು ರಸ್ತೆ ನಿರ್ವಣದ ಮೂಲಕ ಅಪ್ಘಾನಿಸ್ತಾನದವರೆಗೆ ಸಂಪರ್ಕ ಕೊಂಡಿ ಸ್ಥಾಪಿಸಲು ಸಾಧ್ಯವಾಗಲಿದೆ. ಅಲ್ಲದೆ, ತಜಕೀಸ್ತಾನ್ಗೂ ಸಂಪರ್ಕ ಸುಲಭವಾಗಲಿದೆ.
ಚೀನಾ ಪಿಒಕೆಯಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಇಪಿಸಿ) ಯೋಜನೆ ಜಾರಿಗೆ ತರುತ್ತಿದೆ. ಹೀಗಾದಲ್ಲಿ ಚೀನಾ ಪಿಒಕೆಯಿಂದ ಭಾರತದ ನೌಕಾಸೇನೆ ಮೇಲೆ ಕಣ್ಣಿರಿಸಲಿದೆ. ಅರಬ್ಬಿ ಸಮುದ್ರದಲ್ಲಿ ಭಾರತದಲ್ಲಿನ ಪ್ರತಿಯೊಂದು ಚಟುವಟಿಕೆಗಳನ್ನು ಗಮನಿಸಲು ‘ಡ್ರಾ್ಯಗನ್ ರಾಷ್ಟ್ರ’ಕ್ಕೆ ಸಾಧ್ಯವಾಗಲಿದೆ. ಆದರೆ, ಪಿಒಕೆ ಭಾರತದ ಭಾಗವಾದರೆ ಚೀನಾ ಮತ್ತು ಪಾಕಿಸ್ತಾನದ ಈ ಷಡ್ಯಂತ್ರಗಳೆಲ್ಲ ವಿಫಲವಾಗಲಿವೆ.
ಮೊದಲನೆಯದಾಗಿ ರಾಜಾ ಹರಿ ಸಿಂಗ್ ಪೂರ್ಣ ಜಮ್ಮು-ಕಾಶ್ಮೀರವನ್ನು ಭಾರತದಲ್ಲಿ ವಿಲೀನ ಮಾಡಿದ್ದರು. ಈ ಕುರಿತಾದ ಅಧಿಕೃತ ದಾಖಲೆಗಳಲ್ಲಿ ರಾಜಾ ಹರಿ ಸಿಂಗ್ ಹಸ್ತಾಕ್ಷರವಿದೆ. ಭಾರತದ ಸಂಸತ್ತಿನ ಎರಡೂ ಸದನಗಳು (ರಾಜ್ಯಸಭೆ ಮತ್ತು ಲೋಕಸಭೆ) 1994ರ ಫೆಬ್ರವರಿ 22ರಂದು ಸರ್ವಸಮ್ಮತಿಯಿಂದ ಒಂದು ಪ್ರಸ್ತಾವವನ್ನು ಅಂಗೀಕರಿಸಿದ್ದು, ಅದರಲ್ಲಿ ‘ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಪಿಒಕೆ ಪ್ರದೇಶವನ್ನು ಪಾಕಿಸ್ತಾನ ಖಾಲಿ ಮಾಡಬೇಕು’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ ಇದೇ ಮಾತನ್ನು ಪುನರುಚ್ಚರಿಸಿದೆ.
ಜಮ್ಮು-ಕಾಶ್ಮೀರ ಪುನರ್ ವಿಂಗಡಣೆ ಮತ್ತು ಜಮ್ಮು-ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರವಾಗಿ, ಬಳಿಕ ರಾಷ್ಟ್ರಪತಿಗಳ ಅಂಕಿತದ ಬಳಿಕ ಕಾನೂನಾಗಿ ಬದಲಾಗಿದೆ. ಈ ಮಸೂದೆ ಮಂಡನೆ ವೇಳೆ ಗೃಹ ಸಚಿವ ಅಮಿತ್ ಷಾ ಸ್ಪಷ್ಟವಾಗಿ ಹೇಳಿದ್ದು, ‘ಜಮ್ಮು-ಕಾಶ್ಮೀರ ವಿಧಾನಸಭೆಯ 24 ಸ್ಥಾನಗಳನ್ನು ಪಿಒಕೆಗೆ ಮೀಸಲಿಡಲಾಗಿದೆ. ಏಕೆಂದರೆ. ಅದು ಭಾರತದ ಅವಿಭಾಜ್ಯ ಅಂಗ’. ಅಂದರೆ, ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಚುನಾವಣೆ ನಡೆಸುವ ತಯಾರಿ ಇರುವುದು ಸ್ಪಷ್ಟ.
