ವಾಯುನೆಲೆ ಮೇಲೆ ಭಾರತದ ದಾಳಿ ನಿಜ

pakistan pm
Published on

ಆಪರೇಷನ್ ಸಿಂಧೂರ ವೇಳೆ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದವು ಎಂಬುದನ್ನು ಈಗ ಸ್ವತಃ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ. ಪಾಕ್ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದರ ಕುರಿತು ಮಾಹಿತಿ ನೀಡಿದ್ದ ಭಾರತೀಯ ಸೇನಾ ಪಡೆಗಳು ಅದಕ್ಕೆ ಅಗತ್ಯ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದವು. ದಾಳಿ ನಡೆದು ಒಂದು ವಾರದ ಬಳಿಕ ಶೆಹಬಾಜ್ ಷರೀಫ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ಮೇ 9ರ ತಡರಾತ್ರಿ 2.30ರ ಸುಮಾರಿಗೆ ಜನರಲ್ ಆಸಿಫ್ ಮುನೀರ್ ನನಗೆ ಕರೆ ಮಾಡಿ ಭಾರತೀಯ ಸೇನೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ಒಂದು ಕ್ಷಿಪಣಿ ನೂರ್ ಖಾನ್ ವಾಯುನೆಲೆ ಮೇಲೆ ಬಿದ್ದಿದೆ, ಉಳಿದ ಸ್ಥಳಗಳಲ್ಲೂ ಕ್ಷಿಪಣಿ ದಾಳಿ ನಡೆದಿದೆ’ ಎಂದು ತಿಳಿಸಿದ್ದಾರೆ. ಈ ಮೂಲಕ ವಾಯುನೆಲೆಗಳ ಮೇಲೆ ದಾಳಿ ನಡೆದಿದ್ದನ್ನು ಸ್ವತಃ ಪಾಕ್ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ.

ಶೆಹಬಾಜ್ ಷರೀಪ್ ದಾಳಿನಡೆದಿದ್ದನ್ನು ಒಪ್ಪಿಕೊಂಡ ಬಳಿಕ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ‘ಪಾಕ್ ಪ್ರಧಾನಿ ತಮ್ಮ ವಾಯುನೆಲೆಗಳ ಮೇಲೆ ದಾಳಿ ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಭಾರತೀಯ ಸೇನಾಪಡೆಗಳು ನಡೆಸಿದ ದಾಳಿಗೆ ಬೆಚ್ಚಿ ಮಧ್ಯರಾತ್ರಿಯಲ್ಲಿ ಷರೀಫ್ ಎದ್ದಿದ್ದರು. ಇದು ಆಪರೇಷನ್ ಸಿಂಧೂರದ ನಿಖರತೆ, ಅಗಾಧತೆ ಮತ್ತು ಪಾಕ್​ನ ಯಾವುದೇ ಪ್ರದೇಶದ ಮೇಲೆ ದಾಳಿ ನಡೆಸುವ ಭಾರತದ ಸಾಮರ್ಥ್ಯವನ್ನು ತೋರುತ್ತದೆ’ ಎಂದು ತಿಳಿಸಿದ್ದಾರೆ. ಇಸ್ಲಮಾಬಾದ್ ಮತ್ತು ರಾವಲ್ಪಿಂಡಿ ನಡುವೆ ಆಯಕಟ್ಟಿನ ಜಾಗದಲ್ಲಿ ನೂರ್ ಖಾನ್ ಏರ್ ಬೇಸ್ ಇದೆ. ಇದು ಪಾಕಿಸ್ತಾನದ ವಾಯುಪಡೆಯ ಕಾರ್ಯಾಚರಣೆಯ ಮುಖ್ಯಕೇಂದ್ರ. 1971 ರ ಭಾರತ ಪಾಕಿಸ್ತಾನ ಯುದ್ಧದಲ್ಲೂ ಭಾರತೀಯ ಸೇನೆ ಈ ವಾಯುನೆಲೆಯ ಮೇಲೆ ದಾಳಿ ನಡೆಸಿತ್ತು. ಈ ಬಾರಿ ಆಪರೇಷನ್ ಸಿಂಧೂರದಲ್ಲಿ ಮೇ 9 ರಂದು ತಡರಾತ್ರಿ ನೂರ್ ಖಾನ್ ಏರ್ ಬೇಸ್, ಸಗೋಧಾ, ಜಕೋಬಾಬಾದ್, ಭೋಲಾರಿ, ಸ್ಕರ್ದು ಸೇರಿ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಭಾರತದ ದಾಳಿಗೆ ಬೆದರಿದ ಪಾಕಿಸ್ತಾನ ಮೇ 10ರಂದು ಬೆಳಗ್ಗೆ ಕದನ ವಿರಾಮಕ್ಕೆ ಮನವಿ ಮಾಡಿ ಡಿಜಿಎಂಒ ಮೂಲಕ ಮಾತುಕತೆ ನಡೆಸಿತ್ತು. ಆ ಬಳಿಕ ಮೇ 10ರ ಸಂಜೆ 5 ಗಂಟೆಗೆ ಕದನ ವಿರಾಮ ಜಾರಿಗೆ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net