ಚೀನಾ ಸಿಪಿಇಸಿ ಯೋಜನೆಯಡಿ ಈಗಾಗಲೇ ಈ ಭಾಗದಲ್ಲಿ ಭರ್ಜರಿ ಹೂಡಿಕೆಯನ್ನು ಮಾಡಿದೆ. ರಸ್ತೆಜಾಲ, ರೈಲು ಸಂಪರ್ಕ ಜಾಲ ನಿರ್ವಿುಸುತ್ತಿದೆ. ಇದನ್ನೆಲ್ಲ ವ್ಯರ್ಥವಾಗಲು ಅದು ಬಿಡುವುದಿಲ್ಲ. ಹೀಗಾಗಿ, ಪಿಒಕೆ ಭಾರತದ ಭಾಗವಾಗಲು ಚೀನಾ ಪ್ರಬಲ ಪ್ರತಿರೋಧ ಒಡ್ಡಲಿದೆ. ಪಾಕಿಸ್ತಾನ ಈಗಾಗಲೇ ಭಾರತದೊಂದಿಗೆ ಮೂರು ಯುದ್ಧಗಳನ್ನು ನಡೆಸಿದೆ ಮತ್ತು ಆ ಎಲ್ಲ ಯುದ್ಧಗಳಲ್ಲಿ ಪರಾಭವಗೊಂಡಿದೆ. ಆದರೆ, ಪಿಒಕೆಗಾಗಿ ಅದು ಇನ್ನೊಂದು ಯುದ್ಧ ಸಾರಿದರೂ ಆಶ್ಚರ್ಯ ಪಡಬೇಕಿಲ್ಲ. ಅಲ್ಲದೆ, ಪಿಒಕೆ ವಿಷಯದಲ್ಲಿ ಭಾರತದ ವಿರುದ್ಧ ಸಮರ ಸಾರಿದರೆ ತನಗೆ ಚೀನಾದ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ಪಾಕಿಸ್ತಾನಕ್ಕಿದೆ.
ಪಿಒಕೆಯಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಇಷ್ಟು ದಿನಗಳ ಕಾಲ ಪಾಕ್ ಇಲ್ಲಿನ ಜನರಿಗೆ ‘ಸ್ವಾತಂತ್ರ್ಯದ ಕನಸು ತೋರಿಸುತ್ತ ಅವರನ್ನು ಪ್ರಚೋದಿಸುತ್ತ ಬಂದಿದೆ. ಆದರೆ, ಜನರಿಗೆ ಈಗ ವಾಸ್ತವ ಅರ್ಥವಾಗುತ್ತಿದೆ. ಪಾಕಿಸ್ತಾನ ಎಂದಿಗೂ ತಮ್ಮ ಬಾಳನ್ನು ಬದಲಾಯಿಸುವುದಿಲ್ಲ. ಬದಲಿಗೆ ತಮ್ಮನ್ನು ಗಾಳವಾಗಿಸಿಕೊಂಡು ಭಯೋತ್ಪಾದನೆ, ಅಶಾಂತಿಯನ್ನು ಹರಡುತ್ತದೆ ಎಂಬ ಸಂಗತಿ ಮನದಟ್ಟಾಗುತ್ತಿದೆ. ಅದರ ಫಲವಾಗಿಯೇ ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿಭಟನೆ, ಹೋರಾಟಗಳು ಆಗಾಗ ನಡೆಯುತ್ತಲೇ ಇವೆ. ಆದರೆ, ಈ ಪರಿಸ್ಥಿತಿಯನ್ನು ಭಾರತ ಜಾಣತನದಿಂದ ನಿರ್ವಹಿಸಬೇಕು. ಪಿಒಕೆಯ ವಾಸ್ತವ ಚಿತ್ರಣವನ್ನು ಅಂತಾರಾಷ್ಟ್ರೀಯ ಸಮುದಾಯದೆದುರು ತೆರೆದಿಡಲು ಭಾರತ ಯಶಸ್ವಿಯಾದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು.